ಆಧುನಿಕ ರಾಸಾಯನಿಕ ಕೃಷಿಯಿಂದ ಮಣ್ಣು ಬಂಜರಾಗುತ್ತಿರುವ ಈ ಕಾಲದಲ್ಲಿ, ಖಾಸಿ(Khasi) ಬುಡಕಟ್ಟು ರೈತರು ಪ್ರಕೃತಿಯೊಂದಿಗೆ ಕೈಜೋಡಿಸಿ ನಡೆಸುತ್ತಿರುವ ಕ್ರಾಂತಿಯು, ʼಕೃಷಿ ಪ್ರಕೃತಿಯ ಭಾಗವಾಗಬೇಕು, ವಿರೋಧಿಯಲ್ಲʼ ಎಂಬುದನ್ನು ನಮಗೆ ನೆನಪಿಸುತ್ತದೆ.
ರಾಸಾಯನಿಕ ಆಧಾರಿತ ಬೆಳೆಗಳಿಂದ ಹಾನಿಗೊಳಗಾದ ಮಣ್ಣನ್ನು ಸಾಂಪ್ರದಾಯಿಕ ಕೃಷಿ ಪದ್ಧತಿಗಳ ಮೂಲಕ ಜೀವಂತಗೊಳಿಸುತ್ತಿರುವ ಮೇಘಾಲಯದ ಖಾಸಿ ಬುಡಕಟ್ಟು ರೈತರ ಕಥೆಯು ಪ್ರೇರಣಾದಾಯಕ ಉದಾಹರಣೆಯಾಗಿದೆ. ಈ ರೈತರು, ಪ್ರಕೃತಿಯೊಂದಿಗೆ ಸಮರಸವಾಗಿ ಬದುಕುವ ಮಾದರಿಯನ್ನು ತೋರಿಸುತ್ತಿದ್ದಾರೆ. ಮಿಶ್ರ ಬೆಳೆ, ಕಾಂಪೋಸ್ಟ್, ಸ್ಥಳೀಯ ಬೀಜ ಸಂರಕ್ಷಣೆ ಮತ್ತು ಅಗ್ರೋಫಾರೆಸ್ಟ್ರಿ(ಕೃಷಿ-ಅರಣ್ಯ) ಪದ್ಧತಿಗಳ ಮೂಲಕ ಮಣ್ಣಿನ ಆರೋಗ್ಯವನ್ನು ಕಾಪಾಡುತ್ತಿದ್ದಾರೆ. ಇದು ರೈತರ ಆದಾಯ, ಆಹಾರ ಸುರಕ್ಷಣೆ ಮತ್ತು ಪರಿಸರ ಸಮತೋಲನಕ್ಕೆ ಸಹಕಾರಿಯಾಗಿದೆ.
ಇಳಿಜಾರು ಪ್ರದೇಶಗಳಲ್ಲಿ ಬೆಳೆಗಳನ್ನು ಬೆಳೆಯುವುದರಿಂದ ಮಣ್ಣು ಕೊಚ್ಚಿ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಅಲ್ಲಿನ ರೈತರು ಮಣ್ಣಿನ ಸವಕಳಿಯನ್ನು ತಡೆಗಟ್ಟಲು ಹಂತ ಹಂತದ ಬದುಗಳನ್ನು ನಿರ್ಮಿಸುತ್ತಾರೆ. ಬದುಗಳಿಗೆ ಗುಜರಾತಿ ಹುಲ್ಲು ಅಥವಾ ಬ್ರೂಮ್ ಗ್ರಾಸ್ ನೆಡುವುದರಿಂದ ಮಣ್ಣು ಸ್ಥಿರವಾಗಿರುವುದನ್ನು ಕಾಣಬಹುದು.
ಬಹುಬೆಳೆ ವ್ಯವಸ್ಥೆ, ದ್ವಿದಳ ಧಾನ್ಯ ಬೆಳೆಗಳು, ಸೋಫ್ಲಾಂಗ್(Flemingia vestita) ಮುಂತಾದವುಗಳನ್ನು ಬಳಸುತ್ತಾರೆ. ಬೆಳೆಯ ತ್ಯಾಜ್ಯಗಳು, ಸಾವಯಯ ಗೊಬ್ಬರ ಮತ್ತು ಇತರೆ ತ್ಯಾಜ್ಯ ವಸ್ತುಗಳನ್ನು ಮಣ್ಣಿಗೆ ಹಾಕುವುದರಿಂದ(biomass recycling) ಮಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ. ಜತೆಗೆ ಬಿದಿರು ಕೊಳವೆಗಳ ಮೂಲಕ ಹನಿ ನೀರು ಹಾಯಿಸಲಾಗುತ್ತದೆ. ಇದರಿಂದಾಗಿ ನೀರನ್ನು ಹಿಡಿದಿಟ್ಟುಕೊಂಡು ಮಣ್ಣು ಕೊಚ್ಚಿಹೋಗುವುದನ್ನು ತಡೆಗಟ್ಟಬಹುದು. ಮಣ್ಣು ಹೆಚ್ಚು ಸಮಯ ತೇವಾಂಶಭರಿತವಾಗಿರುವಂತೆ ಕಾಪಾಡಿಕೊಳ್ಳಬಹುದು.
