ಸೇಡಂ ಪಟ್ಟಣ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಪರಿಹರಿಸಿ, ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ಗೊಂದಲವನ್ನು ಬಗೆಹರಿಸಲು ಒತ್ತಾಯಿಸಿ ಎಐಡಿಎಸ್ಒ ತಹಸೀಲ್ದಾರ್ ಕಚೇರಿ ಎದುರು ಬೃಹತ್ ಪ್ರತಿಭಟನೆ ಮಾಡುವುದರ ಮೂಲಕ ತಹಸೀಲ್ದಾರ್ ಮುಖಾಂತರ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಪ್ರತಿಭಟನೆ ಉದ್ದೇಶಿಸಿ ಸ್ನೇಹಾ ಕಟ್ಟಿಮನಿ ಮಾತನಾಡಿ, ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳ ಅಥಿತಿ ಉಪನ್ಯಾಸಕರು ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ತರಗತಿಗಳನ್ನು ಬಹಿಷ್ಕರಿಸಿ, ಕಳೆದ ಎರಡು ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಬಹುಪಾಲು ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿರುವ ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಬಹುತೇಕ ತರಗತಿಗಳು ಸ್ಥಗಿತಗೊಂಡಿವೆ. ಒಂದೆಡೆ ತರಗತಿಗಳು ನಡೆಯುತ್ತಿಲ್ಲ ಮತ್ತು ಇನ್ನೊಂದೆಡೆ ಸೆಮಿಸ್ಟರ್ ಪರೀಕ್ಷೆಯ ದಿನಾಂಕಗಳು ಸಮೀಪಿಸುತ್ತಿವೆ. ಶೈಕ್ಷಣಿಕವಾಗಿ ನಷ್ಟ ಅನುಭವಿಸುತ್ತಿರುವ ವಿದ್ಯಾರ್ಥಿಗಳನ್ನು ಈ ಪರಿಸ್ಥಿತಿಯು ಸಾಕಷ್ಟು ಆತಂಕಕ್ಕೆ ತಳ್ಳಿದೆ.
ಘನ ರಾಜ್ಯ ಸರ್ಕಾರವು ಕೂಡಲೇ ಈ ಕುರಿತು ಗಮನಹರಿಸಬೇಕು. ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಪರಿಶೀಲಿಸಿ ಅವರಿಗೆ ನ್ಯಾಯ ಒದಗಿಸಬೇಕು ಮತ್ತು ಕಾಲೇಜುಗಳಲ್ಲಿ ಪಾಠಗಳು ಸರಿಯಾಗಿ ನಡೆಯುವ ನಿಟ್ಟಿನಲ್ಲಿ ಪೂರಕ ವಾತಾವರಣವನ್ನು ಕಲ್ಪಿಸಬೇಕೆಂದು ಎಐಡಿಎಸ್ಒ ಈ ಮೂಲಕ ಕರ್ನಾಟಕ ರಾಜ್ಯ ಸರ್ಕಾರವನ್ನು ವಿನಂತಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಸ್ನೇಹಾ ಕಟ್ಟಿಮನಿ, ಗೋವಿಂದ ಯಳವಾರ, ಕಾಲೇಜು ವಿದ್ಯಾರ್ಥಿಗಳು ಮುನಿಪ್ಪ, ಚಂದ್ರಕಲಾ, ಭಾಗ್ಯ, ಕೀರ್ತಿ, ಕಾವೇರಿ ಸೇರಿ 800ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.