ಕಲಬುರಗಿ ನಗರದ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ರಾಜೀವ್ ಗಾಂಧಿ ಅವರ ಜಯಂತಿಯ ಅಂಗವಾಗಿ ರಾಜೀವಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್ ಕಾರ್ಯಕ್ರಮವನ್ನು ಉಪಮುಖ್ಯಮಂತ್ರಿಗಳಾದ ಡಿ. ಕೆ ಶಿವಕುಮಾರ್ ಅವರೊಂದಿಗೆ ಉದ್ಘಾಟಿಸಿ, ವಿವಿಧ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯದ ಮಟ್ಟಿಗೆ ಇಂದು ಐತಿಹಾಸಿಕ ದಿನವಾಗಿದೆ. ದೇಶ ಕಂಡ ಮಹಾನ್ ನಾಯಕರಾದ ರಾಜೀವ್ ಗಾಂಧಿ ಹಾಗೂ ದೇವರಾಜ್ ಅರಸು ಅವರ ಜಯಂತಿ ಆಚರಿಸಲಾಗುತ್ತಿದೆ. ಅರಸು ಅವರು ಹಲವಾರು ಧೀಮಂತ ನಾಯಕರನ್ನು ಬೆಳೆಸಿ ಈ ನಾಡಿಗೆ ಕೊಡುಗೆಯಾಗಿ ನೀಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ರವರು ಇಂದು ರಾಷ್ಟ್ರಮಟ್ಟದಲ್ಲಿ ಬೆಳೆಯುವುದಕ್ಕೆ ಅರಸು ಅವರ ಆಶೀರ್ವಾದವೂ ಕಾರಣವಾಗಿದೆ ಎಂದು ತಿಳಿಸಿದರು.
1992 ರಲ್ಲಿ ಪಂಚಾಯತ್ ರಾಜ್ ಕಾಯಿದೆಗೆ 73 ನೇ ತಿದ್ದುಪಡಿ ತರುವ ಮೂಲಕ ಮೀಸಲಾತಿ ಜಾರಿಗೊಳಿಸಿ ಹಿಂದುಳಿದವರು ಹಾಗೂ ಸಮಾಜದಲ್ಲಿ ತಳ ಸಮುದಾಯದ ಜನರು ಕೂಡಾ ಪಂಚಾಯತ್ ಅಧ್ಯಕ್ಷರಾಗಲು ಅನುಕೂಲವಾಗಿದೆ. ಗಾಂಧೀಜಿಯವರ ಗ್ರಾಮ ಸ್ವರಾಜ್ ಕನಸನ್ನು ಈ ತಿದ್ದುಪಡಿಯ ಮೂಲಕ ರಾಜೀವ್ ಗಾಂಧಿ ಅವರು ನನಸು ಮಾಡಿದ್ದಾರೆ. ಪಂಚಾಯತ್ ರಾಜ್ ವ್ಯವಸ್ಥೆಯಿಂದ ಬಹಳಷ್ಟು ಜನರು ನಾಯಕರಾಗಿ ಬೆಳೆದಿದ್ದಾರೆ. ಹಾಗಾಗಿ, ಪಂಚಾಯತ್ ರಾಜ್ ನಾಯಕರನ್ನು ಬೆಳೆಸುವ ಕಾರ್ಖಾನೆಯಾಗಿದೆ ಎಂದರು.
ಈ ಮಹತ್ವದ ದಿನದಂದು ಪಂಚಾಯತ್ ರಾಜ್ ರಾಜೀವ್ ಗಾಂಧಿ ಫೆಲೋಶಿಪ್ ಕಾರ್ಯಕ್ರಮ ಜಾರಿಗೊಳಿಸುವ ಮೂಲಕ ಇಬ್ಬರು ಮಹನೀಯರ ಆಶಯದಂತೆ ಸಮಾಜದ ಕಟ್ಟಕಡೆಯ ಸಾಮಾನ್ಯ ನಾಗರಿಕರಿಗೆ ಸೌಲಭ್ಯ ಒಗದಗಿಸುತ್ತಿದ್ದೇವೆ. ಇದು ಹೆಮ್ಮೆಯ ಸಂಗತಿಯಾಗಿದೆ. ರಾಜೀವ್ ಗಾಂಧಿ ಅವರ ದೂರದೃಷ್ಟಿಯಿಂದಾಗಿ ರಾಜ್ಯ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿ ಇಂದು ಮಾಹಿತಿ ತಂತ್ರಜ್ಞಾನ ಕ್ರಾಂತಿಯಾಗಿದೆ. ಇದರ ಪರಿಣಾಮವಾಗಿ 4 ಲಕ್ಷ ಕೋಟಿ ಐಟಿ ಸೇವೆ ರಫ್ತಾಗಿದ್ದು ರಾಜ್ಯವು ವಿಶ್ವದ ನಾಲ್ಕನೆಯ ಅತಿದೊಡ್ಡ ಕ್ಲಸ್ಟರ್ ಆಗಿ ಹೊರಹೊಮ್ಮಿದೆ ಎಂದು ತಿಳಿಸಿದರು.
ಸಮೃದ್ದ, ಸಶಕ್ತ ಹಾಗೂ ಪ್ರಬುದ್ಧ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ನಿರ್ಮಾಣ ಮಾಡಲು ನೀವೆಲ್ಲ ನಮ್ಮೊಂದಿಗೆ ಕೈಜೋಡಿಸಿ ಎಂದು ಮನವಿ ಮಾಡಿದರು.