ಖಾಸಿ ಪೈನ್, ಬಿದಿರು, ಆಲ್ಡರ್ ಮುಂತಾದ ಮರಗಳನ್ನು ಬೆಳೆಗಳೊಂದಿಗೆ ಬೆಳೆಸುವುದರಿಂದ ಮಣ್ಣನ್ನು ಬಲಗೊಳ್ಳುತ್ತದೆ ಮತ್ತು ಜೀವವೈವಿಧ್ಯವನ್ನು ಕಾಪಾಡುತ್ತದೆ. ಸಮುದಾಯದ ಸಂರಕ್ಷಿತ ಅರಣ್ಯಗಳು(sacred groves) ಮತ್ತು ಕಸ್ಟಮರಿ ಕಾನೂನುಗಳು ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ಸಹಾಯಕವಾಗಿವೆ.
ಖಾಸಿ ರೈತರು ಈ ಎಲ್ಲ ರೀತಿಯ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಣ್ಣನ್ನು ಸಂರಕ್ಷಿಸುತ್ತಾರೆ. ಇವುಗಳು ನೀರಿನ ಹರಿವನ್ನು ನಿಧಾನಗೊಳಿಸಿ, ಮಣ್ಣು ಕೊಚ್ಚಿಹೋಗುವುದನ್ನು ತಡೆಯುತ್ತವೆ. ನೀರು ಸಂಗ್ರಹಣೆಗೆ ಸಹಾಯ ಮಾಡುತ್ತದೆ. ಖಾಸಿ ಪ್ರದೇಶಗಳಲ್ಲಿ ಇದು ಬಹಳ ಸಾಮಾನ್ಯವಾಗಿದೆ.
ಸಾಂಪ್ರದಾಯಿಕ ಕೃಷಿಯ ಮರೆಯಾಗುತ್ತಿರುವ ವೈವಿಧ್ಯತೆ
ತಲೆಮಾರುಗಳಿಂದ, ಖಾಸಿ ಸಮುದಾಯಗಳು ಝುಮ್ ಅಥವಾ ಶಿಫ್ಟ್ ವ್ಯವಸಾಯ ಪದ್ದತಿಗಳನ್ನು ಅಭ್ಯಾಸ ಮಾಡುತ್ತಿದ್ದರು. ಇದು ವೈವಿಧ್ಯಮಯ, ಹೊಂದಾಣಿಕೆ ಮತ್ತು ಸ್ಥಳೀಯ ಪರಿಸರದ ಜತೆಗೆ ನಿಕಟ ಸಂಪರ್ಕ ಹೊಂದಿರುವ ಕೃಷಿ ವ್ಯವಸ್ಥೆಯಾಗಿದೆ.
ಏಕಸಂಸ್ಕೃತಿ ಕೃಷಿಗಿಂತ ಭಿನ್ನವಾಗಿ, ಝುಮ್ ಹೊಲಗಳಲ್ಲಿ ಮೆಣಸಿನಕಾಯಿ, ಜೋಳ, ರಾಗಿ, ಬೀನ್ಸ್, ಕುಕುರ್ಬಿಟ್ಗಳು, ಕೊಲೊಕಾಸಿಯಾ, ಗೆಣಸು ಮತ್ತು ತರಕಾರಿಗಳು ಸೇರಿದಂತೆ ಸಾಂಪ್ರದಾಯಿಕ ಬೆಳೆಗಳ ಸಮೃದ್ಧ ಮಿಶ್ರಣ ಕಾಣಲಾರಂಭಿಸಿತು. ಈ ಮಿಶ್ರ ಕೃಷಿ ವ್ಯವಸ್ಥೆಗಳು ಆಹಾರ ಭದ್ರತೆಯನ್ನು ಖಾತ್ರಿಪಡಿಸಿದವು. ಜತೆಗೆ ಮಣ್ಣಿನ ಫಲವತ್ತತೆ, ತೇವಾಂಶ ಮತ್ತು ಜೀವವೈವಿಧ್ಯತೆಯನ್ನು ಕಾಪಾಡಿಕೊಳ್ಳಲು ಕೂಡ ಅನುಕೂಲವಾಯಿತು.

ಸಾಂಪ್ರದಾಯಿಕ ಕೃಷಿ ಜ್ಞಾನವು ಶತಮಾನಗಳಿಂದ ಕಾಡುಗಳು, ಮಳೆಯ ಮಾದರಿಗಳು, ಮಣ್ಣು ಮತ್ತು ಕಾಲಕ್ಕೆ ತಕ್ಕಂತೆ ಬೆಳೆಯುವ ಮೂಲಕ ವಿಕಸನಗೊಂಡಿತು. ಅಲ್ಲದೆ ಕೃಷಿಯನ್ನು ಜಾನುವಾರುಗಳು, ಕಾಡುಗಳು ಮತ್ತು ಸ್ಥಳೀಯ ಆಹಾರ ವ್ಯವಸ್ಥೆಗಳೊಂದಿಗೆ ಸಂಯೋಜಿಸಲಾಯಿತು, ಇದರಿಂದಾಗಿ ವಿಶಾಲವಾದ ಸಾಮಾಜಿಕ-ಪರಿಸರ ಭೂದೃಶ್ಯ ರೂಪುಗೊಂಡಿತು
ಪೈನ್ ಮರಗಳ ಅಡಿಯಲ್ಲಿ ಕೃಷಿ
