ಕಾವ್ಯ ಕವಿಯ ಕಾವ್ಯಾತ್ಮದ ಉಗಮವಾಗಿದ್ದು, ಕಾವ್ಯಾತ್ಮ ಉಳ್ಳವರಿಂದ ಮಾತ್ರ ಕಾವ್ಯ ರಚನೆ ಸಾಧ್ಯ ಎಂದು ಹಿರಿಯ ಸಾಹಿತಿ ಶಾಮಸುಂದರ ಬಿದರಕುಂದಿ ಅವರು ಹುಬ್ಬಳ್ಳಿಯ ಆಯ್‌ಬಿಎಮ್‌ಆರ್ ಕಾಲೇಜಿನ ಸಭಾಂಗಣದಲ್ಲಿ ಸೌಹಾರ್ದ ಸಾಹಿತ್ಯ ವೇದಿಕೆ ಏರ್ಪಡಿಸಿದ್ದ ಎಸ್.ಎ.ಚಿನ್ನಾಪೂರ ರಚಿತ ‘ಭಾವಭೃಂಗ’ ಕವನ ಸಂಕಲನ ಬಿಡುಗಡೆ ಹಾಗೂ ಕವಿಗೋಷ್ಠಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೇವಲ ಅಭಿನಂದನೆಗಳನ್ನು ಸಲ್ಲಿಸುವುದಷ್ಟೇ ನಮ್ಮ ಕೆಲಸವಾಗದೆ, ಕವಿಯತ್ರಿಯರ ಕಾವ್ಯಗಳನ್ನು ಓದಬೇಕು ಮತ್ತು ಚಿನ್ನಾಪೂರ ಅವರ ಕಾವ್ಯಗಳನ್ನು ವಿಮರ್ಶಿಸಿದಾಗ ಅವರ ಕವನ ಸಂಕಲನಕ್ಕೆ ನಿಜವಾದ ನ್ಯಾಯ ಸಿಗುತ್ತದೆ. ಜಗತ್ತಿಗೆ ಒಳಿತು ಮಾಡುವ ಶಕ್ತಿ ಕಾವ್ಯಕ್ಕಿದೆ ಎಂದು ಹೇಳಿದರು.
ಕೃತಿಯನ್ನು ಬಿಡುಗಡೆ ಮಾಡಿದ ಗದಗಿನ ಹಿರಿಯ ಸಾಹಿತಿ ಎ.ಎಸ್.ಮಕಾನದಾರ ಮಾತನಾಡಿ, ‘ಭಾವಭೃಂಗ’ದಲ್ಲಿ ಅಂತಃಕರಣ ಗುಣವಿದೆ. ಅವರು ಕಂಡುಂಡ ಅನುಭವಗಳ ಸಾರವನ್ನೇ ಕವನಗಳನ್ನಾಗಿಸಿ ಕಾವ್ಯಾಸಕ್ತರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಲೀಮಾ ಚಿನ್ನಾಪೂರ’ರ ಮೊದಲ ಅಕ್ಷರ ಕೃಷಿ ಯಶಸ್ವಿಯಾಗಿದೆ ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಥಾಗುಚ್ಚದ ಸಂಘಟಕ ಗಿರೀಶ ಕುಲಕರ್ಣಿ ಅವರು ಮಾತನಾಡಿ, ಸಲೀಮಾ ಚಿನ್ನಾಪೂರ ಅವರು ಸಂವೇದನಾಶೀಲ ವ್ಯಕ್ತಿತ್ವದವರು. ಆ ಗುಣವೇ ಅವರ ಬಹುತೇಕ ಕವನಗಳ ಪ್ರತಿರೂಪವಾಗಿದೆ. ಅವರಿಂದ ಮತ್ತಷ್ಟು ಕೃತಿಗಳು ರಚನೆಯಾಗಿ ಕನ್ನಡ ಸಾಹಿತ್ಯಕ್ಕೆ ದೊಡ್ಡ ಕೊಡುಗೆಯಾಗಲಿ ಎಂದು ಶುಭ ಕೋರಿದರು.
ಕಾಲೇಜಿನ ಪ್ರಾಚಾರ್ಯ ಅರುಣಶೆಟ್ಟಿ ಮಾತನಾಡಿ, ಇಂದು ನಮ್ಮ ಕಾಲೇಜಿನ ಸಭಾಂಗಣ ಸಾಹಿತ್ಯದ ಕಲರವದಿಂದ ತುಂಬಿ ತುಳುಕಾಡುತ್ತಿದೆ. ಸಾಹಿತ್ಯದ ಕೃತಿಯೊಂದರ ಬಿಡುಗಡೆಗೆ ನಮ್ಮ ವಿದ್ಯಾಲಯ ಸಾಕ್ಷಿಯಾಗಿದ್ದು ನಮಗೂ ಸಂತಸ. ಇನ್ನು ಮುಂದೆಯೂ ತಮ್ಮೆಲ್ಲ ಸಾಹಿತ್ಯಿಕ ಕಾರ್ಯಕ್ರಮಗಳಿಗೆ ನಮ್ಮ ಸಹಾಯ ಇರುತ್ತದೆ ಎಂದರು.
