ಕಲಬುರಗಿ ಜಿಲ್ಲೆಯಾದ್ಯಂತ ಹಲವು ಹಳ್ಳಿಗಳಿಗೆ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಎಐಡಿಎಸ್ಒ ನೆತೃತ್ವದಲ್ಲಿ ವಿದ್ಯಾರ್ಥಿಗಳು ನಗರದ ಕಲ್ಯಾಣ ಕರ್ನಾಟಕ ಸಾರಿಗೆ ವಿಭಾಗೀಯ ಕಚೇರಿ ಎದುರು ಪ್ರತಿಭಟನೆ ನಡೆಸಿ ಸಾರಿಗೆ ವಿಭಾಗೀಯ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿದರು.
ಎಐಡಿಎಸ್‌ಒ ಜಿಲ್ಲಾ ಖಜಾಂಚಿ ವೆಂಕಟೇಶ ದೇವದುರ್ಗ ಮಾತನಾಡಿ, “ದೂರದ ಹಲವಾರು ಹಳ್ಳಿ-ಪಟ್ಟಣಗಳಿಂದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಕಲಬುರಗಿ ನಗರಕ್ಕೆ ಬರುತ್ತಾರೆ. ಆದರೆ ಜಿಲ್ಲೆಯಾದ್ಯಂತ ಹಲವಾರು ಹಳ್ಳಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಸೌಲಭ್ಯ ಇಲ್ಲದಿರುವುದರಿಂದಾಗಿ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತರಗತಿಗಳಿಗೆ ಹಾಜರಾಗಲಾಗುತ್ತಿಲ್ಲ. ಹಳ್ಳಿಗಳಿಂದ ಬರುವ ಕೆಲವೇ ಬಸ್‌ಗಳಲ್ಲಿ ನಿಲ್ಲಲು ಜಾಗವಿಲ್ಲದಂತೆ ತುಂಬಿ ಬರುತ್ತವೆ. ನಿತ್ಯವೂ ವಿದ್ಯಾರ್ಥಿಗಳು ಜೀವ ಭಯದಿಂದಲೇ ಪ್ರಯಾಣ ಬೆಳೆಸುತ್ತಿದ್ದಾರೆ. ಹಲವಾರು ಸಲ ಅಪಘಾತಗಳು ಕೂಡ ಸಂಭವಿಸಿವೆ. ಇದರ ಬಗ್ಗೆ ಅಧಿಕಾರಿಗಳ ಗಮನಕ್ಕೆ ಬಂದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಆರೋಪಿಸಿದರು.
ಜಿಲ್ಲಾ ಉಪಾಧ್ಯಕ್ಷೆ ಪ್ರೀತಿ ದೊಡ್ಡಮನಿ ಮಾತನಾಡಿ, “ವಿದ್ಯಾರ್ಥಿಗಳ ಶಿಕ್ಷಣಕ್ಕೆ ಎಲ್ಲ ರೀತಿಯ ಅನುಕೂಲ ಮಾಡಿಕೊಡಬೇಕಾಗಿರುವುದು ಸರ್ಕಾರದ ಜವಾಬ್ದಾರಿಯಾಗಬೇಕು. ಆದರೆ ಎಷ್ಟೋ ಹಳ್ಳಿಗಳಿಗೆ ಕನಿಷ್ಟ ಬಸ್ ಸೌಲಭ್ಯವಿಲ್ಲದೆ ಇರುವುದರಿಂದ ಉನ್ನತ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅಧಿಕಾರಿಗಳು ಈ ಸಮಸ್ಯೆಗಳ ತೀವ್ರತೆಯ ಬಗ್ಗೆ ಎಚ್ಚೆತ್ತುಕೊಂಡು ವಿದ್ಯಾರ್ಥಿಗಳ ಶಿಕ್ಷಣದ ಹಿತದೃಷ್ಟಿಯಿಂದ ಕೂಡಲೇ ಎಲ್ಲ ಹಳ್ಳಿಗಳಿಗೆ ಸಮಯಕ್ಕೆ ಸರಿಯಾಗಿ, ಅವಶ್ಯಕತೆಗೆ ತಕ್ಕಷ್ಟು ಬಸ್ ಸೌಲಭ್ಯ ಒದಗಿಸಬೇಕು” ಎಂದು ಆಗ್ರಹಿಸಿದರು.
