ಡಾ.ಪುರುಷೋತ್ತಮ ಬಿಳಿಮಲೆಯವರ ಅಧ್ಯಕ್ಷತೆಯಲ್ಲಿನ ಈ ಭಾರಿಯ ಪ್ರಾಧಿಕಾರವು ಕನ್ನಡೇತರರಿಗೆ ಕನ್ನಡ ಕಲಿಸುವ ಯೋಜನೆಯನ್ನು ಪುನಶ್ಚೇತನಗೊಳಿಸ ಹೊರಟಿರುವುದು ಶ್ಲಾಘನೀಯ. ಆದರೆ, ಇಲ್ಲಿಯೂ ವ್ಯವಸ್ಥಿತವಾದ ಯೋಜನೆ ಇರಬೇಕು, ಅವಸರದಲ್ಲಿ ಮಾಡಿದರೆ ಪರಿಶ್ರಮ, ಹಣ, ಸಮಯ ಎಲ್ಲಾ ವ್ಯರ್ಥ.
ನಾನೀಗ ಮದರಸಗಳಲ್ಲಿ ಕನ್ನಡ ಭಾಷೆಯನ್ನು ಕಲಿಸುವ ಸಮಸ್ಯೆಯ ಕುರಿತು ಮಾತಾಡುತ್ತಿಲ್ಲ. ಅದು ಸಂಪೂರ್ಣ ಬೇರೆಯೇ ಆದ ಸಮಸ್ಯೆ, ನಾನಿಲ್ಲಿ ಮಾತಾಡುತ್ತಿರುವುದು ರಾಜ್ಯದಲ್ಲಿರುವ ನಾಗರಿಕರು, ಅವರು ಹುಟ್ಟಾ ಕರುನಾಡಿಗರಾಗಿರಲಿ, ಅಥವಾ ಅನೇಕ ಕಾರಣಗಳಿಗಾಗಿ ಬಂದು ಇಲ್ಲಿ ನೆಲೆಸಿರುವವರಾಗಿರಲಿ, ಅವರಲ್ಲಿ ಲಕ್ಷಾಂತರ ಜನರಿಗೆ ಈಗಲೂ ಕನ್ನಡ ಮಾತಾಡಲು ಬಾರದೇ ಇರುವ ಪರಿಸ್ಥಿತಿ ಇದೆ. ಇದಕ್ಕೆ ಯಾರೂ ಅಚ್ಚರಿ ಪಡಬೇಕಾಗಿಲ್ಲ. ಇವರ ಕುರಿತು ಲಘುವಾದ ಟೀಕೆ ಟಿಪ್ಪಣಿ ಮಾಡುವ ಬದಲಿಗೆ ಇವರಿಗೆ ಮಾತಾಡುವ ಕನ್ನಡವನ್ನು ಕಲಿಸುವ ಕುರಿತು ಗಂಭೀರವಾಗಿ ಆಲೋಚಿಸಬೇಕು.
ಯಾವುದೇ ಕೌಶಲದ ಹಾಗೆ, ಒಂದು ಭಾಷೆಯನ್ನು ಕಲಿಯುವುದು ವ್ಯಾಮೋಹ, ಅಭಿಮಾನದಿಂದ ಸಾಧ್ಯವಾಗುವುದಿಲ್ಲ. ಬದಲಿಗೆ ಬದುಕಿಗೆ, ಮುನ್ನಡೆಗೆ ಅದು ಅನಿವಾರ್ಯವಾಗಿರಬೇಕು. ಅಲ್ಲದೇ ಕನ್ನಡ ಮಾತಾಡುವವರ ನಿತ್ಯ ಜೀವಂತ ಸಂಪರ್ಕದಿಂದಲೂ ಕಲಿಯಲು ಸಾಧ್ಯ. ಆದರೆ, ಬೆಂಗಳೂರಿನಂಥ ಮಹಾನಗರಗಳ ಮಟ್ಟಿಗೆ ಬಹಳಷ್ಟು ಕನ್ನಡೇತರ ಭಾಷಿಗರಿಗೆ ಇದು ಪರಿಸರ ಲಭ್ಯವಿಲ್ಲ. ಅಗತ್ಯವನ್ನು ಅರಿತು ತಮ್ಮದೇ ಹಿತಕ್ಕಾಗಿ ಕಲಿಯಲು ಉತ್ತೇಜಿತರಾದವರಿಗೂ ಕಡಿಮೆ ಅವಧಿಯಲ್ಲಿ ಪರಿಣಾಮಕಾರಿಯಾಗಿ ಕಲಿಸುವ ಅಧಿಕೃತ ವ್ಯವಸ್ಥೆ ಇಲ್ಲ.
