ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕುಡುಪು ಮೈದಾನದಲ್ಲಿ ಕೇರಳದ ಮುಸ್ಲಿಂ ಯುವಕ ಅಶ್ರಫ್‌ನ ಗುಂಪು ಹತ್ಯೆಗೆ ಸಂಬಂಧಿಸಿ ಹೇಳಿಕೆ ನೀಡಿರುವ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಡಾ.ವೈ. ಭರತ್ ಶೆಟ್ಟಿ, “ಕುಡುಪು ಬಳಿ ದೇಶ ವಿರೋಧಿ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಯುವಕರನ್ನು ಈ ಕೇಸಿನಲ್ಲಿ ಸಿಲುಕಿಸಲು ಪ್ರಯತ್ನಿಸಲಾಗುತ್ತಿದೆ” ಎಂದು ಹೇಳುವ ಮೂಲಕ ಆರೋಪಿಗಳ ಪರ ನಿಂತಿದ್ದಾರೆ.
ಕೇರಳದ ವಯನಾಡ್ ಮೂಲಕ ಯುವಕ ಅಶ್ರಫ್‌ನನ್ನು ಸುಮಾರು ಐವತ್ತರಷ್ಟಿದ್ದ ಕೋಮುವಾದಿ ಗುಂಪು ಏಪ್ರಿಲ್ 27ರಂದು ಭಾನುವಾರ ಕ್ರಿಕೆಟ್ ಮೈದಾನದಲ್ಲಿ ಹೊಡೆದು ಹತ್ಯೆಗೈದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸುಮಾರು 20 ಮಂದಿ ಆರೋಪಿಗಳನ್ನು ಈವರೆಗೆ ಬಂಧಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಭರತ್ ಶೆಟ್ಟಿ, “ಕುಡುಪು ಬಳಿ ದೇಶ ವಿರೋಧಿ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಯುವಕರನ್ನು ಈ ಕೇಸಿನಲ್ಲಿ ಸಿಲುಕಿಸಲು ಪ್ರಯತ್ನಿಸಲಾಗುತ್ತಿದೆ. ಮಾತ್ರವಲ್ಲ ರಾಜಕೀಯ ಒತ್ತಡವನ್ನೂ ಪೊಲೀಸರ ಮೇಲೆ ಹಾಕಲಾಗುತ್ತಿದೆ” ಎಂದು ತಿಳಿಸಿದ್ದಾರೆ.
“ಪೊಲೀಸರು ತನಿಖೆ ಮಾಡುವ ನೆಪದಲ್ಲಿ ಎಳೆದುಕೊಂಡು ಹೋಗಿ ಪ್ರಕರಣವನ್ನು ಬಲವಂತವಾಗಿ ಒಪ್ಪಿಕೊಳ್ಳುವಂತೆ ಬೆದರಿಸಲಾಗುತ್ತಿದೆ. ಇದೀಗ ಕೆಲವು ಸಂಘಟನೆಗಳು, ಪಕ್ಷಗಳು ಪ್ರತಿಭಟನೆ ಮಾಡುವುದರ ಹಿಂದೆ ರಾಜಕೀಯ ತಂತ್ರವಿದ್ದು, ಪೊಲೀಸ್ ಇಲಾಖೆ ಆಡಳಿತ ಪಕ್ಷದ ರಾಜಕೀಯ ಕೈಗೊಂಬೆಯಂತೆ ವರ್ತಿಸುತ್ತಿದೆ. ವಿನಾಕಾರಣ ಹಿಂದೂ ಯುವಕರನ್ನು ಸುಳ್ಳು ಕೇಸಿನಲ್ಲಿ ಸಿಲುಕಿಸುವ ಪ್ರಯತ್ನ ನಡೆಯುತ್ತಿದ್ದು, ಪೊಲೀಸ್ ಠಾಣೆಗೆ ಘೆರಾವ್ ಹಾಕಬೇಕಾಗುತ್ತದೆ” ಎಂದು ಬೆದರಿಕೆ ಕೂಡ ಹಾಕಿದ್ದಾರೆ.
“ರಾಜ್ಯದ ಕಾಂಗ್ರೆಸ್ ಆಡಳಿತದಲ್ಲಿ ದೇಶದ್ರೋಹಿಗಳಿಗೆ ರಾಜಮರ್ಯಾದೆ ದೊರಕುತ್ತಿದೆ. ಅದೇ ದೇಶಪ್ರೇಮಿಗಳನ್ನು ಅಪರಾಧಿಗಳಂತೆ ತೋರಿಸಿ ಅವರ ಮೇಲೆ ಸುಳ್ಳು ಕೇಸು ದಾಖಲಿಸಲು ಬೆದರಿಕೆ ತಂತ್ರ ಅನುಸರಿಸಲಾಗುತ್ತಿದೆ” ಎಂದು ಶಾಸಕ ಭರತ್ ಶೆಟ್ಟಿ, ಘಟನೆಯನ್ನು ಖಂಡಿಸುವುದರ ಬದಲು ಆರೋಪಿಗಳ ಪರ ಬ್ಯಾಟ್ ಬೀಸಿದ್ದಾರೆ.
ಇದನ್ನೂ ಓದಿ: ಮಂಗಳೂರು ಗುಂಪು ಹತ್ಯೆ | ಸುದ್ದಿಗೋಷ್ಠಿಯಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬೆವರಿಳಿಸಿದ ಪತ್ರಕರ್ತರು!
ಶಾಸಕನಿಂದ ಪ್ರಕರಣ ಮುಚ್ಚಿ ಹಾಕಲು ಒತ್ತಡ: ಆರೋಪ
“ಬಿಜೆಪಿಯವರ ಪ್ರಚೋದನೆಯೇ ಇಂತಹ ಘಟನೆಗೆ ಕಾರಣ. ಸುಮಾರು 40ಕ್ಕೂ ಅಧಿಕ ಮಂದಿಯಿದ್ದ ಗ್ರೂಪಿಗೆ ಸ್ಥಳೀಯ ಬಿಜೆಪಿ ಮುಖಂಡ ಪಿಸ್ತೂಲ್ ರವಿ ಎಂಬಾತನೇ ಪ್ರಚೋದನೆ ನೀಡಿದವ. ಆತ ಶಾಸಕ ಭರತ್ ಶೆಟ್ಟಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾನೆ. ಘಟನೆಯ ಬಗ್ಗೆ ಪೊಲೀಸರಿಗೆ ಸರಿಯಾದ ಮಾಹಿತಿ ಇದ್ದರೂ, ‘ಅಪರಿಚಿತ ಶವ ಪತ್ತೆ’ ಎಂದು ತಿಳಿಸಿ ಶಾಸಕರ ಮೂಲಕ ಪ್ರಕರಣ ಮುಚ್ಚಿ ಹಾಕಲು ಒತ್ತಡ ತಂದಿದ್ದರು” ಎಂಬ ಆರೋಪ ಕೇಳಿಬಂದಿರುವ ನಡುವೆಯೇ ಬಿಜೆಪಿ ಶಾಸಕ ಭರತ್ ಶೆಟ್ಟಿ ಈ ಹೇಳಿಕೆ ನೀಡಿದ್ದಾರೆ.