- ಅಪಘಾತದ ಹೆಸರಿನಲ್ಲಿ ಭಿಕ್ಷುಕನನ್ನು ಕೊಂದಿದ್ದ ದಂಪತಿ: ಈಗ ಪೊಲೀಸರ ಅತಿಥಿ!
- ಹಾಸನ ಜಿಲ್ಲೆಯ ಗಂಡಸಿ ಪೊಲೀಸರ ಚಾಣಾಕ್ಷತನಕ್ಕೆ ಬೆಚ್ಚಿಬಿದ್ದ ಖತರ್ನಾಕ್ ದಂಪತಿ
ಮಾಡಿದ್ದ ಸಾಲವನ್ನು ತೀರಿಸಲು ಏನೂ ತೋಚದಾದಾಗ ದಂಪತಿಗಳಿಬ್ಬರು ಜೀವವಿಮಾ ಸಂಸ್ಥೆಯಿಂದ ಒಂದು ಕೋಟಿ ರೂ. ಪರಿಹಾರದ ಹಣ ಪೀಕಲು ಮಾಡಿದ ‘ಖತರ್ನಾಕ್ ಮರ್ಡರ್’ ಯೋಜನೆಯ ಸುದ್ದಿ ಇದು. ಘಟನೆ ನಡೆದಿರುವುದು ಹಾಸನ ಜಿಲ್ಲೆಯ ಗಂಡಸಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ. ಪೊಲೀಸರ ಚಾಣಾಕ್ಷತನಕ್ಕೆ ಬೆಚ್ಚಿಬಿದ್ದ ಖತರ್ನಾಕ್ ದಂಪತಿ ಈಗ ಜೈಲಲ್ಲಿದ್ದಾರೆ.
ಹೌದು. ಜೀವವಿಮಾ ಸಂಸ್ಥೆಯಿಂದ ಒಂದು ಕೋಟಿ ರೂ. ಪರಿಹಾರದ ಹಣ ಪೀಕಲು ಗಂಡನ ತದ್ರೂಪಿಯಂತೇ ಇದ್ದ ಅಮಾಯಕ ಭಿಕ್ಷುಕನೋರ್ವನನ್ನು ಕೊಂದು ಅಪಘಾತದಲ್ಲಿ ಮೃತಪಟ್ಟಿರುವಂತೆ ತನಿಖೆಯ ಹಾದಿ ತಪ್ಪಿಸಿದ್ದ ಖತರ್ನಾಕ್ ಆರೋಪಿ ದಂಪತಿಯನ್ನು ಹಾಸನ ಜಿಲ್ಲೆಯ ಗಂಡಸಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಹೊಸಕೋಟೆ ತಾಲೂಕಿನ ಚಿಕ್ಕಕೋಲಿಗ ಗ್ರಾಮದ ಮುನಿಶ್ವಾಮಿಗೌಡ ಹಾಗೂ ಶಿಲ್ಪಾ ರಾಣಿ ಬಂಧಿತ ದಂಪತಿ. ಅಮಾಯಕ ಭಿಕ್ಷುಕನ ಹತ್ಯೆ ಘಟನೆ ನಡೆದು, ಸುಮಾರು ಹತ್ತು ದಿನಗಳ ನಂತರ ಪ್ರಕರಣ ಬಯಲಾಗಿದ್ದು, ಆತನ ಗುರುತು ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಭಿಕ್ಷುಕನಿಗೆ ಅಪಘಾತ ಮಾಡಿ ಕೊಂದಿದ್ದ ದಂಪತಿ: ಪೊಲೀಸರಿಗೆ ಸಿಕ್ಕಿದ್ದು ಹೇಗೆ?
ಕಳೆದ ಆಗಸ್ಟ್ 12ರಂದು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಗೊಲ್ಲರಹೊಸಳ್ಳಿ ಗೇಟ್ ಬಳಿ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಅದೇ ಸ್ಥಳದಲ್ಲಿ ಪಂಕ್ಚರ್ ಆಗಿದ್ದ ಕಾರು ಹಾಗೂ ಒಂದು ಲಾರಿ ಕೂಡ ಸಿಕ್ಕಿದ್ದವು. ಪ್ರಾಥಮಿಕವಾಗಿ ಇದು ಮೇಲ್ನೋಟಕ್ಕೆ ಪಂಕ್ಚರ್ ಆಗಿದ್ದ ಕಾರಿನ ಟೈರ್ ಬದಲಿಸುತ್ತಿದ್ದ ವ್ಯಕ್ತಿಯ ಮೇಲೆ ಲಾರಿ ಹರಿದು ಮೃತಪಟ್ಟಿರುವಂತೆ ಕಾಣಿಸುತ್ತಿತ್ತು.