ದಿನಕ್ಕೆ 2 ಗಂಟೆ, ವಾರದಲ್ಲಿ ಮೂರು ದಿನ, ಅರೆಕಾಲಿಕವಾಗಿ ಮೂರು ತಿಂಗಳ ಅವಧಿಗಾಗಿ ಕನ್ನಡ ಮಾತಾಡುವುದನ್ನು (ತಕ್ಕ ಮಟ್ಟಿಗೆ ಓದು ಬರಹವನ್ನೂ) ಕಲಿಸುವ ಕುರಿತು ಯೋಜನೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ ಈಗಾಗಲೇ ಇದೆ. ದಿನಕ್ಕೆ 2 ಗಂಟೆ, ವಾರದಲ್ಲಿ 3 ದಿನ, ಮೂರು ತಿಂಗಳ ಅವಧಿಯಲ್ಲಿ ಕಲಿಸಿಕೊಡುವ ಶಿಕ್ಷಕರಿಗೆ ಒಂದು ತರಗತಿಗೆ ಒಟ್ಟು 24 ಸಾವಿರ ಸಂಭಾವನೆ ನೀಡುವ ಯೋಜನೆ ಇದೆ. ಉಮೇದು ಇದ್ದವರು 2 ತರಗತಿಗಳನ್ನೂ ನಡೆಸಬಹುದು.
ಆದರೆ ಕಳೆದ ನಾಲ್ಕು ವರ್ಷಗಳಿಂದಂತೂ ಈ ಯೋಜನೆ ಸಕ್ರಿಯವಾಗಿಲ್ಲ. ಇದರ ಫಾಯ್ದೆಯನ್ನು ಪಡೆದು ಸ್ವಯಂಘೋಷಿತ ಭಾಷಾ ಬೋಧಕರು ಅತ್ಯಾಕರ್ಷಕ ಹೆಸರುಗಳನ್ನು ಇಟ್ಟುಕೊಂಡು ಆನ್‌ಲೈನ್ ನಲ್ಲಿ ಕನ್ನಡ ಕಲಿಸುವ ಯೋಜನೆಗಳನ್ನು ಇಟ್ಟುಕೊಂಡು ಸಾವಿರಾರು ರೂಪಾಯಿ ಗಳಿಸುವುದಕ್ಕೆ ಅವಕಾಶವಾಗಿದೆಯೇ ಹೊರತು, ಪರಿಣಾಮತಃ ಕನ್ನಡ ಕಲಿತವರ ಸಂಖ್ಯೆ ವೃದ್ಧಿಯಾಗುತ್ತಿಲ್ಲ. ಪ್ರತ್ಯಕ್ಷ ತರಗತಿಗಳಲ್ಲಿ ಪರಸ್ಪರ ಸಂವಹನದ ಮೂಲಕ ಕಲಿಯುವುದನ್ನು ಬಿಟ್ಟು ಆನ್‌ಲೈನಿನಲ್ಲಿ ಭಾಷೆ ಕಲಿಯಲು ಸಾಧ್ಯವೆಂದರೆ ನನಗಂತೂ ಅಚ್ಚರಿಯೇ.

ಡಾ.ಪುರುಷೋತ್ತಮ ಬಿಳಿಮಲೆಯವರ ಅಧ್ಯಕ್ಷತೆಯಲ್ಲಿನ ಈ ಭಾರಿಯ ಪ್ರಾಧಿಕಾರವು ಕನ್ನಡೇತರರಿಗೆ ಕನ್ನಡ ಕಲಿಸುವ ಯೋಜನೆಯನ್ನು ಪುನಶ್ಚೇತನಗೊಳಿಸ ಹೊರಟಿರುವುದು ಶ್ಲಾಘನೀಯ. ಆದರೆ, ಇಲ್ಲಿಯೂ ವ್ಯವಸ್ಥಿತವಾದ ಯೋಜನೆ ಇರಬೇಕು. ಅವಸರದಲ್ಲಿ ಮಾಡಿದರೆ ಪರಿಶ್ರಮ, ಹಣ, ಸಮಯ ಎಲ್ಲವೂ ವ್ಯರ್ಥ.
ವೈಜ್ಞಾನಿಕ ವಿಧಾನದ ಪರಂಪರೆ
ಭಾಷೇತರರಿಗೆ, ಅದರಲ್ಲೂ ವಯಸ್ಕರಿಗೆ ಕನ್ನಡ ಭಾಷಾ ಕೌಶಲಗಳನ್ನು ಕಲಿಸುವುದಕ್ಕೆ ಕಾಲಾಂತರದಿಂದ ಯಶಸ್ವಿಯಾಗುತ್ತಾ ಬಂದಿರುವ ವೈಜ್ಞಾನಿಕ ವಿಧಾನಗಳಿವೆ. 1975ರಷ್ಟು ಹಿಂದಿನಿಂದಲೇ ಅದು ಮೈಸೂರಿನ ಭಾರತೀಯ ಭಾಷಾ ಸಂಸ್ಥೆಯಲ್ಲಿ (ಕನ್ನಡ ಸಾಹಿತಿಗಳಲ್ಲ) ಭಾಷಾವಿಜ್ಞಾನಿಗಳ ಮೂಲಕ ರೂಪುಗೊಂಡು, ಭಾಷಾವಿಜ್ಞಾನಿಗಳ ಮೂಲಕವೇ ಜಾರಿಗೊಂಡ ಕಲಿಸುವ, “ಮೈಕ್ರೋ ವಿಧಾನ” ಎನ್ನುವ ಕ್ರಮ. ಇದರ ಮೂಲಕವೇ ಆ ದಿನಗಳಲ್ಲಿ ನಾನೂ ಕನ್ನಡೇತರ ಐಎಎಸ್, ಐಪಿಎಸ್ ಪ್ರೊಬೇಷನರುಗಳು, ಬ್ಯಾಂಕ್ ಅಧಿಕಾರಿಗಳು, ಬಿಇಎಲ್ ಇತ್ಯಾದಿ ಉದ್ಯಮಗಳ ಹಿರಿಯ ಎಂಜಿನಿಯರುಗಳಿಗೆ ಕನ್ನಡ ಭಾಷಾ ಕೌಶಲಗಳನ್ನು ಕಳಿಸಿದ ದಾಖಲೆಗಳಿವೆ. ಆಗ ಕನ್ನಡ ಕಲಿತವರು ರಾಜ್ಯದ ಹಿರಿಯ ಅಧಿಕಾರಿಗಳಾಗಿ ಕನ್ನಡದಲ್ಲಿಯೇ ದಕ್ಷ ಆಡಳಿತವನ್ನು ನಡೆಸಿದ ಉದಾಹರಣೆಗಳಿವೆ. ತಮ್ಮ ಮಾತೃಭಾಷೆಯಿಂದ ಕಾದಂಬರಿ, ಕವನಗಳನ್ನು ಕನ್ನಡಕ್ಕೆ ಅನುವಾದ/ಸ್ವತಃ ಬರವಣಿಗೆ ಮಾಡಿದ ಅಪರೂಪದ ಉದಾಹರಣೆಗಳೂ ಇವೆ.
