ಬಂಜಾರಾ ಸಮುದಾಯವು ತನ್ನದೇ ಆದ ವೇಷ ಭೂಷಣದಿಂದ ಭಾರತೀಯ ಕಲೆ, ಸಂಸ್ಕೃತಿಗೆ ಅಪಾರ ಕೊಡುಗೆ ನೀಡುವ ಮೂಲಕ ಭಾರತೀಯ ಕಲಾ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದೆ ಎಂದು ಬಂಜಾರ ಸಮುದಾಯದ ಮುಖಂಡ ಹಾಗೂ ತಾಲೂಕು ಪಂಚಾಯತಿಯ ಕೆಡಿಪಿ ಸದಸ್ಯ ರಾಜೇಶ್ ಚವ್ಹಾಣ ಹೇಳಿದರು.
ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದ ರೋಷನಿ ಸಮಾಜ ಸೇವಾ ಸಂಸ್ಥೆ, ಯುವ ಸಂಗಮ ಹಾಗೂ ಜನವೇದಿಕೆ ಸಂಯುಕ್ತ ಆಶ್ರಯದಲ್ಲಿ ಮಾನವ ಹಕ್ಕು ಸಂವಾದ ಮತ್ತು ಲಂಬಾಣಿ ಸಾಂಸ್ಕೃತಿಕ ಕಲಾ ಮೇಳ ಸ್ಪರ್ಧೆಯನ್ನು ರೋಶನಿ ಸಂಸ್ಥೆಯಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜೇಶ್ ಚವ್ಹಾಣ,”ವೈವಿದ್ಯಮಯವಾಗಿ ನೃತ್ಯವನ್ನು ಮಾಡುವ ಮೂಲಕ ಜನರಿಗೆ ಮನರಂಜೀಸುವ ವಿಶೇಷ ಕಲೆ ನಮ್ಮ ಬಂಜಾರಾ ಸಮುದಾಯಲ್ಲಿದೆ. ಹೆಚ್ಚಾಗಿ ಹಬ್ಬ ಹರಿದಿನಗಳಲ್ಲಿ ಅದರಲ್ಲೂ ವಿಶೇಷವಾಗಿ ಗೌರಿ ಹಬ್ಬದಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮದಿಂದ ಆಚರಿಸುವುದು ವಿಶೇಷವಾದದ್ದು” ಎಂದರು.
ಬಂಜಾರಾ ಸಮುದಾಯದ ಇಂತಹ ಕಲಾ ಚಟುವಟಿಕೆಗಳನ್ನು ಗಮನಿಸಿ ರೋಶನಿ ಸಂಸ್ಥೆಯಲ್ಲಿ ಕಲಾ ಮೇಳವನ್ನು ಆಯೋಜಿಸಿ ಪ್ರೋತ್ಸಾಹಿಸುತ್ತಿರುವುದು ತಾಲೂಕಿನಲ್ಲಿ ಗಮನಾರ್ಹ ವಿಚಾರವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಅನಿತಾ ಡಿಸೋಜಾ ಮಾತನಾಡಿ, “ಲೂಕಿನಲ್ಲಿ ರೋಶನಿ ಸಂಸ್ಥೆಯಿಂದ 20 ಲಂಬಾಣಿ ಮಹಿಳಾ ಸ್ವಸಹಾಯ ಸಂಘಗಳನ್ನು ರಚಿಸಲಾಗಿದೆ. ಯುವ ಸಂಗಮ ಕಾರ್ಯಕ್ರಮದ ಮೂಲಕ ಬಂಜಾರಾ ಸಂಸ್ಕೃತಿಯನ್ನು ಇನ್ನೂ ಉನ್ನತಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಮತ್ತು ಯುವತಿಯರು ಲಂಬಾಣಿ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವಂತೆ ಪ್ರೇರೇಪಿಸುವ ಉದ್ದೇಶದಿಂದ ಈ ಕಲಾ ಮೇಳವನ್ನು ಹಮ್ಮಿಕೊಳ್ಳಲಾಗಿದೆ” ಎಂದರು.
