ನಮ್ಮ ಜನಾ ಚಂದ್ರನ ಮೇಲೆ ಕಾಲಿಟ್ಟರೂ, ಲದ್ದಿಯ ಮೇಲೆ ಕಾಲಿಟ್ಟರೆ ಒಳ್ಳೆಯದಾಗುತ್ತದೆ ಅನ್ನೋ ಬುದ್ದಿಯನ್ನ ಇನ್ನೂ ಬಿಟ್ಟಿಲ್ಲ. ಯಾಕೆ ಅಂತೀರಾ, ಅಕ್ಟೋಬರ್ 24ರ ಬೆಳಗ್ಗೆ ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ಆನೆಯ ಲದ್ದಿಯನ್ನ ಅಲ್ಲಿನ ಜನ ಕಾಲಿಂದ ತುಳಿಯುತ್ತಿದ್ದರು. ಅಲ್ಲದೇ. ಚಿಕ್ಕ ಚಿಕ್ಕ ಮಕ್ಕಳಿಗೂ ಪೋಷಕರು ಬಲವಂತದಿಂದ ಲದ್ದಿ ತುಳಿಸುತ್ತಿದ್ದರು.
ಕಾರಣವಿಷ್ಟೇ, ಆನೆಯ ಲದ್ದಿಯನ್ನ ಕಾಲಿನಿಂದ ತುಳಿದರೆ ಒಳ್ಳೆಯದಾಗುತ್ತದೆ ಎಂಬುದು ಅವರಲ್ಲಿರುವ ಮೌಢ್ಯದ ನಂಬಿಕೆ. ಇಂತಹ ಮೌಡ್ಯವನ್ನು ಮೈಸೂರು ಜನ ಆಚರಿಸುತ್ತಿರುವುದು ಶೋಚನೀಯ.
ಇಂತಹ ಮೌಢ್ಯಕ್ಕೆ ಬಲಿಯಾಗುವ ಜನರು ಲದ್ದಿ ತುಳಿಯಲೇಬೇಕು ಎಂದು ಕೊಂಡರೆ ಕಥೆ ಏನು? ಮೈಸೂರಿನವರಿಗೆ ದಸರಾ ಉತ್ಸವದ ಸಮಯದಲ್ಲಿ ಆನೆಗಳು ರಸ್ತೆಯ ಮೇಲೆ ಸಿಗುವ ಸಾಧ್ಯತೆ ಇದೆ. ಆದರೆ, ನಾಡಿನ ಬೇರೆ ಭಾಗಗಳಲ್ಲಿ ವಾಸವಾಗಿರೋ ಜನಗಳು ಆನೆಯನ್ನ ಅರಸಿಕೊಂಡು ಕಾಡು ಮೇಡು ಹೋಗಬೇಕಷ್ಟೇ.
ಇದೆಲ್ಲದರ ನಡುವೆ ಗಮನಿಸಬೇಕಾದ್ದು, ಒಳ್ಳೆಯಾದಾಗುವುದು ಎಂದರೇನು? ಜನರ ಪ್ರಕಾರ ಶ್ರೀಮಂತಿಕೆಯೇ? ಹಾಗಿದ್ದರೆ, ದಿನನಿತ್ಯ ಆನೆಯೊಂದಿಗೆ ಜೀವಿಸುವ ಆನೆ ಮಾವುತರು ಮತ್ತು ಅವರ ಕುಟುಂಬದವರ ಪರಿಸ್ಥಿತಿಯನ್ನು ಒಮ್ಮೆ ನೋಡಬಹುದು. ಮಾವುತರೂ ದಿನ ಬೆಳಗ್ಗೆ ಎದ್ದು ಆನೆ ಲದ್ದಿ ತುಳಿದಿದ್ದರೆ, ಅವರೂ ಶ್ರೀಮಂತರಾಗಿಬಿಡುತ್ತಿದ್ದರು ಅಲ್ಲವೇ!