ಭಾಷೆ ಕಲಿಸುವ ಕುರಿತ ಮೈಕ್ರೋ ವಿಧಾನಕ್ಕೆ ಅನುಗುಣವಾಗಿ ನಾನೂ ಸಹಲೇಖಕನಾಗಿ ಬರೆದ, ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟ ಮಾಡಿರುವ ’ಮಾತಾಡುವ ಕನ್ನಡ: Spoken Kannada’ ಎನ್ನುವ ಮಾದರಿ ಕೈಪಿಡಿಯೂ ಇದೆ. ಇತ್ತೀಚೆಗೆ ನವಕರ್ನಾಟಕ ಪ್ರಕಟಿಸಿದ ನನ್ನ, ’ಕನ್ನಡೇತರರಿಗೆ ಕನ್ನಡ: ಕಲಿಸುವವರ ಕೈಪಿಡಿ’ ಎಂಬ ಕೃತಿಯೂ ಇದೆ. ಈ ವಿಧಾನವನ್ನೇ ಅನುಸರಿಸಿ ಹಲವು ತಂಡಗಳ ಶಿಕ್ಷಕರ ತರಬೇತಿ ಶಿಬಿರಗಳೂ ನಡೆಸಿದ್ದೇವೆ. ಇಂಥ ಎಲ್ಲಾ ಲಭ್ಯ ಸಂಪನ್ಮೂಲಗಳ ವ್ಯವಸ್ಥಿತ ಬಳಕೆಯನ್ನು ಮಾಡಿಕೊಂಡರೆ ಮಾತ್ರ ಪ್ರಾಧಿಕಾರದ ಶ್ರಮ(ಹಣಕಾಸು) ಸಾರ್ಥಕವಾಗುತ್ತದೆ; ಉದ್ದೇಶವೂ ಸಫಲವಾಗುತ್ತದೆ.
ಮೊದಲ ಹೆಜ್ಜೆ– ಕನ್ನಡೇತರರು ಕನ್ನಡ (ಸಾಹಿತ್ಯವಲ್ಲ) ಭಾಷೆಯನ್ನು ಕಲಿಯುವುದಕ್ಕೆ ಪ್ರೇರಣೆ ಉಂಟಾಗುವ ರೀತಿಯಲ್ಲಿ ವಾತಾವರಣವನ್ನು ಕಲ್ಪಿಸಬೇಕು. ಇದು ಒಂದು ರೀತಿಯಲ್ಲಿ ಅಮೂರ್ತವಾಯಿತು, ಬಿಡಿ. ವಿವಿಧ ಮಾಧ್ಯಮಗಳನ್ನು ಬಳಸಿಕೊಂಡು (ಇದಕ್ಕಾದರೆ ಎಲ್ಲರೂ ಮನಸಾರೆ ಕೈಜೋಡಿಸುತ್ತಾರೆ) ಇಡೀ ರಾಜ್ಯದಲ್ಲಿ ಕನ್ನಡ ಕಲಿಯುವ ಅಗತ್ಯ/ಆಸೆ ಇರುವವರ ನೋಂದಣಿ/ಸಮೀಕ್ಷೆ ಆಗಬೇಕು. ಇದಕ್ಕಾಗಿ, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕನ್ನಡವಲ್ಲದ, ಉರ್ದು, ಬ್ಯಾರಿ, ತುಳು, ಕೊಂಕಣಿ, ಬಂಜಾರ, ಕೊಡವ ಇತ್ಯಾದಿ ಅಕಾಡೆಮಿಗಳ ಸದಸ್ಯರು, ಕನ್ನಡ ಮತ್ತು ಸಂಸ್ಕ್ಜತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕರು, ಕಸಾಪದ ತಾಲೂಕು ಮಟ್ಟದವರೆಗಿನ ಘಟಕಗಳು, ತಮಿಳು ಸಂಘಂ, ಮಲಯಾಳ ಸಮಾಜಂ. ತೆಲುಗು, ಮರಾಠಿ, ಗುಜರಾತಿ, ಬಂಗಾಲಿ ಇತ್ಯಾದಿ ಭಾಷಾ ಸಂಘಗಳು ಮುಂತಾದ ಸಂಘಟನೆಗಳ ಮೂಲಕ ಕನ್ನಡ ಕಲಿಯುವ ಅಗತ್ಯ/ಅಭಿಲಾಶೆ ಇರುವವರ ನೋಂದಣಿ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲ ಆಯಾ ಸಂಸ್ಥೆಗಳ ಮೂಲಕ ತರಗತಿಗಳನ್ನೂ ನಡೆಸಬಹುದು.
