ಸಕಲೇಶಪುರ ತಾಲೂಕಿನಲ್ಲಿ ಮತದಾರರ ಗುರುತಿನ ಚೀಟಿ ಹಾಗೂ ಇತರೆ ಕಾರ್ಡ್‌ಗಳನ್ನು ಸುಟ್ಟುಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಸ್ಥಳಕ್ಕೆ ಉಪವಿಭಾಗಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಗೆ ಆದೇಶಿಸಿದ್ದಾರೆ.
ಸ್ಥಳ ಪರಿಶೀಲನೆ ನಡೆಸಿದ ಉಪವಿಭಾಗಾಧಿಕಾರಿ
ಅಕ್ಟೋಬರ್ 13ರಂದು ನಡೆದಿದ್ದ ಈ ಘಟನೆಯ ಸ್ಥಳಕ್ಕೆ ಅಕ್ಟೋಬರ್ 15ರಂದು ಸಕಲೇಶಪುರ ಉಪವಿಭಾಧಿಕಾರಿ (ಎಸಿ) ಹುಲ್ಲುಮನಿ ತಿಮ್ಮಣ್ಣ ಅವರು ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದರು.
ಹೊರ ಜಿಲ್ಲೆಗಳ ದಾಖಲೆಗಳು ಪತ್ತೆ ಪರಿಶೀಲನೆ ವೇಳೆ ಯಾದಗಿರಿ, ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಹಾಗೂ ಹೊರರಾಜ್ಯಕ್ಕೆ ಸೇರಿದ ಸುಮಾರು 26 ಮತದಾರರ ಗುರುತಿನ ಚೀಟಿಗಳು ಲಭ್ಯವಾಗಿವೆ. ಇವು ಸಕಲೇಶಪುರ ತಾಲ್ಲೂಕಿನ ದಾಖಲೆಗಳಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಇದಲ್ಲದೆ 30ರಿಂದ 40 ಆಧಾರ್ ಕಾರ್ಡ್‌ಗಳು ಹಾಗೂ ಪಾನ್ ಕಾರ್ಡ್‌ಗಳ ಅರ್ಧ ಸುಟ್ಟ ಅವಶೇಷಗಳು ಸಿಕ್ಕಿದ್ದು, ಇವೆಲ್ಲವನ್ನೂ ಪೋಲಿಸ್ ವಶಕ್ಕೆ ನೀಡಲಾಗಿದೆ. ಎಫ್‌ಐಆರ್ ದಾಖಲಿಸಲು ಸೂಚನೆ ಸಿಕ್ಕಿರುವ ಗುರುತಿನ ಚೀಟಿಗಳು ಈ ಭಾಗದಲ್ಲಿ ಕೆಲಸ ಮಾಡುತ್ತಿರುವ ವಲಸೆ ಕಾರ್ಮಿಕರದ್ದಾಗಿರಬಹುದು ಎಂದು ಶಂಕಿಸಲಾಗಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಎಲೆಕ್ಷನ್ ಶಿರಸ್ತೆದಾರ್ ನೀಡುವ ದೂರಿನನ್ವಯ ಪೋಲಿಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗುತ್ತಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಭೀಕರ ಅಪಘಾತ: ಇಬ್ಬರಿಗೆ ಗಂಭೀರ
ಈ ಪ್ರಕರಣದ ಕುರಿತು ಕೂಲಂಕಷ ತನಿಖೆ ನಡೆಸಲಿದ್ದಾರೆ. ದೇಶಾದ್ಯಂತ ಮತದಾರರ ಪಟ್ಟಿ ಪರಿಶೀಲನೆ (SIR) ಪ್ರಕ್ರಿಯೆ ಚಾಲ್ತಿಯಲ್ಲಿರುವ ಸಮಯದಲ್ಲೇ ಈ ಘಟನೆ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.





