ಧರ್ಮಸ್ಥಳದ ಸೌಜನ್ಯ ಮನೆಯ ಸಮೀಪ ಬಿಗ್‌ಬಾಸ್‌ನ ರಜತ್ ಎಂಬುವವರ ಸಂದರ್ಶನ ಮಾಡುತ್ತಿದ್ದ ನಾಲ್ಕು ಮಂದಿ ಯೂಟ್ಯೂಬ್ ಮಾಧ್ಯಮದವರ ಮೇಲೆ ಧರ್ಮಸ್ಥಳದ ಕೆಲವು ಗೂಂಡಾಗಳು ದಾಳಿ ಮಾಡಿ, ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬುಧವಾರ ಸಂಜೆ ವರದಿಯಾಗಿದೆ.
ಕುಡ್ಲ ರ‍್ಯಾಂಪೇಜ್ ಎಂಬ ಹೆಸರಿನ ಯೂಟ್ಯೂಬರ್ ಆಗಿರುವ ಅಜಯ್ ಅಂಚನ್ ಅವರ ಜೊತೆಗೆ, ಯುನೈಟೆಡ್ ಮೀಡಿಯಾದ ಅಭಿಷೇಕ್, ಸಂಚಾರಿ ಸ್ಟುಡಿಯೋದ ವಿಜಯ್ ಮತ್ತು ಕುಡ್ಲಾ ರಾಂಪೇಜ್‌ನ ಕ್ಯಾಮೆರಾ ಪರ್ಸನ್ ಮೇಲೆ ದಾಳಿ ಮಾಡಲಾಗಿದೆ. ಕ್ಯಾಮೆರಾವನ್ನು ಪುಡಿ ಮಾಡಿದ್ದಾರೆ ಮತ್ತು ಎಲ್ಲರೂ ಈ ಸದ್ಯ ಆಸ್ಪತ್ರೆಗೆ ದಾಖಲಾಗಿದ್ದು ಒಬ್ಬರಿಗೆ ತೀವ್ರ ಗಾಯಗಳಾಗಿವೆ.
ಸೌಜನ್ಯ ಮನೆಯ ಪಾಂಗಳ ಕ್ರಾಸ್ ಸಮೀಪ ದಾಳಿ ನಡೆದಿರುವುದಾಗಿ ತಿಳಿದುಬಂದಿದೆ. ದಾಳಿ ನಡೆಸಿದ ಗುಂಪಿನಲ್ಲಿ ಸುಮಾರು 50ರಿಂದ ನೂರು ಜನ ಇದ್ದರೆಂದು ಮಾಹಿತಿ ಲಭ್ಯವಾಗಿದೆ. ಗಾಯಾಳುಗಳನ್ನು ಸದ್ಯ ಉಜಿರೆಯ ಬೆನಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಆಗಿದ್ದೇನು?
ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ರಜತ್ ಎಂಬುವವರು ಇಂದು ವಕೀಲರ ಜೊತೆಗೆ ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಗೊಳಗಾಗಿದ್ದ ಸೌಜನ್ಯ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ರಜತ್ ಬಂದಿರುವ ವಿಚಾರ ತಿಳಿದು ಯೂಟ್ಯೂಬರ್‌ಗಳು ಸಂದರ್ಶನ ನಡೆಸಲು ಆಗಮಿಸುವುದಾಗಿ ತಿಳಿಸಿದ್ದರು.
ಅದಾಗಲೇ ಸೌಜನ್ಯ ಮನೆಯಿಂದ ಹೊರಟಿದ್ದ ರಜತ್ ಅವರಿಗೆ ಸೌಜನ್ಯ ಮನೆಯ ಪಾಂಗಳ ಕ್ರಾಸ್ ಸಮೀಪ ಮಾತನಾಡಲು ಸಿಕ್ಕಿದ್ದಾರೆ. ಪಾಂಗಳ ಕ್ರಾಸ್ ಬಳಿಯಲ್ಲೇ ನಿಂತು ಸಂದರ್ಶನ ನಡೆಸುತ್ತಿದ್ದರು. ಇದೇ ವೇಳೆ ಸ್ಥಳಕ್ಕೆ ಎರಡು ಮೂರು ರಿಕ್ಷಾದಲ್ಲಿ ಬಂದ ಸುಮಾರು 50ರಷ್ಟಿದ್ದ ಗೂಂಡಾಗಳ ಗುಂಪು, “ಧರ್ಮಸ್ಥಳದ ಹೆಸರು ಕೆಡಿಸುತ್ತಿದ್ದೀರಿ. ನೀವು ಧರ್ಮಸ್ಥಳದ ಹೆಸರು ಕೆಡಿಸಲೆಂದೇ ವಿಡಿಯೋಗಳನ್ನು ಪ್ರಸಾರ ಮಾಡುತ್ತಿದ್ದೀರಿ” ಎಂಬ ಆರೋಪ ಹೊರಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಕೈಯ್ಯಲಿದ್ದ ಕ್ಯಾಮರಾ ಹಾಗೂ ಮೈಕ್‌ಗಳನ್ನು ಕೂಡ ಕಸಿದುಕೊಂಡು ನೆಲಕ್ಕೆ ಬಡಿದು ಹೊಡೆದು ಹಾಕಿದ್ದಲ್ಲದೇ, ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಈದಿನ ಡಾಟ್ ಕಾಮ್‌ಗೆ ಮಾಹಿತಿ ನೀಡಿದ್ದಾರೆ.
ಘಟನೆಯ ಬೆನ್ನಲ್ಲೇ ಗಾಯಾಳುಗಳನ್ನು ಸ್ಥಳೀಯರು ಉಜಿರೆಯ ಬೆನಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಬಂದೋಬಸ್ತ್‌ಗೆ ಕ್ರಮ ಕೈಗೊಂಡಿದ್ದಾರೆ.