ಸೌಹಾರ್ದ ಸಾಹಿತ್ಯ ವೇದಿಕೆಯ ಅಧ್ಯಕ್ಷ ಆರ್.ಎಮ್.ಗೋಗೇರಿ ಮಾತನಾಡಿ, ನಾಡಿನ ಹಿರಿಯ ಕವಿ ಎಮ್.ಡಿ.ಗೋಗೇರಿ ಅವರ ಸೊಸೆ ಸಲೀಮಾ ಚಿನ್ನಾಪೂರ ತಮ್ಮ ಮಾವನವರ ಸಾಹಿತ್ಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ನಮಗೆಲ್ಲ ಹೆಮ್ಮೆ. ನಮ್ಮ ವೇದಿಕೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ರಾಯಭಾರಿಯಾಗಿ ಇನ್ನೂ ಇಂತಹ ಹತ್ತು ಹಲವು ಕಾರ್ಯಕ್ರಮಗಳಿಗೆ ದಿಕ್ಸೂಚಿಯಾಗಿ ನಿಲ್ಲಲಿದೆ ಎಂದರು.
ಕವಯಿತ್ರಿ ಸಲಿಮಾ ಚಿನ್ನಾಪೂರ ಮಾತನಾಡುತ್ತಾ, ಪ್ರಕೃತಿ, ಗುಡ್ಡ ಬೆಟ್ಟ, ಶ್ರಮಿಕ ವರ್ಗ ಹಾಗೂ ಶ್ರೀಮಂತರ ಬದುಕಿನ ಅಸಮಾನತೆಯನ್ನು ನೋಡುತ್ತ ಪ್ರಕೃತಿಯ ಮಧ್ಯೆ ಬೆಳೆದವಳು. ಪ್ರಾಥಮಿಕ ಹಂತದಲ್ಲಿಯೇ ನನ್ನ ಮೇಲುಂಟಾದ ನನ್ನ ಗುರುಮಾತೆಯವರ ಸಾಹಿತ್ಯದ ಪ್ರಭಾವ ನನ್ನನ್ನು ಇಲ್ಲಿಯವರೆಗೂ ಕರೆತಂದಿದೆ ಎಂದು ಅವರ ಅಕ್ಷರ ಬದುಕಿನ ನಡೆದುಬಂದ ಹಾದಿ ಕುರಿತು ಹಂಚಿಕೊಂಡರು.
ವಿಜಯಲಕ್ಷ್ಮಿ ಮಳಯೆ ಪ್ರಾರ್ಥಿನೆ ಹಾಡಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸಲೀಮಾ ಚಿನ್ನಾಪೂರ ಅವರು ಕಥಾಗುಚ್ಛದ ಮೂಲಕ ನಮಗೆ ಸಿಕ್ಕ ಅಪರೂಪದ ಸ್ನೇಹಿತೆ. ಅವರ ಪ್ರತಿಯೊಂದು ಬರಹವೂ ಸಮರ್ಥ ಅಷ್ಟೇ ಪ್ರಭಾವಶಾಲಿ. ಪ್ರಕೃತಿಯನ್ನು ಸೂಕ್ಷ್ಮವಾಗಿ ಗಮನಿಸುವ ಅವರ ಕಲ್ಪನಾಶಕ್ತಿ ಅನನ್ಯ. ಆ ಕಲ್ಪನೆಗಳೇ ಇಂದು ಅಕ್ಷರ ರೂಪದಲ್ಲಿ ಹೊರಹೊಮ್ಮಿ ಭಾವಭೃಂಗದ ನಾದದ ಹೊನಲು ಹೊಮ್ಮಲು ಸಾಧ್ಯವಾಗಿದೆ ಎಂದರು.
ಇದನ್ನು ಓದಿದ್ದೀರಾ? ಬೆಳಗಾವಿ | ಸಾವಯವ ಕೃಷಿಯಿಂದಲೇ ಸ್ವಾವಲಂಬಿಯಾದ ರೈತ ಕಲ್ಲಪ್ಪ
ನಂತರ ನಡೆದ ಕವಿಗೋಷ್ಠಿಯಲ್ಲಿ ಪ್ರಕಾಶ ಕಡಮೆ, ಲೈಲಾ ಜಿ, ಕುಮುದಾ ದೇಶಪಾಂಡೆ, ಸಂದ್ಯಾ ಫಡ್ನೀಸ್, ಎಂ.ಬಿ.ಪವಾಡಶೆಟ್ಟರ, ಅಶ್ವಿನಿ ನಾಯಕ, ಎ.ಆರ್.ಧನಲಕ್ಷ್ಮಿ ಕವನ ವಾಚಿಸಿದರು. ಕೌಸರಾಭಾನು ಅತಿಥಿಗಳನ್ನು ಪರಿಚಯಿಸಿದರು. ಎಸ್.ಆರ್ ಗೋಗೇರಿ ವಂದಿಸಿದರು. ಎಂ.ಬಿ.ಪವಾಡಶೆಟ್ಟರ ನಿರೂಪಿಸಿದರು.