ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳನ್ನು ಹನಿಟ್ರ್ಯಾಪ್ ಖೆಡ್ಡಾಗೆ ಬೀಳಿಸುತ್ತಿದ್ದ ದಂಧೆಯೊಂದು ಕಲಬುರಗಿಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಕಲಬುರಗಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಲ್ಲದೇ, ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಹನಿಟ್ರ್ಯಾಪ್ ದಂಧೆ ಆರೋಪಿಸಿ ದಲಿತ ಸೇನೆಯ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ, ಪ್ರಭು ಹಿರೇಮಠ, ರಾಜು ಲೆಂಗಟಿ, ಶ್ರೀಕಾಂತ ರೆಡ್ಡಿ, ಮಂಜು ಭಂಡಾರಿ ಸೇರಿದಂತೆ ಒಟ್ಟು ಎಂಟು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಆರೋಪಿಗಳು ಸಾಮಾಜಿಕ ಜಾಲತಾಣದ ಮೂಲಕ ಯುವತಿಯರನ್ನು ಪರಿಚಯ ಮಾಡಿಕೊಂಡಿದ್ದಾರೆ. ನಂತರ, ಅವರ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಅವರಿಗೆ ಹಣದ ಆಮಿಷ ತೋರಿಸಿ, ಹನಿಟ್ರ್ಯಾಪ್ಗೆ ಬಳಸಿಕೊಂಡಿದ್ದಾರೆ. ಆರೋಪಿಗಳು 10ಕ್ಕೂ ಹೆಚ್ಚು ಯುವತಿಯರನ್ನು ಹನಿಟ್ರ್ಯಾಪ್ಗೆ ಬಳಸಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ದೊಡ್ಡ ದೊಡ್ಡ ಉದ್ಯಮಿ, ಸರ್ಕಾರಿ ಅಧಿಕಾರಿಗಳನ್ನು ಗುರಿ ಮಾಡಿರುವುದಾಗಿ ಆರೋಪಿಸಲಾಗಿದೆ.
ಅಲ್ಲದೇ, ಈ ಸಂಬಂಧ ಮಹಾರಾಷ್ಟ್ರ ಮೂಲದ ಇಬ್ಬರು ಯುವತಿಯರು ಮತ್ತು ಕಲಬುರಗಿ ಜಿಲ್ಲೆಯ ಓರ್ವ ವಿವಾಹಿತ ಮಹಿಳೆಯು ಭೀಮ್ ಆರ್ಮಿ ಪದಾಧಿಕಾರಿಗಳೊಂದಿಗೆ ಸುದ್ದಿಗೋಷ್ಠಿ ಮಾಡಿದ್ದಾರೆ.
“ದಲಿತ ಸೇನೆ ರಾಜ್ಯಾಧ್ಯಕ್ಷ, ವಕೀಲರೂ ಆಗಿರುವ ಹಣಮಂತ ಯಳಸಂಗಿ ಹಾಗೂ ಸಹಚರರು ತಮ್ಮನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ಹಲವರಿಂದ ಹಣ ಪಡೆದಿದ್ದಾರೆ. ಹನಿಟ್ರ್ಯಾಪ್ ಮೂಲಕ ಕಮಲಾಪುರ ಪೊಲೀಸ್ ಠಾಣೆ ಪೇದೆಯನ್ನು ತಮ್ಮ ಖೆಡ್ಡಾಕ್ಕೆ ಕೆಡವಿಕೊಂಡಿದ್ದಾರೆ. ಬಳಿಕ, ಪೊಲೀಸ್ ಪೇದೆಗೆ ಬ್ಲ್ಯಾಕ್ ಮೇಲ್ ಮಾಡಿ 7 ಲಕ್ಷ ರೂ. ವಸೂಲಿ ಮಾಡಿದ್ದಾರೆ. ಹೀಗೆ ಉದ್ಯಮಿಯೊಬ್ಬರಿಂದ 40 ಲಕ್ಷ ರೂ. ವಸೂಲಿ ಮಾಡಿದ್ದಾರೆ. ಅಲ್ಲದೇ, ಆರೋಪಿಗಳು ಓರ್ವ ಯುವತಿಗೆ ಗರ್ಭಪಾತ ಮಾಡಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಚಿಕ್ಕಮಗಳೂರು | ಗಣೇಶ ಮೂರ್ತಿ ತರಲು ತೆರಳುತ್ತಿದ್ದ ವೇಳೆ ಅಪಘಾತ: ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
ಯಳಸಂಗಿ ಸಹಚರ ರಾಜು ಲೆಂಗಟಿ ಬಂಧನ
ಯುವತಿಯರು ಮತ್ತು ಮಹಿಳೆಯರನ್ನು ಬಳಸಿಕೊಂಡು ಹನಿಟ್ರ್ಯಾಪ್ ಮೂಲಕ ಹಲವರಿಂದ ಹಣ ಪಡೆದ ಆರೋಪದ ಮೇಲೆ ದಲಿತ ಸೇನೆಯ ರಾಜ್ಯಾಧ್ಯಕ್ಷ ಹನುಮಂತ್ ಯಳಸಂಗಿ ಅವರ ಸಹಚರ ಕಮಲಾಪುರ ಸಂಘಟನೆಯ ತಾಲೂಕು ಅಧ್ಯಕ್ಷ ರಾಜು ಲೆಂಗಟಿಯನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಈ ಪ್ರಕರಣದ ಕುರಿತು ಕಲಬುರಗಿ ನಗರ ಪೊಲೀಸ್ ಆಯುಕ್ತ ಶರಣಪ್ಪ ಡಿ. ಅವರು ಸಂತ್ರಸ್ತೆಯರ ಅಹವಾಲುಗಳನ್ನು ಕೇಳಿ, ಪ್ರಕರಣದ ತನಿಖೆಗೆ ಸೂಚಿಸಿದ್ದರು. ರಾಜು ಲೆಂಗಟಿಯನ್ನು ಬಂಧಿಸಿದ್ದು, ಇನ್ನುಳಿದ ಆರೋಪಿಗಳ ಬಂಧನ ನಡೆಸಲು ಕ್ರಮ ಕೈಗೊಂಡಿರುವುದಾಗಿ ವರದಿಯಾಗಿದೆ.