“ನೊಂಗ್ಲಾಂಗ್ ಗ್ರಾಮದಲ್ಲಿ, ಕಡಿದಾದ ಇಳಿಜಾರುಗಳಲ್ಲಿ ಹರಡಿರುವ ಪೈನ್ ಮರಗಳ ಕೆಳಗೆ ಮೆಣಸಿನಕಾಯಿ ಕೃಷಿ ಮಾಡಲಾಗುತ್ತದೆ. ಹೈಬ್ರಿಡ್ ಮೆಣಸಿನಕಾಯಿಗಳು ಆರಂಭದಲ್ಲಿ ಹೆಚ್ಚಿನ ಇಳುವರಿಯನ್ನು ನೀಡುತ್ತಿದ್ದವು. ಆದರೆ ಉತ್ಪಾದಕತೆಯನ್ನು ಹೆಚ್ಚಿಸಲು ತೀವ್ರವಾಗಿ ರಾಸಾಯನಿಕ ಕೃಷಿಗೆ ಒಗ್ಗಿಕೊಂಡಿದ್ದರಿಂದ ಪರಿಸರ ಸಮಸ್ಯೆಗಳು ಹೊರಹೊಮ್ಮಿದವು. ಮಾರುಕಟ್ಟೆಗಾಗಿ ಹೈಬ್ರಿಡ್ ಮೆಣಸಿನಕಾಯಿಯನ್ನು ಬೆಳೆಯುತ್ತಾರೆ. ಮನೆಯ ಬಳಕೆಗಾಗಿ, ನಾವು ಇನ್ನೂ ಸಾಂಪ್ರದಾಯಿಕ ತಳಿಗಳನ್ನೇ ಬಳಸುತ್ತಾರೆ. ಏಕೆಂದರೆ ಅವು ಆರೋಗ್ಯಕರವಾಗಿರುತ್ತವೆ. ಸ್ಥಳೀಯ ಹವಾಗುಣಕ್ಕೆ ಉತ್ತಮವಾಗಿ ಹೊಂದಿಕೊಳ್ಳುತ್ತವೆ. ಅಲ್ಲದೆ ರಾಸಾಯನಿಕ ಗೊಬ್ಬರ, ಕೀಟನಾಶಕಗಳು ಮತ್ತು ಹರಬಲ್ ಬೀಜಗಳಿಗಾಗಿ ಮಾರುಕಟ್ಟೆಯ ಮೇಲೆ ಅವಲಂಬಿತರಾಗದ ಕಾರಣ ಹೂಡಿಕೆ ವೆಚ್ಚವೂ ಅತ್ಯಂತ ಕಡಿಮೆಯಾಗುತ್ತದೆ. ಆದ್ದರಿಂದ ಖಾಸಿ ರೈತರು ಸ್ಥಳೀಯ ಬಿತ್ತನೆ ಬೀಜಗಳನ್ನೇ ಬಳಸುತ್ತಾರೆ.
ತೆರೆದ ಬೆಟ್ಟದ ಇಳಿಜಾರುಗಳಾಗಿರುವುದರಿಂದ ಭಾರೀ ಮಳೆ ಸುರಿದಾಗ ಕೂಡಲೇ ಮಣ್ಣಿನ ಸವೆತ ಉಂಟಾಗುತ್ತದೆ. ಇದರಿಂದ ರಾಸಾಯನಿಕ ಹತ್ತಿರದ ಜಲಮೂಲಗಳಿಗೆ ಹರಿಯುವುದರಿಂದ ಜಲಮೂಲಗಳ ಮೇಲೆ ದುಷ್ಪರಿಣಾಮ ಬೀರಿತು. ಅಲ್ಲದೆ ರಸಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಪದೇ ಪದೆ ಬಳಸುವುದರಿಂದ ಮಣ್ಣಿನ ಆರೋಗ್ಯ ಕ್ಷೀಣಿಸತೊಡಗಿತು. ಒಂದು ಕಾಲದಲ್ಲಿ ಭೂಮಿಯನ್ನು ರಕ್ಷಿಸುತ್ತಿದ್ದ ಅನೇಕ ಸಸ್ಯಗಳು ಮತ್ತು ಕೀಟಗಳ ಮೇಲೆ ಪರಿಣಾಮ ಬೀರಿತು. ಮೊದಲು, ಹೊಲಗಳು ಕೀಟಗಳು, ಚಿಟ್ಟೆಗಳು ಮತ್ತು ಜೇನುನೊಣಗಳಿಂದ ತುಂಬಿರುತ್ತಿದ್ದವು. ವರ್ಷಗಳ ಕಾಲ ರಾಸಾಯನಿಕಗಳನ್ನು ಸಿಂಪಡಿಸಿದ ಬಳಿಕ ಕೊಲಗಳು ಕಳೆಗುಂದಿದ್ದು, ಪರಾಗಸ್ಪರ್ಶಕಗಳು ಕೂಡ ಕಡಿಮೆಯಾಗಿರುವುದನ್ನು ಸ್ಥಳೀಯರು ಅರಿತುಕೊಂಡಿದ್ದಾರೆ.
ಪರಿಸರ ವಿಜ್ಞಾನದ ಜತೆಗೆ ಪರಿಸರ ಕೃಷಿ
ಕೃಷಿ ವೆಚ್ಚಗಳು ಹೆಚ್ಚುತ್ತಿರುವುದು, ಮಣ್ಣಿನ ಆರೋಗ್ಯ ಕ್ಷೀಣಿಸುತ್ತಿರುವುದನ್ನು ಎದುರಿಸುತ್ತಿರುವ ರೈತರು ರಾಸಾಯನಿಕ ಬಳಕೆಯನ್ನು ಕಡಿಮೆ ಮಾಡಿ, ಸಾಂಪ್ರದಾಯಿಕ ಪದ್ಧತಿಗಳನ್ನು ಜೀವಂತವಾಗಿರಿಸಲು ಪ್ರಾರಂಭಿಸಿದ್ದಾರೆ. ಜಾನುವಾರುಗಳ ಸಗಣಿ, ಬೆಳೆ ತ್ಯಾಜ್ಯಗಳು, ಸ್ಥಳೀಯವಾಗಿ ಸಿಗುವ ಜೀವರಾಶಿಗಳಿಂದ ತಯಾರಿಸಿದ ಕಾಂಪೋಸ್ಟ್ ರಸಗೊಬ್ಬರಗಳನ್ನು ಬಳಸಲು ಪ್ರಾರಂಭಿಸಿದರು.