ಎರಡನೇ ಹೆಜ್ಜೆ– ಕಲಿಸುವವರ ತರಬೇತಿ. ಕನ್ನಡೇತರರಿಗೆ ಕನ್ನಡ ಕಲಿಸುವುದು ಒಂದು ವಿಶಿಷ್ಟ ಕೌಶಲ. ಬಿ.ಎ./ಎಂ.ಎ/ಬಿ.ಎಡ್.(ಕನ್ನಡ) ಓದಿದ ಕೂಡಲೇ ಅವರಿಗೆ ಈ ಕೌಶಲ ಇರುವುದಿಲ್ಲ. ಹಾಗೆ ನೋಡಿದರೆ, ಕನ್ನಡ ಚೆನ್ನಾಗಿ ಬಲ್ಲ ಯಾರೇ ಆದರೂ ಸೂಕ್ತ ತರಬೇತಿಯ ನಂತರ ಕನ್ನಡೇತರರಿಗೆ ಕನ್ನಡ ಕಲಿಸಬಹುದು. ಕನ್ನಡೇತರರಿಗೆ ಕನ್ನಡ ಕಲಿಸುವ ಅರ್ಹತೆ/ಆಸಕ್ತಿ ಇರುವವರಿಂದ, ಮುಖ್ಯವಾಗಿ ಕನ್ನಡೇತರರ ಸಂಖ್ಯೆ ಹೆಚ್ಚು ಇರುವ ಮಹಾನಗರಗಳು, ಗಡಿಪ್ರದೇಶದ ಜಿಲ್ಲೆಗಳಿಂದ, ಅರ್ಜಿಯನ್ನು ತರಿಸಿಕೊಂಡು ಅವರಿಗೆ ಕನ್ನಡ ಕಲಿಸುವ ತರಗತಿಗಳನ್ನು ವಹಿಸಿ ಕೊಡುವ ಮುಂಚೆ (ಕನಿಷ್ಠ) ಎರಡು ದಿನಗಳ ಕಲಿಸುವವರ, ಪ್ರಾಯೋಗಿಕ ತರಬೇತಿಯನ್ನು ನೀಡುವುದು.
