- ಬೆಂಗಳೂರಿನಲ್ಲಿ ಬಿಜೆಪಿ, ಉಡುಪಿಯಲ್ಲಿ ಎಬಿವಿಪಿ ಪ್ರತಿಭಟನೆ
- ಉಡುಪಿ ಕಾಲೇಜಿನ ಶೌಚಾಲಯದಲ್ಲಿ ಮೊಬೈಲ್ ಇಟ್ಟ ಪ್ರಕರಣ
ಉಡುಪಿಯ ಖಾಸಗಿ ಕಾಲೇಜೊಂದರ ಶೌಚಾಲಯದಲ್ಲಿ ಮೊಬೈಲ್ ಇಟ್ಟು ವಿಡಿಯೋ ಚಿತ್ರೀಕರಣ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಮತ್ತು ಉಡುಪಿಯಲ್ಲಿ ಎಬಿವಿಪಿ ಪ್ರತಿಭಟನೆ ನಡೆಸಿತು.
ಪೊಲೀಸರು ತನಿಖೆಯ ಹಾದಿ ತಪ್ಪಿಸುತ್ತಿರುವುದಾಗಿ ಆರೋಪಿಸಿ ಎಬಿವಿಪಿ ಉಡುಪಿಯಲ್ಲಿ ಪ್ರತಿಭಟನೆ ನಡೆಸಿತು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರ ಮಧ್ಯೆ ತಳ್ಳಾಟ ನೂಕಾಟವೂ ನಡೆಯಿತು.
ಬಳಿಕ ಸ್ಥಳಕ್ಕೆ ಬಂದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೇ ಅಕ್ಷಯ್ ಮಚ್ಚೀಂದ್ರ ತಮ್ಮ ಮೇಲಿನ ಆರೋಪಕ್ಕೆ ಸ್ಪಷ್ಟನೆ ನೀಡಿದ್ದು, ‘ನಾನು ಈ ಪ್ರಕರಣದ ಸಂಬಂಧ ನಡೆಸಿದ್ದ ಪತ್ರಿಕಾಗೋಷ್ಠಿಯ ವೇಳೆ ಘಟನೆಯೇ ನಡೆದಿಲ್ಲ ಅಂತ ಹೇಳಿಲ್ಲ. ವಿಡಿಯೋ ವೈರಲ್ ಆಗಿಲ್ಲ ಅಂತ ಅಷ್ಟೇ ಹೇಳಿದ್ದೇನೆ’ ಎಂದು ಸ್ಪಷ್ಟಪಡಿಸಿದರು.
‘ಈ ಬಗ್ಗೆ ತನಿಖೆ ನಡೆಸಲು ನಾವು ತಯಾರಿಲ್ಲ ಎಂದು ಎಲ್ಲಿಯೂ ನಾವು ಹೇಳಿಲ್ಲ. ತನಿಖೆ ನಡೆಸಲು ಬದ್ಧರಾಗಿದ್ದೇವೆ. ನಾನು ಅವತ್ತು ಪ್ರೆಸ್‌ಮೀಟ್‌ನಲ್ಲಿ ಎರಡು ಮೂರು ವಿಚಾರಗಳನ್ನು ಹೇಳಿದ್ದೇನೆ. ಕೆಲವು ಫೇಕ್ ವಿಡಿಯೋಗಳನ್ನು ಹರಿಯಬಿಟ್ಟು ಉಡುಪಿಯಲ್ಲಿ ನಡೆದದ್ದು ಅಂತ ಹರಿಯಬಿಟ್ಟಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ವೈರಲ್ ಆಗಿರುವ ವಿಡಿಯೋ ಎಲ್ಲಿಯೂ ನಮ್ಮ ಗಮನಕ್ಕೆ ಬಂದಿಲ್ಲ ಅಂತ ಅವತ್ತೂ ಹೇಳಿದ್ದೇನೆ, ಇವತ್ತೂ ಹೇಳುತ್ತಿದ್ದೇನೆ. ಈ ಬಗ್ಗೆ ಎಲ್ಲ ರೀತಿಯ ತನಿಖೆಗೆ ನಾವು ಸಿದ್ಧರಿದ್ದೇವೆ” ಎಂದು ಪ್ರತಿಭಟನಾನಿರತ ಎಬಿವಿಪಿ ಸಂಘಟನೆಯವರ ಮುಂದೆಯೇ ನೇರವಾಗಿ ತಿಳಿಸಿದರು.

