- ಆರೋಪಿಗಳನ್ನು ಜು.17ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದ ನ್ಯಾಯಾಲಯ
- ಜುಲೈ 5ರಂದು ರಾತ್ರಿ ಜೈನಮುನಿಯನ್ನು ಹತ್ಯೆ ಮಾಡಿದ್ದ ಆರೋಪಿಗಳು
ಬೆಳಗಾವಿ ಜಿಲ್ಲೆಯ ಹಿರೇಕೋಡಿಯ ಜೈನಮುನಿ ಕಾಮಕುಮಾರನಂದಿ ಮಹಾರಾಜರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡಿ ಚಿಕ್ಕೋಡಿ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಮಂಗಳವಾರ ಆದೇಶಿಸಿದೆ.
ಜುಲೈ 17ರವರೆಗೆ ಪ್ರಕರಣದ ಎ1 ಆರೋಪಿ ನಾರಾಯಣ ಮಾಳಿ, ಎ2 ಆರೋಪಿ ಹಸನ್ ಸಾಬ್ ಅನ್ನು ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಲಾಗಿದೆ. ಕಸ್ಟಡಿಗೆ ಪಡೆದುಕೊಂಡಿರುವ ಚಿಕ್ಕೋಡಿ ಪೊಲೀಸರು, ಪ್ರಕರಣದ ಸಂಬಂಧ ಇನ್ನಷ್ಟು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್, ಡಿವೈಎಸ್ಪಿ ಬಸವರಾಜ ಯಲಿಗಾರ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗುತ್ತಿದ್ದು, ಪ್ರಕರಣದ ಸಂಪೂರ್ಣ ವಿವರಗಳನ್ನು ಕಲೆ ಹಾಕುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಧರ್ಮಸ್ಥಳ | ಸೌಜನ್ಯ ಪ್ರಕರಣವೇನು? 11 ವರ್ಷಗಳ ತನಿಖೆ ಹಳಿತಪ್ಪಿದ್ದು ಹೇಗೆ? ನಿಜಕ್ಕೂ ಅಪರಾಧಿಗಳಾರು? ಕಂಪ್ಲೀಟ್ ಡೀಟೇಲ್ಸ್
ಕಳೆದ ಜುಲೈ 5ರಂದು ರಾತ್ರಿ ಜೈನಮುನಿಯನ್ನು ಹತ್ಯೆ ಮಾಡಲಾಗಿತ್ತು. ಜು.6ರಂದು ನಾಪತ್ತೆಯಾಗಿರುವುದಾಗಿ ಸುದ್ದಿ ಹಬ್ಬಿತ್ತು. ಬಂಧನದ ಬಳಿಕ ಅವರನ್ನು ಹತ್ಯೆ ಮಾಡಿ, ಶವವನ್ನು ಕೊಳವೆ ಬಾವಿಗೆ ಹಾಕಿರುವುದಾಗಿ ಆರೋಪಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆರೋಪಿಗಳು ನೀಡಿದ ವಿವರವನ್ನು ಕಲೆಹಾಕಿ, ಪತ್ತೆ ಹಚ್ಚಿದಾಗ ಕಟಕಬಾವಿ ಗ್ರಾಮದ ಬಳಿಯ ಕೊಳವೆ ಬಾವಿಯಲ್ಲಿ ಮೃತದೇಹದ ತುಂಡುಗಳು ಪತ್ತೆಯಾಗಿದ್ದವು.
ಪಾರದರ್ಶಕ ತನಿಖೆಯನ್ನು ಸರ್ಕಾರ ನಡೆಸಬೇಕು : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿಪರ್ವತದಲ್ಲಿರುವ ಜೈನಮುನಿ ಕಾಮಕುಮಾರನಂದಿ ಮಹಾರಾಜರ ಆಶ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದ ತಂಡ ಮಂಗಳವಾರ ಭೇಟಿ ನೀಡಿದೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು ದೇಶದ ಗಮನ ಸೆಳೆದಿರುವ ಪ್ರಕರಣ. ಹಾಗಾಗಿ, ಈ ಪ್ರಕರಣದ ಸತ್ಯಾಸತ್ಯತೆ ಅರಿಯಲು ಭೇಟಿ ನೀಡಿದ್ದೇವೆ. ಘಟನೆ ಸಂಬಂಧ ಆಶ್ರಮದ ಬಲ್ಲವರೊಂದಿಗೆ ಮಾಹಿತಿ ಪಡೆದಿದ್ದೇವೆ. ಒಬ್ಬರ ಹೆಸರನ್ನು ಮುಚ್ಚಿಡುವ ಪ್ರಯತ್ನ ನಡೆದಿದೆ. ಬಿಜೆಪಿ ಸರ್ಕಾರ ಇದ್ದಾಗ ಕೂಡ ಪ್ರಮುಖ ಪ್ರಕರಣಗಳನ್ನು ಸಿಬಿಐ, ಎನ್‌ಐಎಗೆ ನೀಡಲಾಗಿತ್ತು. ಹಾಗಾಗಿ, ಈ ಪ್ರಕರಣದ ಬಗ್ಗೆ ಪಾರದರ್ಶಕ ತನಿಖೆಯನ್ನು ಸರ್ಕಾರ ನಡೆಸಬೇಕು. ಮುನಿಗಳಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ಶಾಸಕರಾದ ಮಹೇಶ್ ಟೆಂಗಿನಕಾಯಿ, ಅಭಯ್ ಪಾಟೀಲ್ ಈ ವೇಳೆ ಜೊತೆಗಿದ್ದರು.