ಹಾಸನ ಜಿಲ್ಲೆ ಅಭಿವೃದ್ದಿಯಲ್ಲಿ ಮುಂದುವರಿದಿದೆ ಎಂದು ಹೆಮ್ಮೆಯಿಂದ ಇಲ್ಲಿವರೆಗೂ ಆಳುವ ರಾಜಕೀಯದವರು ಸಭೆ, ಕಾರ್ಯಕ್ರಮದಲ್ಲಿ ಹೇಳಿಕೊಳ್ಳುತ್ತಿದ್ದರು. ಆದರೆ ಇದೀಗ ಹೊಳೆನರಸೀಪುರ ಶಾಸಕರಾಗಿರುವ ರೇವಣ್ಣನವರ ಕ್ಷೇತ್ರದಲ್ಲಿ ಕುಂದು ಕೊರತೆ ಎದ್ದು ಕಾಣುತ್ತಿದೆ. ಈ ಕ್ಷೇತ್ರದ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯವು ಅವ್ಯವಸ್ಥೆಯ ಕೂಪವಾಗಿದೆ.
ಹಲವು ವರ್ಷಗಳಿಂದ ಇಲ್ಲಿರುವ ವಿದ್ಯಾರ್ಥಿನಿಯರಿಗೆ
ಶೌಚಾಲಯ, ಕುಡಿಯುವ ನೀರು, ಗ್ರಂಥಾಲಯ ಮತ್ತು ಕೊಠಡಿಗಳು ಸೇರಿದಂತೆ ಕನಿಷ್ಠ ಮೂಲಭೂತ ಸೌಕರ್ಯಗಳು, ಶೈಕ್ಷಣಿಕ ವಾತಾವರಣ ಇಲ್ಲ. ಪ್ರತಿದಿನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಮಸ್ಯೆಗಳ ಬಗ್ಗೆ ನಿಲಯ ಪಾಲಕರಾದ ಚಂದ್ರಿಕಾರವರಿಗೆ ಹಲವು ಬಾರಿ ಬಗೆಹರಿಸುವಂತೆ ಒತ್ತಾಯಿಸಿದರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲ.

‘ವಿದ್ಯಾರ್ಥಿಗಳಿಗೆ ನನಗೆ ಯಾವುದೇ ಸಂಬಂಧವಿಲ್ಲ. ಯಾರಿಗೆ ದೂರು ಕೊಟ್ಟರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸಮಸ್ಯೆಗಳನ್ನು ಬಗೆಹರಿಸುವ ಬದಲು ಅವ್ಯವಸ್ಥೆ ಬಗ್ಗೆ ಪ್ರಶ್ನಿಸುವ ವಿದ್ಯಾರ್ಥಿಗಳಿಗೆ ಧಮ್ಕಿ ಹಾಕಿ, ಬೆದರಿಕೆ, ದೌರ್ಜನ್ಯ ಮಾಡುತ್ತಿದ್ದಾರೆ. ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಖಾಲಿ ಮಾಡಿಕೊಂಡು ಹೋಗಿ ಎಂದು ಬೆದರಿಕೆ ಹಾಕುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ವಿದ್ಯಾರ್ಥಿಗಳಲ್ಲಿ ದ್ವೇಷದ ಕಿಚ್ಚು ಹಚ್ಚಿ ಜಗಳ ತಂದಿಡುತ್ತಾರೆ. ನಾವು ಹಾಸ್ಟೆಲ್ ಬಿಟ್ಟು ಹೋಗುವುದಕ್ಕೂ ತಲಾ ವಿದ್ಯಾರ್ಥಿಗಳಿಗೆ 5000 ಸಾವಿರ ಹಣ ನೀಡುತ್ತೇನೆ.ಇಲ್ಲವೆಂದರೆ ಹಾಗೇ ಹೊರಗೆ ಹಾಕುತ್ತೇನೆಂದು ಬೆದರಿಕೆ ಒಡ್ಡುತ್ತಿದ್ದಾರೆಂದು ಹಾಸ್ಟೆಲ್‌ನ ವಿದ್ಯಾರ್ಥಿಗಳು ಈ ದಿನ.ಕಾಮ್ ಜೊತೆಗೆ ತಮ್ಮ ನೋವು ತೋಡಿಕೊಂಡಿದ್ದಾರೆ.
ಅಧಿಕಾರಿಗಳಿಗೆ ಮನವಿ ಮಾಡಿದರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲ. ಚಂದ್ರಿಕಾರವರಿಗೆ ರಾಜಕೀಯ ಪ್ರಭಾವಿಗಳ ಸಂಪರ್ಕ ಇದೆ. ಹೀಗಾಗಿ, ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ವಿದ್ಯಾರ್ಥಿನಿಯರು ದೂರಿದ್ದಾರೆ.
ಹಾಸ್ಟೆಲ್‌ನಲ್ಲಿ ತೀರಾ ಕಳಪೆ ಗುಣಮಟ್ಟದ ಆಹಾರವನ್ನು ತರಿಸುವುದು ಮತ್ತು ಸ್ವಚ್ಚತೆ ಇಲ್ಲದಿರುವುದರಿಂದ ಈಗಾಗಲೆ ನಾನಾ ರೋಗಗಳು ಹರಡಿ ವಿದ್ಯಾರ್ಥಿನಿಯರು ಆಸ್ಪತ್ರೆ ಸೇರಿದ್ದಾರೆ. ಸಾಮಾಜಿಕವಾಗಿ ಶೋಷಣೆಗೆ ಒಳಗಾದ ಸಮುದಾಯದಿಂದ ದಲಿತ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿನಿಯರು ಇರುವ ಹಾಸ್ಟೆಲ್ ಇದಾಗಿದ್ದು, ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ವಾತಾವರಣ ನಿರ್ಮಿಸಲು ಬೇಕಿರುವ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲ ಎಂದು ಹಾಸ್ಟೆಲ್‌ನ ವಿದ್ಯಾರ್ಥಿನಿಯರು ತಮ್ಮ ಬೇಸರ ಹೊರಹಾಕಿದ್ದಾರೆ.
ಕೂಡಲೆ ಕಲ್ಪಿಸಬೇಕು ಉತ್ತಮ ಗುಣಮಟ್ಟದ ಆಹಾರ ನೀಡಬೇಕು. ಹಾಗೆಯೇ ನಿಲಯಪಾಲಕರಾದ ಚಂದ್ರಿಕಾರವರ ವಿರುದ್ಧ ಮೇಲಧಿಕಾರಿಗಳು ಸರಿಯಾದ ಕ್ರಮ ಜರುಗಿಸಬೇಕು. ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಮಹಿಳಾ ಆಯೋಗದ ಅಧ್ಯಕ್ಷರು ಹಾಸ್ಟೆಲ್‌ಗೆ ಭೇಟಿ ನೀಡಿ, ಅಲ್ಲಿನ ಸಮಸ್ಯೆಯನ್ನು ಪರಿಶೀಲಿಸಬೇಕು. ನಮ್ಮ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ವಿದ್ಯಾರ್ಥಿನಿಯರು ಆಗ್ರಹಿಸಿದ್ದಾರೆ.

ಗಿರಿಜಾ ಎಸ್ ಜಿ
ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ, ಮಹಿಳಾ ಪರ ಹೋರಾಟಗಾರ್ತಿ.