‘ವಿದ್ಯಾರ್ಥಿನಿಯರ ಮೊಬೈಲ್ ಅನ್ನು ಕಾಲೇಜಿನವರೇ ಜು.22ರಂದು ನಮಗೆ ಹಸ್ತಾಂತರಿಸಿ, ವಿಡಿಯೋ ವೈರಲ್ ಮಾಡಲಾಗಿದೆಯೇ ಎಂದು ಪರಿಶೀಲಿಸಲು ತಿಳಿಸಿದ್ದರು. ಅದು ವೈರಲ್ ಆಗಿಲ್ಲ ಅಂತ ನಮ್ಮ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆರೋಪಿಗಳನ್ನು ರಕ್ಷಿಸುವ ಪ್ರಶ್ನೆಯೇ ನಮ್ಮಲ್ಲಿ ಇಲ್ಲ. ಇಲಾಖೆ ಮೇಲೆ ಯಾವುದೇ ಒತ್ತಡ ಯಾರಿಂದಲೂ ಇಲ್ಲ’ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚೀಂದ್ರ ತಿಳಿಸಿದರು.
ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ರೀತಿಯ ತನಿಖೆಯನ್ನು ನಡೆಸಿ ತಪ್ಪಿತಸ್ಥರ ಮೇಲೆ ಕಾನೂನಾತ್ಮಕ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಎಬಿವಿಪಿಯವರು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಶಾಸಕ ಯಶ್ಪಾಲ್ ಸುವರ್ಣ ಆಗಮಿಸಿದಾಗ ಪ್ರತಿಭಟನಾಕಾರರು ಮತ್ತು ಪೊಲೀಸರ ಮಧ್ಯೆ ತಳ್ಳಾಟ ನೂಕಾಟವೂ ನಡೆದಾಗ, ಸ್ಥಳದಲ್ಲಿ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಬೆಂಗಳೂರಿನಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ
ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಇಂದು ಪ್ರತಿಭಟನೆ ನಡೆಸಿದ ಬಿಜೆಪಿ ಮಹಿಳಾ ಮೋರ್ಚಾ, ಪ್ರಕರಣದ ಬಗ್ಗೆ ಸಿಐಡಿ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

‘ಇದು ಇಡೀ ಸಮಾಜ ತಲೆತಗ್ಗಿಸುವ ಅತ್ಯಂತ ಖೇದಕರ ಘಟನೆ. ಶೌಚಾಲಯದಲ್ಲಿ, ಬಾತ್‌ರೂಂನಲ್ಲಿ ಕ್ಯಾಮೆರಾ ಇಟ್ಟು ವಿಡಿಯೋ ಮಾಡಿರುವುದು ನಾಚಿಕೆಗೇಡಿನ ಸಂಗತಿ. ವಿಳಂಬವಾಗಿ ಎಫ್‌ಐಆರ್ ಮಾಡಿ ಪ್ರಕರಣವನ್ನು ಮುಚ್ಚಿಹಾಕುವ ಷಡ್ಯಂತ್ರ ನಡೆಸಲಾಗಿದೆ’ ಎಂದು ಆರೋಪಿಸಿದರು.
ಹಣೆಗೆ ಕಪ್ಪು ಪಟ್ಟಿ ಧರಿಸಿದ್ದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಶಾಸಕ ಡಾ. ಸಿ.ಎನ್. ಅಶ್ವತ್ಥ ನಾರಾಯಣ್, ಪರಿಷತ್ ಸದಸ್ಯ ಎಂ ಎನ್ ರವಿಕುಮಾರ್, ಮಹಿಳಾ ಮೋರ್ಚಾದ ಆಶಾ ರಾವ್, ರೇಖಾ ಗೋವಿಂದ, ವಿಜಯಲಕ್ಷ್ಮೀ ಆನಂದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.