1. ಕಲಬುರಗಿ ಜಿಲ್ಲೆಯಾದ್ಯಂತ ಎಲ್ಲ ಹಳ್ಳಿಗಳಿಗೂ ಸಮರ್ಪಕವಾಗಿ ಬಸ್ ಸೌಲಭ್ಯ ಒದಗಿಸಬೇಕು.
2. ಹೊಸಳ್ಳಿ, ಹೊಲ್ಲೂರು, ಕೋಗನೂರು, ಕೊಂಚೂರು, ಇಂಗನಕಲ್, ಮಲಕ್ಪಲ್ಲಿ, ಹರಕಂಚಿ, ಫಿರೋಜಾಬಾದ್, ಅಪ್ಪಚಂದ್, ಗೌಡ್ ಗೌನ್, ಕಡಬೂರ, ಇವಣಿ, ಹಿಪ್ಪರಗಾ ಎಸ್ ಎನ್, ರಾಮನಗುಡ ಹಳ್ಳಿಗಳಿಗೆ ಕೂಡಲೇ ಬಸ್ ವ್ಯವಸ್ಥೆ ಕಲ್ಪಿಸಬೇಕು.
3. ವಿದ್ಯಾರ್ಥಿಗಳ ಶಾಲಾ ಕಾಲೇಜಿನ ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯ ಒದಗಿಸಬೇಕು.
4. ಭೀಮಳ್ಳಿ , ವಾಡಿ, ಸ್ಟೇಷನ್ ಗಣಗಾಪುರ, ಸಿಂದಗಿ ಬಿ, ಬಂಗರಗಾ, ದಂಗಾಪುರ, ಗುಂಡ ಗುರುತಿ, ಕಣಮುಸ್, ಕಲಗುರುತಿ, ಜವಳಿ, ಸಾವಳಗಿ ಹಲವಾರು ಹಳ್ಳಿಗಳಿಗೆ ಶಾಲಾ ಕಾಲೇಜಿನ ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯ ಒದಗಿಸಬೇಕು.
5. ನಂದೂರ್ ಕೆ, ಮುಗುಟಾ, ಶರಣ ಸಿರಸಿಗಿ, ಮಾಹಾಗಾಂವ್ ಕ್ರಾಸ್, ತಿಳಗೊಳ್ ಹಲವಾರು ಹಳ್ಳಿಗಳ ಮಾರ್ಗದಿಂದ ಹೊರಡುವ ಎಲ್ಲ ಬಸ್‌ಗಳು ನಿಲ್ಲುವ ವ್ಯವಸ್ಥೆ ಆಗಬೇಕು.
6. ಬೆಳಿಗ್ಗೆ 8 ರಿಂದ 10 ಗಂಟೆಯವರೆಗೆ, ಮಧ್ಯಾಹ್ನ 2:30ರಿಂದ 4ರವರೆಗೆ ಕೇಂದ್ರ ಬಸ್ ನಿಲ್ದಾಣದಿಂದ ಮಾರ್ಕೆಟ್‌ಗೆ ಹೊರಡುವ ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕೆಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಕರ್ನಾಟಕ ಒನ್‌ನಲ್ಲಿ ಬಸ್ ಪಾಸ್ ವಿತರಣೆಗೆ ಹೆಚ್ಚಿನ ಹಣ ವಸೂಲಿ; ಆರೋಪ
ಈ ಸಂದರ್ಭದಲ್ಲಿ ಎಐಡಿಎಸ್ಒ ಜಿಲ್ಲಾ ಉಪಾಧ್ಯಕ್ಷ ನಾಗರಾಜ್ ರಾವೂರ್, ಸದಸ್ಯರಾದ, ಸಿದ್ದಾರ್ಥ್ ತಿಪ್ಪನೋರ, ಯುವರಾಜ ರಾಠೋಡ, ತುಳಜರಾಮ ಎನ್ ಕೆ, ಜಿಲ್ಲಾ ಕಾರ್ಯದರ್ಶಿ ಪ್ರೀತಿ, ದೊಡ್ಡಮನಿ, ಬಾಬು, ಅಜಯ್, ಸ್ಪೂರ್ತಿ, ರಮೇಶ್ ಹಾಗೂ ನೂರಾರು ವಿದ್ಯಾರ್ಥಿಗಳು ಇದ್ದರು.