ಈಗ, ಮೇಘಾಲಯವು ವಿಶಿಷ್ಟ ಸುವಾಸನೆ, ಶಾಖದ ಮಟ್ಟಗಳು ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿರುವ ಹಲವಾರು ಸ್ಥಳೀಯ ಮೆಣಸಿನಕಾಯಿ ತಳಿಗಳಿಗೆ ನೆಲೆಯಾಗಿದೆ. ವಿಶ್ವದ ಅತ್ಯಂತ ಖಾರದ ಮೆಣಸಿನಕಾಯಿಗಳಲ್ಲಿ ಒಂದಾದ ಪ್ರಸಿದ್ಧ ಕಿಂಗ್ ಮೆಣಸಿನಕಾಯಿ(ಭೂತ್ ಜೊಲೋಕಿಯಾ), ರೋಗ ನಿರೋಧಕ ಮತ್ತು ಉರಿಯೂತದ ಪ್ರಯೋಜನಗಳನ್ನು ಒಳಗೊಂಡಂತೆ ಅದರ ಔಷಧೀಯ ಗುಣಗಳಿಗೆ ಮೌಲ್ಯಯುತವಾಗಿದೆ. ಸಣ್ಣ ಬರ್ಡ್ಸ್ ಐ ಮೆಣಸಿನಕಾಯಿ ಅಧಿಕ ಖಾರವಾಗಿದ್ದು, ಇದನ್ನು ಸ್ಥಳೀಯ ಪಾಕಪದ್ಧತಿಗಳು ಮತ್ತು ಉಪ್ಪಿನಕಾಯಿಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಜೈನ್ತಿಯಾ ಬೆಟ್ಟಗಳಲ್ಲಿ ಸಿಂಟೆಂಗ್ ಸಮುದಾಯದಿಂದ ಸಾಂಪ್ರದಾಯಿಕವಾಗಿ ಬೆಳೆಯುವ ಸಿಂಟೆಂಗ್ ಖಾರ ಮೆಣಸಿನಕಾಯಿಯನ್ನು ಅದರ ಅಸಾಧಾರಣ ಕಟುತ್ವ, ಹೇರಳ ಸುವಾಸನೆ ಮತ್ತು ಅತಿಯಾದ ಸಾಂಸ್ಕೃತಿಕ ಪರಂಪರೆಗಾಗಿ ಪ್ರಶಂಸಿಸಲಾಗುತ್ತದೆ.
ಅನೇಕ ರೈತರು ಈಗ ರಾಸಾಯನಿಕಗಳನ್ನು ಬಳಸದೆ ಸ್ಥಳೀಯ ಮೆಣಸಿನಕಾಯಿ ತಳಿಗಳನ್ನು ಬೆಳೆಸುತ್ತಿದ್ದಾರೆ. ಮೆಣಸಿನಕಾಯಿ ಒಂದೇ ಬೆಳೆಯನ್ನು ಬೆಳೆಯುವ ಬದಲು, ಬೀನ್ಸ್, ಸೌತೆಕಾಯಿ, ಮೆಕ್ಕೆಜೋಳ, ಅರಿಶಿನ, ಶುಂಠಿ, ಸೌತೆಕಾಯಿ, ಕೊಲೊಕೇಶಯಾ(ಅರವಿ), ಯಾಮ್, ಅಡುಗೆ ಸೊಪ್ಪುಗಳು, ತರಕಾರಿಗಳು, ಅನಾನಸ್, ಸೀಬೆ, ಪಪ್ಪಾಯ ಮುಂತಾದ ಹಣ್ಣುಗಳು ಇವುಗಳನ್ನು ಮಿಶ್ರ ಬೆಳೆಯಾಗಿ ಬೆಳೆಸುತ್ತಾರೆ. ಒಂದೇ ಜಾಗದಲ್ಲಿ ಬಹು ಬೆಳೆಗಳು ಬೆಳೆಯುವುದರಿಂದ ಮಣ್ಣಿನ ಪೋಷಕಾಂಶಗಳು ಸಮತೋಲನದಲ್ಲಿರುತ್ತವೆ, ಕಳೆ ಕಡಿಮೆಯಾಗುತ್ತದೆ ಮತ್ತು ಜೀವವೈವಿಧ್ಯ ಹೆಚ್ಚಾಗುತ್ತದೆ. ಅಲ್ಲದೆ, ಪೈನ್ ಮರಗಳ ನೆರಳಿನಲ್ಲಿ ಬೆಳೆ ಬೆಳೆಯುವುದು ವಿಶೇಷ. ಇದು ತೇವಾಂಶವನ್ನು ಕಾಯ್ದುಕೊಳ್ಳುತ್ತದೆ ಮತ್ತು ಸೂಕ್ಷ್ಮ ಹವಾಮಾನವನ್ನು ಸೃಷ್ಟಿಸುತ್ತದೆ. ನೈಟ್ರೋಜನ್ ಸ್ಥಿರೀಕರಿಸುವ ಬೆಳೆಗಳಾದ ಲೆಗ್ಯೂಮ್(ದ್ವಿದಳ ಧಾನ್ಯ)ಗಳು ಬಳಸುತ್ತಾರೆ. ಟೆರೇಸ್ ಫಾರ್ಮಿಂಗ್, ಮಲ್ಚಿಂಗ್, ವೆರ್ಮಿಕಾಂಪೋಸ್ಟ್ ಮತ್ತು ಬಯೋಮಾಸ್ ರಿಸೈಕ್ಲಿಂಗ್ ಮಣ್ಣಿನ ರಚನೆಯನ್ನು ಸುಧಾರಿಸುತ್ತವೆ.
