ಬಿಜೆಪಿ ಮುಖಂಡ, ರೌಡಿ ಶೀಟರ್ ಮಣಿಕಂಠ ರಾಠೋಡ್ ಮತ್ತು ಆಪ್ತ ಸ್ನೇಹಿತ ಶ್ರೀಕಾಂತ್ ಸುಲೇಗಾವ ಇಬ್ಬರ ಮೇಲೆ ಮಧ್ಯರಾತ್ರಿ ಕಿಡಿಗೇಡಿಗಳು ಬಿಯರ್ ಬಾಟಲ್‌ಗಳಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಚಿತ್ತಾಪುರ ತಾಲೂಕಿನ ಮಾಲಗತಿ ಹೆದ್ದಾರಿಯ, ಶಂಕರವಾಡಿ ಕ್ರಾಸ್ ಹತ್ತಿರ ಭಾನುವಾರ ನಸುಕಿನ 3.30ರ ಸುಮಾರಿಗೆ ಇಬ್ಬರು ಕಲಬುರಗಿಗೆ ಆಗಮಿಸುತ್ತಿದ್ದ ವೇಳೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ.
ಹಲ್ಲೆಯಿಂದಾಗಿ ಮಣಿಕಂಠ ರಾಠೋಡ್ ಅವರ ಕಿವಿಯ ಹಿಂದೆ ಮತ್ತು ಕೈಗೆ ಗಂಭೀರ ಗಾಯಗಳಾಗಿದ್ದು, ಶ್ರೀಕಾಂತ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇಬ್ಬರೂ ಪ್ರಾಣಾಪಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಸದ್ಯ ಇಬ್ಬರಿಗೂ ಮೆಡಿಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಹಲ್ಲೆ ಮಾಡಿದವರ ಗುರುತು ಮತ್ತು ಹಲ್ಲೆಗೆ ಕಾರಣ ತಿಳಿದುಬಂದಿಲ್ಲ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.