ಅಪರಿಚಿತ ಮೃತದೇಹವನ್ನು ಹಾಸನ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದ ಗಂಡಸಿ ಠಾಣೆಯ ಪೊಲೀಸರು, ಗುರುತು ಪತ್ತೆಗೆ ಮುಂದಾಗಿದ್ದರು. ಕಾರಿನ ನಂಬರ್ ಪ್ಲೇಟ್ ಆಧರಿಸಿ ಪೊಲೀಸರು ಚಾಲಕನ ವಿವರ ಕಲೆ ಹಾಕಿದ್ದರು. ಆ ಬಳಿಕ ಆ.13 ರಂದು ಹಾಸನ ಜಿಲ್ಲಾಸ್ಪತ್ರೆಗೆ ಬಂದಿದ್ದ ಹೊಸಕೋಟೆಯ ಶಿಲ್ಪಾ ರಾಣಿ ಈ ಮೃತದೇಹ ನನ್ನ ಪತಿ ಮುನಿಶ್ವಾಮಿ ಗೌಡರದ್ದು ಎಂದು ಪೊಲೀಸರ ಮುಂದೆ ಗುರುತಿಸಿದ್ದಾರೆ.
ಗುರುತು ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕೊಂಡೊಯ್ಯಲು ಅನುಮತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶಿಲ್ಪಾ ರಾಣಿ ಆ.13ರಂದೇ ಹೊಸಕೋಟೆ ತಾಲೂಕಿನ ಚಿಕ್ಕಕೋಲಿಗ ಗ್ರಾಮದಲ್ಲಿ ಅಂತ್ಯಸಂಸ್ಕಾರ ಕೂಡ ನಡೆಸಿದ್ದಾರೆ.
ಈ ನಡುವೆ ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದ ಗಂಡಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರಿಗೆ ಅನುಮಾನ ಶುರುವಾಗಿದೆ. ಇದಕ್ಕೆ ಕಾರಣವಾದದ್ದು ಮೃತ ವ್ಯಕ್ತಿಯ ಕುತ್ತಿಗೆಯಲ್ಲಿ ಗಾಯದ ಗುರುತು ಇದ್ದಿದ್ದು. ಈ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ಅನುಮಾನಗೊಂಡ ಪೊಲೀಸರು, ಸುದ್ದಿ ಮಾಡದೆಯೇ ತನಿಖೆ ಆರಂಭಿಸಿದ್ದರು.

ಅಲ್ಲದೇ, ಪ್ರಕರಣದ ಬಗ್ಗೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೀತಾ ಅವರಿಗೆ ಮಾಹಿತಿ ನೀಡಿದ್ದ ಗಂಡಸಿ ಠಾಣೆ ಪೊಲೀಸರು, ತಮ್ಮ ಅನುಮಾನಗಳನ್ನು ತಿಳಿಸಿ, ತನಿಖೆ ನಡೆಸಿದ್ದಾರೆ. ತನಿಖೆ ಕೈಗೆತ್ತಿಕೊಂಡಿದ್ದ ಅರಸೀಕೆರೆ ವೃತ್ತ ನಿರೀಕ್ಷಕರಿಗೆ ತನಿಖೆಯ ವೇಳೆ ದಂಪತಿಯ ಖತರ್ನಾಕ್ ಯೋಜನೆ ಬೆಳಕಿಗೆ ಬಂದಿದೆ.