ಕೃಷಿ ಅರಣ್ಯ, ಪಶುಸಂಗೋಪನೆ(ಹಂದಿ, ಕೋಳಿ, ಮೀನು) ಮತ್ತು ಅರಣ್ಯದೊಂದಿಗೆ ಸಂಯೋಜಿತವಾಗಿದೆ. ಇದರಿಂದಾಗಿ ಮಣ್ಣಿನ ಸವಕಳಿಯನ್ನು ಕಡಿಮೆ ಮಾಡುತ್ತದೆ(ಝುಮ್ನಲ್ಲಿ 17.62 ಟನ್/ಹೆಕ್ಟೇರ್ನಿಂದ IFSನಲ್ಲಿ 9.36 ಟನ್ಗೆ ಮಣ್ಣು ಸವೆತ ಇಳಿಕೆಯಾಗಿದೆ). ಮಣ್ಣು ಜೀವಂತವಾಗುತ್ತದೆ. ಹುಳುಗಳು, ಸೂಕ್ಷ್ಮಜೀವಿಗಳು ಹೆಚ್ಚಾಗುತ್ತವೆ. ಪರಾಗ ಜೀವಿಗಳು ಹೆಚ್ಚಾಗುತ್ತವೆ.
ಕಿನ್ರುಡ್ ಭೂಪ್ರದೇಶದಲ್ಲಿ ಈ ಪರಿವರ್ತನೆಯನ್ನು JIVA ಕಾರ್ಯಕ್ರಮದ ಅಡಿಯಲ್ಲಿ ಬೆಂಬಲಿಸಲಾಗುತ್ತಿದೆ. ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಬೆಂಬಲದೊಂದಿಗೆ ಈಶಾನ್ಯ ಭಾರತ ಪರಿಹಾರ ಮತ್ತು ಅಭಿವೃದ್ಧಿ ಸಮಿತಿ(NEICORD) ಜಾರಿಗೆ ತಂದಿರುವ ಈ ಯೋಜನೆ ಡಾಯ್ಚ ಗೆಸೆಲ್ಸ್ಚಾಫ್ಟ್ ಫರ್ ಇಂಟರ್ನ್ಯಾಷನಲ್ ಜುಸಮ್ಮೆನಾರ್ಬೀಟ್ ಸಹಯೋಗದೊಂದಿಗೆ ಜಲಾನಯನ ಬೆಂಬಲ ಸೇವೆಗಳು ಮತ್ತು ಚಟುವಟಿಕೆ ಜಾಲದಿಂದ ತಾಂತ್ರಿಕ ಬೆಂಬಲವನ್ನು ಪಡೆಯುತ್ತದೆ.

NEICORD ನ ಯುವ ರೈತ ಮತ್ತು ಯೋಜನಾ ಮೇಲ್ವಿಚಾರಕ ಬಂಟೀ ಸೈಮ್ ಪ್ರಕಾರ, “ಕಿನ್ರುಡ್, ನೊಂಗ್ಸೋಹ್ಮಾ, ನೊಂಗ್ಲಾಂಗ್, ಉಮಿಂಗ್, ಬೆಲ್ಖಾರಿಯಾಂಗ್, ಮಾವೀತ್ಖ್ಲಿ ಮತ್ತು ಮಾವಿಯೊಂಗ್ ಜಾಡಾಪ್ನಂತಹ ಗ್ರಾಮಗಳಾದ್ಯಂತ ರೈತರು ಮಣ್ಣಿನ ಆರೋಗ್ಯ, ಸ್ಥಳೀಯ ಬೀಜ ವ್ಯವಸ್ಥೆಗಳು, ಜೀವರಾಶಿ ಮರುಬಳಕೆ ಮತ್ತು ಪೌಷ್ಟಿಕಾಂಶ-ಸೂಕ್ಷ್ಮ ಕೃಷಿಯ ಮೇಲೆ ಕೇಂದ್ರೀಕರಿಸಿ ಕೃಷಿ ಮಾಡುತ್ತಿದ್ದಾರೆ. ಈ ಕಾರ್ಯಕ್ರಮವು ರೈತರಿಂದ ರೈತರೇ ಕಲಿಯುವುದರ ಜತೆಗೆ ಇಡೀ ಪ್ರದೇಶದಲ್ಲಿ ಕೃಷಿ ಪರಿಸರ ಪದ್ಧತಿಗಳನ್ನು ವಿಸ್ತರಿಸುವ ಆಂತರಿಕ ರೈತ ಸಂಪನ್ಮೂಲ ವ್ಯಕ್ತಿಗಳಾಗಿಯೂ ಹೊರಹೊಮ್ಮಿದ್ದಾರೆ.
