ಕಳೆದ ಆರು ತಿಂಗಳಿನಿಂದ ಧಾರವಾಡ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ತಮ್ಮದೇ ಯೋಜನೆಗಳನ್ನು ಹೊಂದಿರುವುದಾಗಿ ತಿಳಿಸಿದರು.
ಧಾರವಾಡ ನಗರದ ಜರ್ನಲಿಸ್ಟ್ ಗಿಲ್ಡ್ ವತಿಯಿಂದ ಆಯೋಜಿಸಲಾಗಿದ್ದ ಪತ್ರಿಕಾ ಸಂವಾದ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ನೂತನ ಜಿಲ್ಲಾಧಿಕಾರಿ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ನೀಲನಕ್ಷೆ ಸಿದ್ಧಪಡಿಸಲಾಗಿದ್ದು, ಸರ್ಕಾರಕ್ಕೆ 92 ಕೋಟಿ ಹಣಕಾಸಿನ ನೆರವಿಗಾಗಿ ಕೋರಲಾಗಿದೆ. ಪ್ರಸ್ತುತ ಸಾಲಿನಲ್ಲೇ ಚಾಲನೆ ಆರಂಭಗೊಳ್ಳಬಹುದು” ಎಂದರು.
ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ, ಶೈಕ್ಷಣಿಕ ಮಟ್ಟ ಅದರಲ್ಲಿಯೂ ಎಸ್.ಎಸ್.ಎಲ್.ಸಿ ಯಲ್ಲಿ 22ನೇ ಸ್ಥಾನ ಪಡೆದಿದ್ದು ಮನಸ್ಸಿಗೆ ನೋವುಂಟು ಮಾಡಿತು. ವಿದ್ಯಾಕಾಶಿಯಲ್ಲಿ ಇಷ್ಟೊಂದು ಕೆಳಮಟ್ಟಕ್ಕೆ ಇಳಿದಿದ್ದು ಸರಿಯಲ್ಲ. ಅದಕ್ಕಾಗಿ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಶಿಕ್ಷಕರಿಗೆ ಪರೀಕ್ಷೆ, ಕಾರ್ಯಾಗಾರ ನಡೆಸುವ ಹಲವಾರು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಖಾಸಗಿ ಸಹಭಾಗಿತ್ವದಲ್ಲಿ ಪೌಷ್ಠಿಕಾಂಶದ ಆಹಾರ ವಿತರಣೆಗೆ ಅಷ್ಟೇ ಅಲ್ಲದೇ ಅಪೌಷ್ಠಿಕತೆಗೆ ಕಾರಣ ಕಂಡು ಹಿಡಿದು ಅದರ ನಿವಾರಣೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಇದನ್ನು ಓದಿದ್ದೀರಾ? ಶೀಘ್ರವೇ ಒಳಮೀಸಲಾತಿ ಕಲ್ಪಿಸಲು ಸಿಎಂ, ಡಿಸಿಎಂಗೆ ಮನವಿ ಮಾಡಿದ್ದೇವೆ: ಕೆ ಎಚ್ ಮುನಿಯಪ್ಪ
ನಗರದ ಕೆಲಗೇರಿ ಕೆರೆ ಅತ್ಯಂತ ಫುರಾತವಾದದ್ದು ಸಾಕಷ್ಟು ವಿಸ್ತಾರವಾಗಿದ್ದು ಇದರೊಂದಿಗೆ ಗ್ರಾಮೀಣ ಮಟ್ಟದಲ್ಲಿರುವ 110 ಕೆರೆ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಜಿಲ್ಲಾಸ್ಪತ್ರೆಯನ್ನು ಇನ್ನಷ್ಟು ಆಧುನೀಕರಣಗೊಳಿಸಲಾಗುತ್ತಿದೆ. ನೂತನ ಯಂತ್ರಗಳ, ಎಮ್ಆರ್‌ಐ ಸ್ಕ್ಯಾನ್, ಸಿಟಿ ಸ್ಕ್ಯಾನ್ ಸೇರಿದಂತೆ ಹೊಸ-ಹೊಸ ಯಂತ್ರಗಳನ್ನು ಆಳವಡಿಸಲಾಗುವದು. ಜಿಲ್ಲಾಸ್ಪತ್ರೆಯಲ್ಲಿ ಜನರ ಒತ್ತಡ ಹೆಚ್ಚಾಗುತ್ತಿದೆ. ಹೀಗಾಗಿ ಪಾರ್ಕಿಂಗ್ ಸಮಸ್ಯೆ ಮತ್ತು ಆಟೋ ಮೀಟರ್ ಅಳವಡಿಕೆಯ ಸಮಸ್ಯೆ ಬಗೆಹರಿಸಲು ತಿಳಿಸಿದರು.
ಜರ್ನಲಿಸ್ಟ್ ಗಿಲ್ಡ್ ಅಧ್ಯಕ್ಷ ಬಸವರಾಜ ಹೊಂಗಲ ಸ್ವಾಗತಿಸಿದರು, ಕಾರ್ಯದರ್ಶಿ ನಿಜಗುಣಿ ದಿಂಡಲಕೊಪ್ಪ ಪರಿಚಯಿಸಿದರು. ಗಿಲ್ಡ್ ಸದಸ್ಯರು ಉಪಸ್ಥಿತರಿದ್ದರು.