ಗಂಡಸಿ ಪೊಲೀಸರ ಚಾಣಾಕ್ಷತನ
ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ ಎಮ್‌ಎಫ್‌ಆರ್ ಟೈರ್ ಅಂಗಡಿ ಇಟ್ಟುಕೊಂಡಿದ್ದ ಮುನಿಶ್ವಾಮಿಗೌಡ, ವಿಪರೀತ ಸಾಲದಲ್ಲಿ ಮುಳುಗಿ ಹೋಗಿದ್ದ. ಇದರಿಂದ ಪಾರಾಗಲು ದಾರಿ ಕಾಣದೆ ಒದ್ದಾಡುತ್ತಿದ್ದ ಆತ, ತನ್ನ ಮರಣದ ಬಳಿಕ ದೊರೆಯುವ ಕೋಟಿ ರೂಪಾಯಿ ಜೀವವಿಮೆ ಹಣವನ್ನು ಬದುಕಿದ್ದಾಗಲೇ ಲಪಟಾಯಿಸಲು ಪತ್ನಿ ಜತೆಗೂಡಿ ತಂತ್ರ ರೂಪಿಸಿದ್ದ ಎಂದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ತಮ್ಮ ಯೋಜನೆಯ ಭಾಗವಾಗಿ ಭಿಕ್ಷುಕನೊಬ್ಬನನ್ನು ಮಾತನಾಡಿಸಿ ವಿಶ್ವಾಸಕ್ಕೆ ಪಡೆದಿದ್ದ ಮುನಿಶ್ವಾಮಿಗೌಡ, ತನ್ನೊಂದಿಗೆ ಕಾರಿನಲ್ಲಿ ಭಿಕ್ಷುಕನನ್ನು ಕೂರಿಸಿಕೊಂಡು ಪ್ರಯಾಣ ಆರಂಭಿಸಿದ್ದ. ಮಾರ್ಗಮಧ್ಯ ಗೊಲ್ಲರ ಹೊಸಳ್ಳಿ ಗೇಟ್ ಬಳಿ ಕಾರಿನ ಚಕ್ರ ಪಂಕ್ಚರ್ ಆಗಿದ್ದು, ಚಕ್ರ ಬದಲಿಸುವಂತೆ ಭಿಕ್ಷುಕನಿಗೆ ಹೇಳಿದ್ದ.

ಅದರಂತೆ ಆತ ಪಂಕ್ಚರ್ ಆದ ಚಕ್ರ ಬಿಚ್ಚಲು ಕುಳಿತಿದ್ದಾಗ ಆತನ ಕುತ್ತಿಗೆಗೆ ಚೈನ್ ಹಾಕಿ ಎಳೆದು ರಸ್ತೆಗೆ ಬೀಳಿಸಿದ್ದ. ಆಗ ಆತನ ಸಂಚಿನಂತೆ ಹಿಂಬಾಲಿಸಿಕೊಂಡು ಬಂದಿದ್ದ ಲಾರಿ ಚಾಲಕ, ಲಾರಿಯನ್ನು ಭಿಕ್ಷುಕನ ಮೇಲೆ ಹರಿಸಿ ಕೊಲೆಗೈದಿದ್ದ. ನಂತರ ಖಚಿತಪಡಿಸಿಕೊಳ್ಳಲು ರಿವರ್ಸ್ ಬಂದು, ಮತ್ತೆ ಭಿಕ್ಷುಕನ ಮೇಲೆ ಲಾರಿಯ ಚಾಲಕ ಲಾರಿ ಚಲಾಯಿಸಿ, ಕೊಂದಿದ್ದಾನೆ.
ಘಟನೆಯ ಬಳಿಕ ಲಾರಿ, ಕಾರುಗಳನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದ ಲಾರಿ ಚಾಲಕ ಹಾಗೂ ಮುನಿಶ್ವಾಮಿಗೌಡ ಅಜ್ಞಾತ ಸ್ಥಳದಲ್ಲಿ ತಲೆಮರೆಸಿಕೊಂಡಿದ್ದರು.
ಈ ನಡುವೆ, ಮುನಿಶ್ವಾಮಿಗೌಡನ ಸಂಬಂಧಿಕರಾದ ಶಿಡ್ಲಘಟ್ಟ ಸಿಪಿಐ ಶ್ರೀನಿವಾಸ್ ಕೂಡ, ಮುನಿಶ್ವಾಮಿಗೌಡ ಸತ್ತಿದ್ದಾನೆ ಎಂದು ಎಲ್ಲರಂತೆ ನಂಬಿ ಸಮಾಧಿಗೆ ಹೂವಿನ ಹಾರ ಹಾಕಿ ಬಂದಿದ್ದರು. ಆದರೆ ಅಜ್ಞಾತ ಸ್ಥಳದಲ್ಲಿದ್ದ ಮುನಿಶ್ವಾಮಿಗೌಡನಿಗೆ ಹೊರಗೆ ಏನು ನಡೆಯುತ್ತಿದೆ ಎಂದು ಗೊತ್ತಾಗದೆ ಕಂಗಾಲಾಗಿದ್ದ. ಪಾಪಪ್ರಜ್ಞೆಯಿಂದ ಅಸ್ವಸ್ಥಗೊಂಡು ಒತ್ತಡ ತಡೆಯಲಾರದೇ ಸಂಬಂಧಿಕ ಸಿಪಿಐ ಶ್ರೀನಿವಾಸ್ ಅವರ ಎದುರು ಹಾಜರಾಗಿದ್ದಾನೆ.