ರೈತರು ಬೆಳೆ ಬೆಳೆಯಲು ಬಿತ್ತನೆ ಬೀಜ, ರಾಸಾಯನಿಕ ಮತ್ತು ಸಾವಯವ ಗೊಬ್ಬರ, ಕೀಟನಾಶಕಗಳು ಇತ್ಯಾದಿಗಳನ್ನು ಹೊರಗಿನಿಂದ ಖರೀದಿಸುವ ಬದಲು, ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳು ಮತ್ತು ಪ್ರಕೃತಿ ಆಧಾರಿತ ವಸ್ತುಗಳನ್ನು ಬಳಸಿ ಹೆಚ್ಚಿನ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಈ ವಿಧಾನವು ಅರಣ್ಯಗಳು, ಜಾನುವಾರುಗಳು, ಕೃಷಿ ವ್ಯವಸ್ಥೆಗಳು, ಆಹಾರ ಉತ್ಪಾದನೆ ಮತ್ತು ಸ್ಥಳೀಯ ಉದ್ಯಮಗಳ ನಡುವಿನ ಸಂಬಂಧಗಳನ್ನು ಬೆಸೆಯಲು ಅನುಕೂಲವಾಗುತ್ತಿದೆ.
ವಿಶಾಲವಾದ ಈ ಪ್ರಯತ್ನಗಳು ಕೃಷಿಯನ್ನು ಜೀವಂತ ಪರಿಸರ ಭೂದೃಶ್ಯದ ಭಾಗವಾಗಿ ನೋಡುವ ಕೃಷಿ ಪರಿಸರ ಪರಿವರ್ತನೆಗೆ ಕೊಡುಗೆ ನೀಡುತ್ತವೆ. ಈ ಬದಲಾವಣೆಯು ಮೇಘಾಲಯದ ರಾಜ್ಯ ಸಾವಯವ ಮತ್ತು ನೈಸರ್ಗಿಕ ಕೃಷಿ ನೀತಿ(2023) ಮತ್ತು ರಾಜ್ಯ ಸಾವಯವ ಮಿಷನ್ (2024-2028)ನೊಂದಿಗೆ ಹೊಂದಿಕೆಯಾಗುತ್ತದೆ. ಇದು 2028ರ ವೇಳೆಗೆ 1,00,000 ಹೆಕ್ಟೇರ್ಗಳನ್ನು ಪ್ರಮಾಣೀಕೃತ ಸಾವಯವ ಕೃಷಿಯ ಅಡಿಯಲ್ಲಿ ತರುವ ಗುರಿಯನ್ನು ಹೊಂದಿದೆ.
ಪೈನ್ ಮರಗಳ ನೆರಳು ಹೆಚ್ಚುಕಾಲ ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಸಹಾಯ ಮಾಡುವ ವಿಶಿಷ್ಟವಾದ ವಾಯುಗುಣವನ್ನು ಸೃಷ್ಟಿಸುತ್ತದೆ. ಈ ವಾತಾವರಣದಲ್ಲಿ ಬೆಳೆದ ಮೆಣಸಿನಕಾಯಿಯು ಉತ್ತಮ ರುಚಿ, ಪರಿಮಳ ಮತ್ತು ಗುಣಮಟ್ಟವನ್ನು ಹೆಚ್ಚಿಸುತ್ತದೆ. ಉತ್ಪಾದನೆಯನ್ನು ಮೀರಿ
ಖಾಸಿ ರೈತರಿಗೆ, ರಾಸಾಯನಿಕ ಬಳಕೆಯನ್ನು ಕಡಿಮೆ ಮಾಡುವುದಕ್ಕಿಂತ ನೈಸರ್ಗಿಕ ಕೃಷಿಗೆ ಪರಿವರ್ತನೆಯಾಗುವುದು ಹೆಚ್ಚಾಗಿದೆ. ಹಾಗಾಗಿ ಮಣ್ಣಿನ ಗುಣಮಟ್ಟವನ್ನು ಪುನಃಸ್ಥಾಪಿಸಲು, ಸ್ಥಳೀಯ ಜ್ಞಾನ ವ್ಯವಸ್ಥೆಗಳನ್ನು ಪುನರುಜ್ಜೀವನಗೊಳಿಸಲು ಮತ್ತು ಕಾಡುಗಳು, ನೀರು, ಜೀವವೈವಿಧ್ಯತೆ ಹಾಗೂ ಕೃಷಿಯ ನಡುವಿನ ಪರಿಸರ ಸಂಬಂಧಗಳನ್ನು ಬೆಸೆಯುವ ಪ್ರಯತ್ನವಾಗಿದೆ.
ಇದನ್ನೂ ಓದಿದ್ದೀರಾ? ಅಕಾಲಿಕ ಮಳೆಗೆ ಬೆಳೆಹಾನಿ: ಆರ್ಥಿಕ ಬೆನ್ನೆಲುಬೇ ಮುರಿದಿದೆಯೆಂದು ಕಣ್ಣೀರಿಟ್ಟ ರೈತ
ಮೇಘಾಲಯದ ಪೈನ್ ಅರಣ್ಯ ಬೆಟ್ಟಗಳಲ್ಲಿ, ರೈತರು ಮಣ್ಣಿಗೆ ಜೀವ ತುಂಬುತ್ತಿರುವ ಈ ಮಾದರಿ ಭಾರತದ ಇತರ ಪರ್ವತ ಪ್ರದೇಶಗಳಿಗೂ ಪ್ರೇರಣೆಯಾಗಿದೆ. ಈ ಬದಲಾವಣೆಗಳು ಸಣ್ಣ ಹಂತಗಳಿಂದ ಪ್ರಾರಂಭವಾಗಿ ದೊಡ್ಡ ಪರಿಣಾಮ ಬೀರುತ್ತವೆ. ಪರಿಸರ ವ್ಯವಸ್ಥೆಯ ಪುನಃಸ್ಥಾಪನೆಯು ಒಂದು ಬೀಜ, ಕೈಬೆರಳೆಣಿಕೆಯಷ್ಟು ಮಿಶ್ರಗೊಬ್ಬರ ಮತ್ತು ರೈತರ ನಿರ್ಧಾರದಿಂದ ಮಣ್ಣನ್ನು ಮತ್ತೆ ಜೀವಂತವಾಗಿರಿಸಲು ಸಾಧ್ಯವಾಗುತ್ತದೆ.