ಈ ತರಬೇತಿಗೆ ಬರುವ ಅಭ್ಯರ್ಥಿಗಳು ಶಿಬಿರಕ್ಕೆ ಬರುವಾಗಲೇ ಕೆಲವು ನಿಗದಿತ ಪ್ರಶ್ನೆಗಳಿಗೆ ತಮ್ಮದೇ ಉತ್ತರಗಳನ್ನು ಕಂಡುಕೊಂಡೇ ಬರಬೇಕು ಎಂದು ವಿಧಿಸಿದ್ದಾದರೆ, ಸೀಮಿತ ಅವಧಿಯ ಈ ತರಬೇತಿಯು ಹೆಚ್ಚು ಪ್ರಯೋಜನಕಾರಿಯಾಗುತ್ತದೆ. ಏಕೆಂದರೆ, ಇಲ್ಲಿ ಕನ್ನಡವನ್ನು ದ್ವಿತೀಯ ಭಾಷೆಯಾಗಿ ಕಲಿಸುವ ತತ್ತ್ವಗಳು ಮತ್ತು ತಂತ್ರಗಳನ್ನು ಮನನ ಮಾಡಿಕೊಳ್ಳುವುದಲ್ಲದೇ ಮಾದರಿ ತರಗತಿಯನ್ನು ನಡೆಸಿ ಅಭ್ಯಾಸ ಮಾಡಿಕೊಳ್ಳಬೇಕಾಗುತ್ತದೆ. ಈ ಕಾರಣಕ್ಕಾಗಿ ಒಂದು ಶಿಬಿರದಲ್ಲಿ 25ಕ್ಕಿಂತ ಹೆಚ್ಚಿನ ಭಾಗಿಗಳು ಇರಬಾರದು. ಇಂಥ ವ್ಯವಸ್ಥಿತ ತರಬೇತಿ ಪಡೆದ ಶಿಕ್ಷಕರು ರಾಜ್ಯದಲ್ಲಿ ಸರಕಾರಿ ಇಲಾಖೆ, ನಿಗಮ ಮಂಡಲಿಗಳು ನಡೆಸುವ ನೇಮಕಾತಿ ಪೂರ್ವ ಮತ್ತು ನೇಮಕಾತಿ ನಂತರದ ’ಕನ್ನಡ ಇಲಾಖಾ ಪರೀಕ್ಷೆಗಳಿಗೆ’ ಹಾಜರಾಗುವ ಅಭ್ಯರ್ಥಿಗಳಿಗೂ ತರಬೇತಿಯನ್ನು ನೀಡಬಹುದು. ಇದು ಅವರಿಗೆ ಪೂರಕ ದುಡಿಮೆಯಾಗುತ್ತದೆ. ಇದೆಲ್ಲಾ ಸೇರಿ ಕನ್ನಡ ಭಾಷೆಯನ್ನು ಕಲಿಸುವುದೇ ಒಂದು ಉತ್ತಮ ಉದ್ಯೋಗವೂ ಆಗುತ್ತದೆ. ಉದ್ಯೋಗದಲ್ಲಿರುವವರಿಗೆ ಹೆಚ್ಚುವರಿ ದುಡಿಮೆಯಾಗುತ್ತದೆ.
ಮೂರನೇ ಹೆಜ್ಜೆ ಮೊದಲ ಹೆಜ್ಜೆಯಲ್ಲಿ ಪಟ್ಟಿ ಮಾಡಿದ ಸಂಸ್ಥೆಗಳ ಸಹಯೋಗದಲ್ಲಿ ಮತ್ತು ಸ್ವತಂತ್ರವಾಗಿಯೂ ಕನ್ನಡೇತರರಿಗೆ ಕನ್ನಡ ಕಲಿಸುವ ತರಗತಿಗಳನ್ನು ನಡೆಸುವುದು. ಭಾಷೆ ಕಲಿಯುವುದು ಒಂದು ಪ್ರಾಯೋಗಿಕ/ಅನುಭವಾತ್ಮಕ ಕಲಿಕೆಯಾದ್ದರಿಂದ ಪ್ರತಿ ತರಗತಿಯಲ್ಲಿ 25ಕ್ಕಿಂತ ಹೆಚ್ಚು ಭಾಗಿಗಳು ಇಲ್ಲದಂತೆ ನೋಡಿಕೊಳ್ಳುವುದು. ಪ್ರಾಧಿಕಾರದ 2 ದಿನಗಳ ತರಬೇತಿ ಹೊಂದಿದ ಶಿಕ್ಷಕರಿಗೆ ಮಾತ್ರ ತರಗತಿಯನ್ನು ನಡೆಸುವ ಅನುಮತಿ ಮತ್ತು ಸಂಭಾವನೆಯನ್ನು ನೀಡುವುದು. ಮೂರು ತಿಂಗಳ ತರಬೇತಿಯ ಕೊನೆಯಲ್ಲಿ, ಆಲಿಸುವ ಮತ್ತು ಮಾತಾಡುವ (ಸ್ವಲ್ಪ ಮಟ್ಟಿಗೆ ಓದುವ/ಬರೆಯುವ) ಕೌಶಲಗಳನ್ನು ಕಲಿತಿದ್ದಾರೆಯೇ ಎಂಬುದನ್ನು ಮೌಲ್ಯಮಾಪಿಸಲು ಸರಳವಾದ ಒಂದು ಪರೀಕ್ಷೆಯನ್ನು ಇಡುವುದು. ಇದರಲ್ಲಿ ಕನಿಷ್ಠ ಶೇ.50-60ರಷ್ಟಾದರೂ ಭಾಗಿಗಳು ಪಾಸಾದರೆ ಮಾತ್ರ ಅಂಥ ಶಿಕ್ಷಕರಿಗೆ ಮುಂದಿನ ತರಗತಿಯನ್ನು ನೀಡಲಾಗುವುದು ಎಂಬ ಸರಳ ಷರತ್ತನ್ನು ಹಾಕಿಕೊಳ್ಳುವುದು.