ಮೃತಪಟ್ಟಿದ್ದ ಸಂಬಂಧಿ ಮುನಿಶ್ವಾಮಿಗೌಡ ಜೀವಂತವಾಗಿರುವುದನ್ನು ಕಂಡು ಸಿಪಿಐ ಅಚ್ಚರಿಗೊಂಡಿದ್ದಾರೆ. ಅವರಿಗೂ ಸುಳ್ಳು ಹೇಳಿದ್ದ ಆರೋಪಿ, ತಾನು ಅಪಘಾತದಲ್ಲಿ ಕಾರು ಗುದ್ದಿದ್ದೆ. ಆತ ಮೃತಪಟ್ಟಿದ್ದಾನೆ ಎಂದು ಹೇಳಿದ್ದ. ಆತನ ಮಾತಿನಿಂದ ಅನುಮಾನಗೊಂಡ ಅವರು ಆತನನ್ನು ಗಂಡಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದರು.
ಅತ್ತ ಪತಿಯ ಸಾವಿನ ದುಃಖದಲ್ಲಿರುವಂತೆ ನಟಿಸುತ್ತಿದ್ದ ಶಿಲ್ಪಾ ರಾಣಿ, ಅದುವರೆಗೂ ಪೊಲೀಸರ ತನಿಖೆಗೆ ಸಹಕಾರ ನೀಡಿರಲಿಲ್ಲ. ಈ ನಡುವೆ ಚಾಣಾಕ್ಷತನ ಮೆರೆದಿದ್ದ ಗಂಡಸಿ ಪೊಲೀಸರು, ಮುನಿಶ್ವಾಮಿಗೌಡ ತಮ್ಮ ವಶಕ್ಕೆ ಸಿಕ್ಕಿರುವ ವಿಷಯ ತಿಳಿಸದೇ ವಿಚಾರಣೆ ಮುಂದುವರಿಸಿದ್ದಾರೆ. ಈ ನಡುವೆ ಕೂಡ ಶಿಲ್ಪಾ ರಾಣಿ ನಾಟಕ ಮುಂದುವರಿಸಿದ್ದಾಳೆ. ತಕ್ಷಣ ಪೊಲೀಸರು ಆಕೆಯ ಪತಿಯನ್ನು ಕರೆ ತಂದು, ಆಕೆಯ ಮುಂದೆ ನಿಲ್ಲಿಸಿದಾಗ ಕಕ್ಕಾಬಿಕ್ಕಿಯಾಗಿ, ಎಲ್ಲ ಸತ್ಯವನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾಳೆ. ದಂಪತಿಗೆ ಎರಡು ಮಕ್ಕಳಿದ್ದು, ಅವರೀಗ ತಬ್ಬಲಿಗಳಾಗಿದ್ದಾರೆ.
ಇದನ್ನು ಓದಿದ್ದೀರಾ? ಉಡುಪಿ | ಅಮಲು ಪದಾರ್ಥ ನೀಡಿ ಯುವತಿಯ ಅತ್ಯಾಚಾರ ಆರೋಪ: ಇಬ್ಬರ ಬಂಧನ
ಸದ್ಯ ಗಂಡಸಿ ಪೊಲೀಸರು ಆರೋಪಿಗಳಿಬ್ಬರನ್ನೂ ಬಂಧಿಸಿದ್ದಾರೆ. ದಂಪತಿಯ ಸಂಚಿಗೆ ಬಲಿಯಾದ ಅಮಾಯಕ ಭಿಕ್ಷುಕನ ಗುರುತು ಇನ್ನೂ ಪತ್ತೆಯಾಗಬೇಕಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಲಾರಿ ಹಾಗೂ ಕಾರನ್ನು ವಶಕ್ಕೆ ಪಡೆಯಲಾಗಿದೆ. ಸಂಚಿನಲ್ಲಿ ಭಾಗಿಯಾಗಿರುವ ಲಾರಿ ಚಾಲಕನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

