ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳ ಸಂಘ ಎರಡನೇ ಹಂತದ ಮುಷ್ಕರ ಆರಂಭಿಸಿದ್ದು ರಾಜ್ಯ ಸಂಘದ ಆದೇಶದಂತೆ ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ್ದಾರೆ.
ಕಳೆದ ನಾಲ್ಕು ತಿಂಗಳ ಹಿಂದೆ ಮೊದಲ ಹಂತದ ಮುಷ್ಕರ ನಡೆಸಿದ್ದ ಸಂಘ ಎಂಟು ದಿನದಲ್ಲಿ ಸರ್ಕಾರ ನಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡಿ ಮುಷ್ಕರ ತಾತ್ಕಾಲಿಕ ಅಂತ್ಯಗೊಳಿಸಲಾಗಿತ್ತು. ನಂತರ ನಾಲ್ಕು ತಿಂಗಳು ಕಳೆದರೂ ಯಾವುದೂ ನೆರವೇರದ ಹಿನ್ನಲೆ ಎರಡನೇ ಹಂತದಲ್ಲಿ ಮುಷ್ಕರ ಆರಂಭಿಸಿದ್ದು ನಮ್ಮ 30 ದಿನಗಳ ರಜೆಯ ಜೊತೆ ಧರಣಿ ನಡೆಸಿದ್ದಾರೆ.
ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲ್ಲೂಕು ಅಧ್ಯಕ್ಷೆ ಪಿ.ಎಸ್. ಸುಮತಿ ಮಾತನಾಡಿ ಮೂಲಭೂತ ಸೌಕರ್ಯ ನೀಡದೆ ನಮ್ಮನ್ನು ದುಡಿಸಿಕೊಳ್ಳುವ ಸರ್ಕಾರ ಸುಸಜ್ಜಿತ ಕಚೇರಿ, ಗುಣಮಟ್ಟದ ಮೊಬೈಲ್, ಸಿಯುಜಿ ಸಿಮ್, ಡೇಟಾ, ಲ್ಯಾಪ್ ಟಾಪ್, ಸ್ಕ್ಯಾನರ್, ಪ್ರಿಂಟರ್ ಹೀಗೆ ಯಾವುದೇ ಅನುಕೂಲ ಮಾಡಿಕೊಟ್ಟಿಲ್ಲ. ಆದರೆ ಕಂದಾಯ ಇಲಾಖೆಯ 21 ಆ್ಯಪ್ ಬಳಸಿ ಸಾರ್ವಜನಿಕ ಕೆಲಸ ಮಾಡಬೇಕಿದೆ. ಈ ರೀತಿ ದುಡಿಸಿಕೊಂಡರೂ ತಾಂತ್ರಿಕ ಕೆಲಸದ ಶ್ರೇಣಿಯಲ್ಲಿ ವೇತನ ನೀಡಿಲ್ಲ. ಯಾವುದೇ ಪದೋನ್ನತಿ ನೀಡಿಲ್ಲ. ಗ್ರಾಮೀಣ ಜನರ ಮಧ್ಯೆ ಕೆಲಸ ಮಾಡುವ ಗ್ರಾಮ ಆಡಳಿತ ಅಧಿಕಾರಿಗಳ ಭದ್ರತೆಗೆ ಸರ್ಕಾರ ಯಾವ ಕಾಳಜಿ ತೋರಿಲ್ಲ. ಪತಿ ಪತ್ನಿಯ ವರ್ಗಾವಣೆ ಕೂಡಾ ಮಾಡುತ್ತಿಲ್ಲ ಎಂದು ತಮ್ಮ ಕಷ್ಟದ ಅಳಲು ತೋಡಿಕೊಂಡರು.
ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಜಿ.ಎಸ್.ಅಭಿಷೇಕ್ ಮಾತನಾಡಿ ಒತ್ತಡ ಕೆಲಸ ಮಾಡುವ ಗ್ರಾಮ ಆಡಳಿತ ಅಧಿಕಾರಿಗಳನ್ನು ಡಿ ದರ್ಜೆಗಿಂತ ಕೀಳಾಗಿ ನೋಡಲಾಗುತ್ತಿದೆ. ಯಾವುದೇ ಒತ್ತಡ ಕೆಲಸವನ್ನು ನಮ್ಮ ಹೆಗಲಿಗೆ ಹೊರಿಸಿ ಸಾರ್ವಜನಿಕರ ಜೊತೆ ಸಂಘರ್ಷಕ್ಕೆ ಇಳಿಯುವ ಹಂತ ತಲುಪಿದ್ದೇವೆ. ಈ ಸಮಯ ನಮ್ಮಗಳ ಮೇಲೆ ನಡೆಯುವ ದೈಹಿಕ ಹಲ್ಲೆಗೆ ಯಾರು ಹೊಣೆ. ಈ ಜೊತೆಗೆ ಸೂಕ್ತ ಸಲಕರಣೆ ಒದಗಿಸದೇ ಕೆಲಸವನ್ನು ಒತ್ತಡದಲ್ಲಿ ಮಾಡುವಂತೆ ಮಾಡಿ ಆರೋಗ್ಯ ಕಳೆದುಕೊಳ್ಳುತ್ತಿರುವ ಗ್ರಾಮ ಲೆಕ್ಕಾಧಿಕಾರಿಗಳ ಬಗ್ಗೆ ಸರ್ಕಾರ ಗಮನ ಹರಿಸಬೇಕು. 21 ಆ್ಯಪ್ ಕೆಲಸದ ಮಧ್ಯೆ ನಡೆಯುವ ಜಮಾಬಂದಿ, ದಪ್ತರ್, ಪ್ರೋಟೋಕಾಲ್, ಬೆಳೆ ಹಾನಿ ಸಮೀಕ್ಷೆ ಹೀಗೆ ಹಲವು ಕೆಲಸ ಕಡಿತ ಗೊಳಿಸಿ ಒತ್ತಡ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಉಪಾಧ್ಯಕ್ಷರಾದ ತಾರಚಂದ್, ಅಪ್ಸರ, ಗೌರವಾಧ್ಯಕ್ಷ ಶಿವಕುಮಾರಸ್ವಾಮಿ, ಸಂಘಟನಾ ಕಾರ್ಯದರ್ಶಿಗಳಾದ ಆನಂದ್, ಶಶಿಕುಮಾರ್, ಪ್ರಸನ್ನ ಸೇರಿದಂತೆ ತಾಲ್ಲೂಕಿನ 50 ಗ್ರಾಮ ಆಡಳಿತ ಅಧಿಕಾರಿಗಳು ಹಾಜರಿದ್ದರು.