“ಉತ್ತಮ ವೇಷ ಭೂಷಣ ತೊಟ್ಟು ನೃತ್ಯ ಮಾಡುವ ಯುವತಿಯರನ್ನು ಗುರುತಿಸಿ ಮುಂದಿನ ದಿನಗಳಲ್ಲಿ ತರಬೇತಿ ನೀಡಿ, ಕಲಾ ತಂಡವನ್ನು ರಚಿಸುವ ಮೂಲಕ ಇವರ ಸಂಸ್ಕೃತಿಗೆ ಒತ್ತು ನೀಡಲಾಗುತ್ತದೆ” ಎಂದು ಅನಿತಾ ಡಿಸೋಜಾ ಹೇಳಿದರು.
ನೃತ್ಯ ಸ್ಪರ್ಧೆಯಲ್ಲಿ ಮಲ್ಲಿಗಾರ, ರತ್ನಾಪುರ, ಜಾನಗುಂಡಿಕೊಪ್ಪ, ಮಾವಕೊಪ್ಪ, ಗುರುರಾಯಪಟ್ಟಣ, ಸೇವಾಲಾಲ ತಾಂಡಾಗಳಿಂದ 7 ಕಲಾ ತಂಡಗಳು ಭಾಗವಹಿಸಿದ್ದವು.
ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ರತ್ನಾಪುರ ತಾಂಡಾದ ಯುವತಿಯರಿಗೆ 3000 ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಗುರುರಾಯಪಟ್ಟಣದ ಯುವತಿಯರಿಗೆ 2000 ಮತ್ತು ಟ್ರೋಫಿ ಪಡೆದುಕೊಂಡರೆ, ಮಲ್ಲಿಗಾರ ಯುವತಿಯರು ತೃತೀಯ ಬಹುಮಾನವಾಗಿ 1000 ಮತ್ತು ಟ್ರೋಫಿ ಪಡೆದುಕೊಂಡರು.
ಕೆ.ಎಫ್ ನಾಯ್ಕರ ನಿರೂಪಿಸಿದರು. ನಿರ್ಮಲಾ ಮಡಿವಾಳ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ರೋಶನಿ ಕಾನ್ವೆಂಟ್ನ ಸಿಸ್ಟರ್ ಜಾನೆಟ್, ನ್ಯಾಯವಾದಿ ಸಿಸ್ಟರ್ ವೆರೋನಿಕಾ, ಜನವೇದಿಕೆ ನಾಯಕಿ ಯಲ್ಲವ್ವ ತಳಗೇರಿ, ಯುವತಿಯರ ಪ್ರತಿನಿಧಿ ತಾರಾ ಲಮಾಣಿ, ಪವಿತ್ರಾ ಲಮಾಣಿ, ಹಾನಗಲ್ಲಿನ ಕೃಪಾ ಸದನದ ಮುಖ್ಯಸ್ಥೆ ಸಿಸ್ಟರ್ ಅಶ್ವೇತಾ, ಸಿಬ್ಬಂದಿಗಳಾದ ಸಿಸ್ಟರ್ ಶಾಂತಿ, ಸಿಸ್ಟರ್ ಅಮಿತಾ, ಸಿಸ್ಟರ್ ಎವಿನ್, ಡಾ. ಪ್ರಸನ್ನಕುಮಾರ್, ಶಿವಕುಮಾರ ಮಾಂಗ್ಲೆನವರ, ಡಿಗ್ಗಪ್ಪ ಲಮಾಣಿ, ಮಂಜುನಾಥ ಗೌಳಿಗೌರಮ್ಮ ವೈ.ಕೆ. ಪವಿತ್ರಾ ಜೋಗೇರ, ಗೌರಮ್ಮ ಚಾಕಾಪುರ, ಶಶಿಕಲಾ ಪಟ್ಟಣಶೆಟ್ಟಿ, ಮೀನಾಕ್ಷಿ ಕಡಕೋಳ, ಅನುಷಾ ಕೆ.ಎಸ್ ಉಪಸ್ಥಿತರಿದ್ದರು.