ರಾಸಾಯನಿಕ ಕೃಷಿಯಿಂದಾದ ಅನಾಹುತ
ಮೇಘಾಲಯದ ಪೂರ್ವ ಪಶ್ಚಿಮ ಖಾಸಿ ಹಿಲ್ಸ್ ಜಿಲ್ಲೆಯ ಪೈನ್ ಮರಗಳಿಂದ ಆವೃತವಾದ ಇಳಿಜಾರುಗಳಲ್ಲಿ, ಮೆಣಸಿನಕಾಯಿ ಕೃಷಿಯು ಒಂದು ಕಾಲದಲ್ಲಿ ಕೃಷಿ ಆಧುನೀಕರಣವನ್ನು ಸಂಕೇತಿಸುತ್ತಿತ್ತು. ಬೆಳೆಯುತ್ತಿರುವ ಮಾರುಕಟ್ಟೆ ಬೇಡಿಕೆಯನ್ನು ಪೂರೈಸಲು ಅರ್ಕಾ ಮೇಘನಾ F1, HM-2880 ಮತ್ತು INDAM-5 ನಂತಹ ಹೈಬ್ರಿಡ್ ತಳಿಗಳನ್ನು ಪರಿಚಯಿಸಲಾಯಿತು. ರೈತರು ಉತ್ಪಾದನೆಯನ್ನು ಹೆಚ್ಚಿಸಲು ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳನ್ನು ಅಳವಡಿಸಿಕೊಂಡು ಮೆಣಸಿನಕಾಯಿ ಬೆಳೆಯನ್ನು ಪ್ರಮುಖ ವಾಣಿಜ್ಯ ಬೆಳೆಯಾಗಿಸಿಕೊಂಡು ಲಾಭಗಳನ್ನು ಪಡೆದರು.
ಕಾಲಾನಂತರದಲ್ಲಿ, ಮಣ್ಣು ತೇವಾಂಶವನ್ನು ಕಳೆದುಕೊಳ್ಳುತ್ತಿತ್ತು. ಎರೆಹುಳುಗಳು ಕಣ್ಮರೆಯಾಗುತ್ತಿದ್ದವು ಮತ್ತು ಬೇಸಿಗೆಯ ತಿಂಗಳುಗಳಲ್ಲಿ ನೀರಿನ ಮೂಲಗಳು ಒಣಗುತ್ತಿದ್ದವು. ಕೀಟಗಳ ದಾಳಿ ಹೆಚ್ಚಾಯಿತು, ಆದರೆ ಬಾಹ್ಯ, ಒಳಹರಿವಿನ ಮೇಲಿನ ವೆಚ್ಚ ಹೆಚ್ಚಾದರೂ ಇಳುವರಿ ಸ್ಥಗಿತಗೊಂಡಿತು. ರೈತರು ಇದೆಲ್ಲವನ್ನೂ ಗಮನಿಸಲು ಪ್ರಾರಂಭಿಸಿದರು.
ಮೊದಲು, ಕಪ್ಪಾಗಿ ರಂಧ್ರವಿರುವ ಮತ್ತು ಜೀವಂತವಾಗಿರುವ ಮಣ್ಣು ಇತ್ತು. ವರ್ಷಗಳ ಕಾಲ ರಾಸಾಯನಿಕ ಕೃಷಿ ಮಾಡಿದ ನಂತರ, ಭೂಮಿ ಗಟ್ಟಿಯಾಗಿ, ಒಣಗಲು ಪ್ರಾರಂಭಿಸಿತು. ಕಡಿದಾದ ಬೆಟ್ಟದ ಇಳಿಜಾರುಗಳಲ್ಲಿ, ಕೃಷಿ ಮಾಡುವುದು, ಬೆಳೆ ಬೆಳೆಯುವುದು ಸವಾಲಾಯಿತು.
ಆದಾಗ್ಯೂ, ಕಳೆದ ಎರಡು ದಶಕಗಳಲ್ಲಿ, ಮೇಘಾಲಯದ ಅನೇಕ ಭಾಗಗಳು ಮಾರುಕಟ್ಟೆ-ಆಧಾರಿತ ನಗದು ಬೆಳೆ ಕೃಷಿಯತ್ತ ಬದಲಾವಣೆಯನ್ನು ಕಂಡಿವೆ. ಪೊರಕೆ ಹುಲ್ಲು ಮತ್ತು ವಾಣಿಜ್ಯ ಬೆಳೆಗಳ ವಿಸ್ತರಣೆ ವೇಗಗೊಂಡಿದ್ದು, ಕೃಷಿ ಭೂದೃಶ್ಯಗಳನ್ನು ಬದಲಾಯಿಸಿದೆ. ಬೆಳೆ ವೈವಿಧ್ಯತೆಯನ್ನು ಕಡಿಮೆ ಮಾಡಿದೆ.
