ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನಿಂದ ಬಾಲಕ ಕೆಳಗೆ ಬಿದ್ದಿದ್ದು, ಈ ವೇಳೆ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿ ಬಾಲಕನ್ನು ರಕ್ಷಣೆ ಮಾಡಿ ಸಮಯಪ್ರಜ್ಞೆ ಮೆರೆದಿದ್ದಾರೆ. ಬಾಲಕ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಆರ್‌ಪಿಎಫ್ ಸಿಬ್ಬಂದಿ ಹಲವು ಭಾಗಗಳಿಂದ ಮೆಚ್ಚುಗೆ ಪಡೆಯುತ್ತಿದ್ದಾರೆ.
ನಿಧಾನವಾಗಿ ಚಲಿಸುತ್ತಿದ್ದ ರೈಲಿನಿಂದ ಬಿದ್ದ ಬಾಲಕ ರೈಲು ಮತ್ತು ಪ್ಲಾಟ್ ಫಾರ್ಮ್ ನಡುವೆ ಸಿಲುಕಿಕೊಂಡಿದ್ದು, ಆರ್‌ಪಿಎಫ್ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಆತನನ್ನು ರಕ್ಷಿಸಲು ಮುಂದಾಗಿದ್ದಾರೆ. ನಂತರ ಅವರು ರೈಲಿನಲ್ಲಿದ್ದ ಪ್ರಯಾಣಿಕರಿಗೆ ತಕ್ಷಣ ರೈಲಿನ ಸರಪಳಿಯನ್ನು ಎಳೆಯುವಂತೆ ಹೇಳಿದ್ದಾರೆ. ಕೂಡಲೇ ರೈಲು ನಿಲ್ಲುತ್ತದೆ. ಬಳಿಕ ಬಾಲಕನನ್ನು ರೈಲಿನ ಕೆಳಗೆ ಸುರಕ್ಷಿತವಾಗಿ ಹೊರತೆಗೆದಿದ್ದು, ಆತನ ಪೋಷಕರಿಗೆ ಅವನನ್ನು ಹಸ್ತಾಂತರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಎರಡು ದಶಕಗಳಿಂದ ವಾಸ; ಹಕ್ಕುಪತ್ರಕ್ಕೆ ಹರಸಾಹಸ
“ಅಪ್ರಾಪ್ತ ತನ್ನ ಹೆತ್ತವರೊಂದಿಗೆ ರೈಲಿನ ಬಾಗಿಲ ಬಳಿ ಬಂದಾಗ ರೈಲಿನಿಂದ ಕೆಳಗೆ ಬಿದ್ದಿದ್ದಾನೆ” ಎಂದು ಆರ್‌ಪಿಎಫ್ ಸಿಬ್ಬಂದಿ ತಿಳಿಸಿದ್ದಾರೆ.
ಆರ್‌ಪಿಎಫ್ ಸಿಬ್ಬಂದಿ ಸುಲೋಚನಾ ಎಸ್ ಹಿರೇಮಠ್ ಬಾಲಕನನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ.