- ಬಡ ಕೂಲಿ ಕಾರ್ಮಿಕರಿಗೆ ಖಾಲಿ ಇರುವ ಸರ್ಕಾರಿ ಜಮೀನು ಗುರುತಿಸಿ ಮಂಜೂರು ಮಾಡಬೇಕು
- ನಿವೇಶನ ಹಂಚಿಕೆಯಾಗದ ಕಾರಣ ವಸತಿ ರಹಿತ ಕುಟುಂಬಗಳು ಬೀದಿಯಲ್ಲಿ ಬದುಕುವಂತಾಗಿದೆ
ಶ್ರಮಿಕ ವರ್ಗದ ಬಡ ಕೂಲಿ ಕಾರ್ಮಿಕರಿಗೆ ಖಾಲಿ ಇರುವ ಸರ್ಕಾರಿ ಜಮೀನು ಗುರುತಿಸಿ ಮಂಜೂರು ಮಾಡಬೇಕೆಂದು ಗ್ರಾಮೀಣ ಕೂಲಿಕಾರರ ಸಂಘಟನೆ (ಗ್ರಾಕೂಸ) ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಹರಪನಹಳ್ಳಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗೆ ಗ್ರಾಕೂಸ ಕಾರ್ಯಕರ್ತರು ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ಸುಮಾರು ವರ್ಷಗಳಿಂದ ಬಡ ಕೂಲಿಕಾರರ ವಸತಿಗಾಗಿ ಸರ್ಕಾರ ಭೂಮಿಯನ್ನು ಕಾಯ್ದಿರಿಸಿದ್ದು, ಆದರೆ ತಾ.ಪಂ. ಹಾಗೂ ಗ್ರಾ.ಪಂ. ಅಧಿಕಾರಿಗಳ ನಿರ್ಲಕ್ಷತನದಿಂದ ನಿವೇಶನ ಹಂಚಿಕೆ ಮಾಡದ ಕಾರಣ ವಸತಿ ರಹಿತ ಕುಟುಂಬಗಳಿಗೆ ಬೀದಿಯಲ್ಲಿ ಬದುಕುವಂತಾಗಿದೆ. ಸರಕಾರ ಮಂಜೂರಾತಿ ನೀಡಿದರೂ ತಾಲೂಕು ಆಡಳಿತ ನಿರ್ಲಕ್ಷ್ಯ ತೋರುತ್ತಿದೆ. ಕನಿಷ್ಠ ನಿವೇಶನ ನೀಡಿದರೆ ಗುಡಿಸಲನ್ನಾದರೂ ಕಟ್ಟಿಕೊಂಡು ಜೀವನ ಸಾಗಿಸಬಹುದಿತ್ತು. ಆದರೆ ಅಧಿಕಾರಿಗಳು, ಜನ ಪ್ರತಿನಿಧಿಗಳು ಹಂಚಿಕೆ ಮಾಡದಿರುವುದು ಅಧಿಕಾರಿಗಳ ಇಚ್ಚಾಶಕ್ತಿ ಕೊರತೆ ಎಂಬುದು ಎದ್ದು ಕಾಣುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
“ದಿನಗೂಲಿ ಮಾಡುವ ಹಲವು ಕುಟುಂಬಳಿಗೆ ನಿವೇಶನ ಇಲ್ಲದೆ ಪರದಾಡುವಂತಾಗಿದೆ. ನಿವೇಶನ ರಹಿತ ಕೆಲವು ಕುಟುಂಬಗಳು ಸೂರು ಇಲ್ಲದೆ ಅವಿಭಕ್ತ ಕುಟುಂಬಗಳಲ್ಲಿ, ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಇದರಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕೂಡಲೇ ನಿವೇಶನ ರಹಿತ ಕುಟುಂಬಗಳಿಗೆ ಸರಕಾರಿ ಜಮೀನು ಗುರುತಿಸಿ, ನಿವೇಶನ ಹಂಚಿಕೆ ಮಾಡಬೇಕೆಂದು” ಒತ್ತಾಯಿಸಿದ್ದರು.
“ಹರಪನಹಳ್ಳಿ ತಾಲೂಕಿನ ಸಿಂಗ್ರಿಹಳ್ಳಿ, ಕಂಚಿಕೆರೆ, ಹಳ್ಳಿಕೇರಿ, ಸಾಸ್ವಿಹಳ್ಳಿ ಜಿ.ಪಿ., ಕುಣೇ ಮಾದಿಹಳ್ಳಿ, ಮೈದೂರು, ಗೌರಿಪುರ, ತೊಗರಿಕಟ್ಟಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ವಾಸಿಸುವ ನಿವೇಶನ ವಂಚಿತರಿಗೆ ಜಾಗ ಹಂಚಿಕೆ ಮಾಡಬೇಕು” ಎಂದು ಆಗ್ರಹಿಸಿದ್ದರು.
ಈ ಸುದ್ದಿ ಓದಿದ್ದೀರಾ? ಕಲ್ಯಾಣ ಕರ್ನಾಟಕ | ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ನೇರ ಭರ್ತಿಗೆ ಸೂಚನೆ: ಶರಣಪ್ರಕಾಶ್ ಪಾಟೀಲ
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಸಂಚಾಲಕ ಕೋಗಳಿಮಲ್ಲೇಶ್ , ಜಿಲ್ಲಾ ಕಾರ್ಯಕರ್ತೆ ಭಾಗ್ಯ , ತಾಲೂಕು ಕಾರ್ಯಕರ್ತರಾದ ಶ್ರುತಿ , ನೀಲಮ್ಮ , ಯಶೋಧ , ಪಾರ್ವತಿ , ಸುಮಾ, ಹಾಲಮ್ಮ, ರೇಣುಕಾ, ಕವಿತಾ ,ಹನುಮಕ್ಕ ,ಸೋಬಮ್ಮ, ಗೀತಾ, ರತ್ನಮ್ಮ ಇದ್ದರು.