ಬುನಾದಿ ಹೆಜ್ಜೆ
ಎಲ್ಲದ್ದಕ್ಕಿಂತ ಮುಂಚೆ ಆಗಬೇಕಾಗಿರುವುದು ಅಗತ್ಯವಾದ ಸಾಮಗ್ರಿ ನಿರ್ಮಾಣ. ಮೂರು ತಿಂಗಳ ತರಗತಿಯಲ್ಲಿ ಶಿಕ್ಷಕರು ಮತ್ತು ಕಲಿಯುವವರು ನಿಗದಿತ ಕಲಿಕಾ ಕೈಪಿಡಿಯನ್ನು ಬಳಸಬೇಕು. ಇದನ್ನು ಪ್ರಾಧಿಕಾರ ಜಾಗರೂಕತೆಯಿಂದ ರೂಪಿಸಿ, ಪ್ರಕಟಿಸಿ, (ಉಚಿತವಾಗಿ/ಕಡಿಮೆ ಬೆಲೆಗೆ) ವಿತರಿಸಬೇಕು. ಈ ಪಠ್ಯಕ್ರಮ, ಕೈಪಿಡಿ, ವಿಧಾನವನ್ನು ಅನುಸರಿಸಿ ಕನ್ನಡ ಭಾಷಾ ಕೌಶಲಗಳನ್ನು ಕಲಿಸಿಕೊಡುವ ಶಿಕ್ಷಕರಿಗೆ ಎರಡು ದಿನಗಳ ತರಬೇತಿಗಾಗಿ ಪಠ್ಯಕ್ರಮ ಮತ್ತು ಅವರಿಗಾಗಿ ಒಂದು ಶಿಕ್ಷಕರ ಕೈಪಿಡಿ ರಚಿಸಿ, ಪ್ರಕಟಿಸಿ, ವಿತರಿಸಬೇಕು.
ನಾಗಾಭರಣರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ, ಸದಸ್ಯನೂ ಆಗಿದ್ದ ನನ್ನ ಬರಹ, ನಿರ್ದೇಶನದಲ್ಲಿ, 50 ಎಪಿಸೋಡುಗಳ ’ಕನ್ನಡ ಕಲಿಕಾ ಪಾಠಗಳು’ ಎಂಬ ಯೋಜನೆ ಆರಂಭವಾಗಿತ್ತು. ಇದರಲ್ಲಿ ಜಗತ್ತಿನ ಯಾವುದೇ ಮೂಲೆಯಲ್ಲಿದ್ದುಕೊಂಡು ಕನ್ನಡ ಕಲಿಯಬೇಕು ಎನ್ನುವವರು ಯುಟ್ಯೂಬಿನಲ್ಲಿ ಉಚಿತವಾಗಿ ಕನ್ನಡವನ್ನು ಕಲಿಯಬಹುದಾಗಿತ್ತು. ಆದರೆ ಹಣಕಾಸಿನ ಕೊರತೆ ಎಂದು ಹೇಳಿ ಅದು ಅರೆಬರೆಯಾಗಿ 10 ಎಪಿಸೋಡುಗಳಿಗೆ ನಿಂತುಹೋಯಿತು. ಅಂದುಕೊಂಡ ಪ್ರಯೋಜನ ಈ ದುಬಾರಿ ವಿಡಿಯೊಗಳಿಂದ ಅಗದ ಹಾಗೆ ಆಯಿತು.
