ಸರ್ಕಾರ ಮತ್ತು ಇಲಾಖೆಯಿಂದ ವರ್ಗಾವಣೆಯ ಎಡವಟ್ಟಿನಿಂದಾಗಿ 6 ತಿಂಗಳ ಹಿಂದೆ ಮೃತಪಟ್ಟ ನಗರಾಭಿವೃದ್ಧಿ ಇಲಾಖೆಯ ಕಿರಿಯ ಇಂಜಿನಿಯರ್ ಓರ್ವರನ್ನು, ಜುಲೈ 9ರಂದು ಕೊಡಗಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಅಶೋಕ ಪುಟಪಾಕ್ ಎಂಬ ಅಧಿಕಾರಿಯನ್ನು ಜುಲೈ 9ರಂದು ಕೊಡಗಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ವಾಸ್ತವವಾಗಿ, ಅಶೋಕ ಪುಟಪಾಕ್ ಕಳೆದ ಜನವರಿ 12ರಂದು ಮೃತಪಟ್ಟಿದ್ದರು.
ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮಾಹಿತಿ ಇಲ್ಲದೆಯೇ ಎಡವಟ್ಟು ಮಾಡಿಕೊಂಡಿದ್ದು, ವರ್ಗಾವಣೆಯ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಲಬುರಗಿ ಜಿಲ್ಲೆಯ ಸೇಡಂ ಪುರಸಭೆಯಲ್ಲಿ ಕಿರಿಯ ಇಂಜಿನಿಯರ್ ಆಗಿ ಕೆಲಸ ಮಾಡ್ತಿದ್ದ ಅಶೋಕ್, ಜಿಲ್ಲೆಯ ಚಿತ್ತಾಪುರ ತಾಲೂಕಿನ ದಿಗ್ಗಾಂವ್ ಗ್ರಾಮದ ನಿವಾಸಿ. ಕಳೆದ ಜನವರಿಯಲ್ಲಿ ಮೃತಪಟ್ಟಿದ್ದರು. ಆದರೆ ಈ ಮಾಹಿತಿಯನ್ನು ಅವರು ಕೆಲಸ ಮಾಡುತ್ತಿದ್ದ ಕಚೇರಿಯ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ನೀಡಿರಲಿಲ್ಲ ಎಂದು ತಿಳಿದುಬಂದಿದೆ.
ಮೃತಪಟ್ಟ ಬಗ್ಗೆ ಮಾಹಿತಿ ಇಲ್ಲದ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಕಳೆದ ಜುಲೈ ಜುಲೈ 9ರಂದು ಕೊಡಗಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಇಲಾಖೆಯ ನೌಕರ ಮೃತಪಟ್ಟ ವಿಚಾರ ಗೊತ್ತಿಲ್ಲದೆ ವರ್ಗಾವಣೆ ಮಾಡಿದೆಯಾ ಅಥವಾ ಸಾಯುವ ಮುನ್ನ ಅಶೋಕ್ ಪುಟಪಾಕ್ ವರ್ಗಾವಣೆ ಬಯಸಿದ್ದರಾ ಎಂದು ಜಿಲ್ಲಾಡಳಿತವೇ ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕಷ್ಟೇ.
ಒಂದು ವೇಳೆ ಅವರು ಜೀವಂತ ಇದ್ದಾರೆಂದು ಕಳೆದ ಆರು ತಿಂಗಳಿಂದಲೂ ಅವರ ಖಾತೆಗೆ ಜಮೆ ಸಂಬಳ ಜಮೆ ಆಗುತ್ತಿತ್ತೇ ಎಂಬ ಪ್ರಶ್ನೆಗೆ ಇಲಾಖೆ ಇನ್ನೂ ಉತ್ತರಿಸಿಲ್ಲ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ವಿಧಾನಸಭಾ ಕ್ಷೇತ್ರದಲ್ಲಿ ಸಂಭವಿಸಿರುವ ಈ ಎಡವಟ್ಟು, ಇಲಾಖೆಗೂ ಸಚಿವರಿಗೂ ಇದೀಗ ಮುಜುಗರ ಸೃಷ್ಟಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಲಬುರಗಿ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, “ಮೃತಪಟ್ಟಿರುವ ಕಿರಿಯ ಇಂಜಿನಿಯರ್ ಅವರನ್ನು ವರ್ಗಾವಣೆ ಮಾಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ತರಿಸುತ್ತೇನೆ” ಎಂದು ತಿಳಿಸಿದ್ದಾರೆ.