ಸ್ಥಳೀಯ ರೈತರು ಈ ಪರಿವರ್ತನೆಯನ್ನು ‘ಪರಿಸರ ಏಕಬೆಳೆ’ ಎಂದು ಹೆಚ್ಚಾಗಿ ಹೇಳುತ್ತಾರೆ. ಆದರೆ ಇದು ವೈವಿಧ್ಯಮಯ ಕೃಷಿ ವ್ಯವಸ್ಥೆಗಳನ್ನು ಕ್ರಮೇಣವಾಗಿ ಮಾರುಕಟ್ಟೆ-ಚಾಲಿತ ವಾಣಿಜ್ಯ ಬೆಳೆಗಳೊಂದಿಗೆ ಬದಲಾಯಿಸಿದೆ. ಕೃಷಿ ವೈವಿಧ್ಯತೆ ಕ್ಷೀಣಿಸುತ್ತಿದ್ದಂತೆ, ಸ್ಥಳೀಯ ಬಿತ್ತನೆ ಬೀಜ ತಳಿಗಳು, ಸಾಂಪ್ರದಾಯಿಕ ಮಣ್ಣಿನ ನಿರ್ವಹಣಾ ಪದ್ಧತಿ ಮತ್ತು ಪೀಳಿಗೆಯಿಂದ ಪೀಳಿಗೆಗೆ ರವಾನಿಸಲಾದ ಪರಿಸರ ಜ್ಞಾನವೂ ಕ್ಷೀಣಿಸಿತು. ಬಳಿಕ ಎಚ್ಚೆತ್ತುಕೊಂಡ ಖಾಸಿ ರೈತರು ಪುನಃ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯಲು ಬದಲಾದರು.
ಹವಾಮಾನ ಬದಲಾವಣೆಗೆ ಪ್ರತಿಕ್ರಿಯೆಯಾಗಿ ಪ್ರಕೃತಿ-ಆಧಾರಿತ ಪರಿಹಾರಗಳು, ಪರಿಸರ ಪುನರುಜ್ಜೀವನ ಮತ್ತು ಸುಸ್ಥಿರ ಕ್ರಮಗಳ ಮೇಲೆ ಕೇಂದ್ರೀಕರಿಸುವ ಖಾಸಿ ರೈತರ ಕೃಷಿ ವಿಶ್ವ ಪರಿಸರ ದಿನ 2026ರ ಥೀಮ್ “Inspired by Nature. For Climate. For Our Future” (ಪ್ರಕೃತಿಯಿಂದ ಪ್ರೇರಣೆ ಪಡೆದು, ಹವಾಮಾನಕ್ಕಾಗಿ, ನಮ್ಮ ಭವಿಷ್ಯಕ್ಕಾಗಿ) ಮತ್ತು ಕ್ಯಾಂಪೇನ್ ಸಂದೇಶ #NowForClimate ಅನ್ನು ಪೂರ್ಣವಾಗಿ ಜೀವಂತಗೊಳಿಸುತ್ತದೆ.
ಮೇಘಾಲಯದ ಪೈನ್ಗಳಿಂದ ಆವೃತವಾದ ಬೆಟ್ಟಗಳ ಕೆಳಗೆ ಕಾಣಿಸಿಕೊಳ್ಳುವ ಮೆಣಸಿನಕಾಯಿ ಹೊಲಗಳು, ಕೃಷಿ ಮತ್ತೊಮ್ಮೆ ಪ್ರಕೃತಿಯ ಭಾಗವಾಗುತ್ತಿರುವ ಕಥೆಯನ್ನು ಹೇಳುತ್ತವೆ. ಪ್ರಕೃತಿಯ ಮಡಿಲಾದ ಮೇಘಾಲಯದ ಖಾಸಿ (Khasi) ಬುಡಕಟ್ಟು ರೈತರು ತಮ್ಮ ಸಾಂಪ್ರದಾಯಿಕ ಕೃಷಿ ಪದ್ಧತಿಗಳ ಮೂಲಕ ಮಣ್ಣಿನ ಆರೋಗ್ಯವನ್ನು ಹೇಗೆ ಮರುಪಡೆಯುತ್ತಿದ್ದಾರೆ ಮತ್ತು ಇಡೀ ಪರಿಸರ ವ್ಯವಸ್ಥೆಯನ್ನು ಹೇಗೆ ಮರುಸೃಷ್ಟಿಸುತ್ತಿದ್ದಾರೆ ಎಂಬುದು ಜಗತ್ತಿಗೆ ಮಾದರಿಯಾಗಿದೆ. ಆಧುನಿಕ ರಾಸಾಯನಿಕ ಕೃಷಿಯಿಂದ ಮಣ್ಣು ಬಂಜರಾಗುತ್ತಿರುವ ಈ ಕಾಲದಲ್ಲಿ, ಖಾಸಿ (Khasi) ಬುಡಕಟ್ಟು ರೈತರು ಪ್ರಕೃತಿಯೊಂದಿಗೆ ಕೈಜೋಡಿಸಿ ನಡೆಸುತ್ತಿರುವ ಕ್ರಾಂತಿಯು, ʼಕೃಷಿ ಪ್ರಕೃತಿಯ ಭಾಗವಾಗಬೇಕು, ವಿರೋಧಿಯಲ್ಲʼ ಎಂಬುದನ್ನು ನಮಗೆ ನೆನಪಿಸುತ್ತದೆ.
Credit : Down To Earth web