ಇದನ್ನೂ ಓದಿ ಅಯೋಧ್ಯೆ ಸೋಲಿನ ಸೇಡು ತೀರಿಸಿಕೊಳ್ಳಲು ಬಿಜೆಪಿ ತಹತಹ; ಕೇಸರಿ ಪಕ್ಷದ ಬತ್ತಳಿಕೆಯಲ್ಲಿರುವ ಆ ಅಸ್ತ್ರ ಯಾವುದು?
ಈಗಿನ ಅಧ್ಯಕ್ಷರು ಇವುಗಳ ಉಳಿದ 40 ಎಪಿಸೋಡುಗಳ ನಿರ್ಮಾಣಕ್ಕಾಗಿ ನಿರ್ಧರಿಸಬೇಕು. ಇದು ಸ್ವಯಂ ಕಲಿಕೆಗೂ ಸಹಾಯಕ ಮತ್ತು ಪ್ರತ್ಯಕ್ಷ ತರಗತಿಗಳಲ್ಲಿಯೂ ಶಿಕ್ಷಕರು ಮತ್ತು ಕಲಿಯುವವರಿಗೂ ಪೂರಕ ಸಾಮಗ್ರಿಯಾಗಿ ತುಂಬಾ ಉಪಯುಕ್ತವಾಗಲಿದೆ. ಆದರೂ ಇವುಗಳ ನಿರ್ಮಾಣಕ್ಕೆ ಈ ಬಾರಿಯು ಹಣಕಾಸಿನ ಕೊರತೆಯಿದ್ದರೆ, ಈಗಾಗಲೇ ಲಕ್ಷಾಂತರ ಖರ್ಚು ಮಾಡಿ ಪ್ರಯೋಜನಕ್ಕೆ ಬಾರದೆ ಇರುವುದಕ್ಕಿಂತ, ಇದಕ್ಕಾಗಿಯೇ ಯಾವುದಾದರೂ ಕಾರ್ಪೊರೇಟ್ ಸಂಸ್ಥೆಯ ಸಾಮಾಜಿಕ ಜವಾಬ್ದಾರಿ ಯೋಜನೆಯಡಿಯಲ್ಲಿ ಸಹಯೋಗ ಪಡೆದು ಪರಿಪೂರ್ಣ ಮಾಡಬಹುದಾಗಿದೆ.
ರಾಜ್ಯದಲ್ಲಿರುವ ಕನ್ನಡೇತರರಿಗೆ ಕನ್ನಡ ಕಲಿಸುವುದು ಸುಲಭವಲ್ಲ, ಹಾಗೆಂದು ಕಷ್ಟವೂ ಅಲ್ಲ. ಅಗತ್ಯದ ಸಮೀಕ್ಷೆ, ವ್ಯವಸ್ಥಿತ ತಯಾರಿ, ಯೋಜಿತ ಪ್ರಯತ್ನದ ಮೂಲಕ ನಾವು ಈ ಕೆಲಸವನ್ನು ಸಾಧಿಸಬಹುದು. ಪ್ರಾಧಿಕಾರ ಸಾರಥ್ಯವನ್ನು ವಹಿಸಲಿ. ಕನ್ನಡದ ತೇರು ಎಳೆಯುವುದಕ್ಕೆ ನಾವೆಲ್ಲ ಸಿದ್ಧ.

ಪ್ರೊ ಎಂ ಅಬ್ದುಲ್ ರೆಹಮಾನ್ ಪಾಷ
ಹಿರಿಯ ಭಾಷಾ ವಿಜ್ಞಾನಿ