ಸ್ವಂತ ಅಣ್ಣ ಮತ್ತು ಅಣ್ಣನ ಮಗನನ್ನು ಒಡಹುಟ್ಟಿದ ತಮ್ಮನೇ ಪಿಸ್ತೂಲ್ ಮತ್ತು ಮಚ್ಚಿನಿಂದ ಹೊಡೆದು ಕೊಂದಿರುವ ಹೃದಯ ವಿದ್ರಾವಕ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮದಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ನಡೆದಿದೆ.
ತಾಲೂಕಿನ ಹಂಪಸಂದ್ರ ಗ್ರಾಪಂ ಮಾಜಿ ಸದಸ್ಯ ನಜೀರ್ ಅಹಮದ್(60) ಚಿಕ್ಕಪ್ಪನಿಂದ ಗುಂಡೇಟು ತಿಂದು ಕೊಲೆಯಾದರೆ, ಆರೋಪಿಯ ಅಣ್ಣ ಮೆಹಬೂಬ್(80) ಸ್ವಂತ ತಮ್ಮನಿಂದ ಮಚ್ಚೇಟು ತಿಂದು ಕೊಲೆಯಾಗಿದ್ದಾರೆ. ಮಹಮದ್ ಬಷೀರ್(65) ಕೊಲೆ ಮಾಡಿದ ಆರೋಪಿ ಚಿಕ್ಕಪ್ಪ.
ಸೌದಿಯಲ್ಲಿ ವಾಸವಾಗಿದ್ದ ಬಷೀರ್, ಇತ್ತೀಚೆಗಷ್ಟೇ ಊರಿಗೆ ಬಂದಿದ್ದರು. ನಜೀರ್ ಅಹಮದ್ ಬುಧವಾರ ಬೆಳಗ್ಗೆ 5 ಗಂಟೆಯ ಸಮಯದಲ್ಲಿ ಮಸೀದಿಗೆ ಪ್ರಾರ್ಥನೆ ಸಲ್ಲಿಸಲು ಹೋಗುತ್ತಿದ್ದ ವೇಳೆ, ರಸ್ತೆಯಲ್ಲಿ ಹೊಂಚು ಹಾಕಿ ಕೂತಿದ್ದ ಚಿಕ್ಕಪ್ಪ ಮಹಮ್ಮದ್ ಬಷೀರ್ ಮೊದಲಿಗೆ ಮಚ್ಚಿನಿಂದ ಹಲ್ಲೆ ನಡೆಸಿದ್ದು, ನಂತರ ತನ್ನ ಬಳಿಯಿದ್ದ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾನೆ. ಗುಂಡೇಟು ಬಿದ್ದ ಕೂಡಲೇ ನಜೀರ್ ಅಹಮದ್ ಸ್ಥಳದಲ್ಲೇ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.
ಇದಾದ ನಂತರ ಅಲ್ಲೇ ಸಮೀಪದಲ್ಲಿದ್ದ ಅಣ್ಣ ಮೆಹಬೂಬ್(80) ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಮೆಹಬೂಬ್ ಅವರನ್ನು ಸ್ಥಳೀಯರು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಮೆಹಬೂಬ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕೊಲೆ ಆರೋಪಿ ಮಹಮ್ಮದ್ ಬಷೀರ್ ತನ್ನ ಹೆಂಡತಿಯನ್ನೂ ಕೊಲೆ ಮಾಡಲು ಯತ್ನಿಸಿದ್ದ ಎನ್ನಲಾಗಿದ್ದು, ಮಾಹಿತಿ ತಿಳಿದ ಗುಡಿಬಂಡೆ ಪೊಲೀಸರು ಆರೋಪಿಯನ್ನು ಬಂಧಿಸಿ, ಕೊಲೆಗೆ ಬಳಸಿದ್ದ ಪಿಸ್ತೂಲ್ ಹಾಗೂ ಮಚ್ಚನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ದೇವನಹಳ್ಳಿ ಕೆಐಎಡಿಬಿ ಭೂಸ್ವಾಧೀನ: ರೈತರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವರೇ ಸಿದ್ದರಾಮಯ್ಯ?
ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸೆ, ಎ.ಎಸ್‌ಪಿ ಖಾಸಿಂ, ಡಿ.ವೈ.ಎಸ್.ಪಿ. ಶಿವಕುಮಾರ್, ಸರ್ಕಲ್ ಇನ್ಸ್‌ಪೆಕ್ಟರ್ ನಯಾಝ್ ಬೇಗ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅನೈತಿಕ ಸಂಬಂಧ ಮತ್ತು ಜಮೀನು ವಿವಾದದ ಹಿನ್ನೆಲೆ ಕೊಲೆ ನಡೆದಿದೆ ಎಂದು ಶಂಕಿಸಲಾಗಿದ್ದು, ಪೊಲೀಸರ ತನಿಖೆಯ ಬಳಿಕವಷ್ಟೇ ಕೊಲೆಗೆ ನಿಖರ ಕಾರಣ ತಿಳಿದುಬರಲಿದೆ.
