ಕಲಬುರಗಿ ಜಿಲ್ಲೆಯ ದಕ್ಷಿಣ ಕ್ಷೇತ್ರದ ಭೀಮಳ್ಳಿ ಗ್ರಾಮದ ದಲಿತ ಓಣಿಯಲ್ಲಿ ನೀರಿನ ಸೌಲಭ್ಯ ಸಿಕ್ಕಿಲ್ಲ. ಹಿಂದಿನ ಕಾಲಘಟ್ಟದಂತೆ ಪ್ರಸ್ತುತ ದಿನಗಳಲ್ಲಿಯೂ ಕೂಡ ಬಾವಿ ನೀರು ಸೇದುವ ಅನಿವಾರ್ಯತೆ ಎದುರಾಗಿದೆ.
ದಲಿತ(ಮಾದಿಗ ಸಮುದಾಯದ) ಕುಟುಂಬಗಳು ವಾಸವಾಗಿರುವ ಓಣಿಯಲ್ಲಿ ಸುಮಾರು ವರ್ಷಗಳಿಂದ ಕುಡಿಯಲು, ಬಳಸಲು ನೀರಿಲ್ಲ. ಸರ್ಕಾರದಿಂದ ನೀರಿನ ಟ್ಯಾಂಕ್, ಜಲಜೀವನ ಮಷೀನ್ ಮನೆಗೊಂದು ನಳ ಮಾಡಿದ್ದಾರೆ. ಅವುಗಳು ತೋರಿಕೆ ರೂಪದಲ್ಲಿವೆಯೇ ವಿನಃ ಒಂದು ದಿನವೂ ಅದರಲ್ಲಿ ನೀರು ಬಂದಿಲ್ಲ. ಟ್ಯಾಂಕ್‌ಗಳಿಂಗೆ ಪೈಪ್‌ಲೈನ್ ವ್ಯವಸ್ಥೆ ಕೂಡ ಆಗಿಲ್ಲ. ಸುಮನೆ ಕಟ್ಟಿ ಬಿಟ್ಟಿದ್ದಾರೆ ಅಷ್ಟೆ!
“ಬಳಸುವುದಕ್ಕೆ, ಕುಡಿಯುವುದಕ್ಕೆ ನಾವು ಪ್ರತಿನಿತ್ಯ ಬಾವಿಯಿಂದ ನೀರು ಸೇದಿ ಹೊತ್ತು ತರುವಂತಹ ಅನಿವಾರ್ಯತೆ ಎದುರಾಗಿದೆ. ತೆರೆದ ಬಾವಿಯಿಲ್ಲಿ ಕಸಕಡ್ಡಿ, ಮಳೆ ನೀರು ಸೇರಿಕೊಳ್ಳುತ್ತಿದೆ. ಇದರಿಂದ ಬಾವಿಯ ನೀರು ಕಲುಸಿತಕೊಂಡು ಅದೇ ಬಾವಿ ನೀರು ಸೇವಿಸಿದರೆ ರೋಗ ರುಜಿನಗಳು ಹರಡಬಹುದೆನ್ನುವ ಆತಂಕ ಮನೆಮಾಡಿದೆ. ಆದರೆ ದಲಿತರ ಓಣಿ ಅಂದ್ರೆ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷಿಸುತ್ತಾರೆ” ಎಂದು ಭೀಮಳ್ಳಿ ಗ್ರಾಮಸ್ಥರು ಆರೋಪಿದರು.
ಶ್ರೀದೇವಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಎಸ್‌ಸಿ ಜನರ ಬಗ್ಗೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ನಿರ್ಲಕ್ಷ್ಯವಾಗಿದೆ. ನಾವು ಸತ್ತಿದ್ದೇವಾ ಬದುಕಿದ್ದೇವಾ ಎಂದೂ ಕೂಡ ನೋಡುವುದಿಲ್ಲ. ನೀರಿಗಾಗಿ ಬೀದಿ ಬೀದಿ ಅಲೆದು ನೀರು ತರುವ ಪರಿಸ್ಥಿತಿ ಇದೆ. ಅವರು ನೀರು ಕೊಡಲಿಲ್ಲ ಅಂದರೆ ಬಾವಿಯಿಂದ ನೀರು ಸೇದಿ ತರುವಷ್ಟರಲ್ಲಿ ಕೆಲಸದ ಸಮಯ ಮೀರಿ ಹೋಗಿರುತ್ತೆ. ಕೆಲಸ ಬಿಟ್ಟು ಕೂತರೆ ನಮ್ಮ ಹೊಟ್ಟೆ ಬಟ್ಟೆ ಹೇಗೆ ನಡೆಯಬೇಕು” ಎಂದು ಅಧಿಕಾರಿಗಳ, ಜನಪ್ರತಿನಿಧಿಗಳ ವಿರುದ್ಧ ಕಿಡಿಕಾರಿದರು.
ಸುಗಲಬಾಯಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಮ್ಮ ಮಕ್ಕಳು, ಸೊಸೆಯಂದಿರು ದುಡಿಯಲು ಬಾಂಬೆ, ಪೂನಾ ಹೋಗಿದ್ದಾರೆ. ನಾವು ವಯಸ್ಸಾದವರು ಬಾವಿಯಿಂದ ಹೇಗೆ ನೀರು ಸೇದಿ ತರಬೇಕು. ಅವರಿವರ ಮಕ್ಕಳಿಗೆ ಕೈ ಕಾಲು ಬಿದ್ದು ಒಂದು ಕೊಡ ನೀರು ತಂದು ಕೊಡಿರೆಂದು ಬೇಡಿಕೊಳ್ಳಬೇಕು. ನಮ್ಮ ಓಣಿಗೆ ನೀರಿನ ಸೌಲಭ್ಯ ಕಲ್ಪಿಸಿಕೊಡಿ” ಎಂದು ಮನವಿ ಮಾಡಿದರು.
ದೂಳಮ್ಮ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನೀರಿನ ಟ್ಯಾಂಕ್ ಮತ್ತು ಜಲಜೀವನ ಮಷೀನ್ ಮನೆಗೊಂದು ನಳ ಮಾಡಿದ್ದಾರೆ. ಆದರೆ ಅದರಲ್ಲಿ ನೀರು ಬರುವುದಿಲ್ಲ. ಪೈಪ್‌ಲೈನ್ ವ್ಯವಸ್ಥೆ ಕೂಡ ಸರಿಯಾಗಿ ಆಗಿಲ್ಲ. ನಾಮಕಾವಸ್ತೆಗೆ ನೀರಿನ ಟ್ಯಾಂಕ್ ಕಟ್ಟಿ ಬಿಟ್ಟಿದ್ದಾರೆ. ನಾವು ಬಾವಿ ಮುಂದೆ ಒಬ್ಬರ ಮೇಲೊಬ್ಬರು ಬಿದ್ದು, ನೀರು ಹೊತ್ತು ತರುವ ಪರಿಸ್ಥಿತಿ ಇದೆ. ಎರಡ್ಮೂರು ದಿನಗಳಿಂದ ಶೇಖರಣೆ ಮಾಡಿಟ್ಟ ನೀರನ್ನೇ ಬಳಸುತ್ತಿದ್ದೇವೆ. ನಿತ್ಯ ನೀರು ಸೇದಿ ತರಲು ಆಗುವುದಿಲ್ಲ. ನೀರು ಹೊತ್ತು ತರುವಷ್ಟರಲ್ಲಿ ಕೂಲಿ ಕೆಲಸದ ಸಮಯ ಮೀರಿ ಹೋಗಿರುತ್ತೆ. ಇದೇ ರೀತಿಯಾದರೆ ನಮ್ಮ ಸಾಲ ಸವದ ಹೇಗೆ ಕಟ್ಟಿಕೊಳ್ಳಬೇಕು” ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಈ ಸುದ್ದಿ ಓದಿದ್ದೀರಾ? ದೇವದಾರಿಯಲ್ಲಿ ಗಣಿಗಾರಿಕೆಗಿಲ್ಲ ದಾರಿ; ಅನುಮತಿ ನಿರಾಕರಿಸಲು ಅರಣ್ಯ ಸಚಿವ ಖಂಡ್ರೆ ಸೂಚನೆ
ನಾಗಮ್ಮ ಗ್ರಾಮಸ್ಥರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನೀರಿನ ಸಮಸ್ಯೆ ತುಂಬಾ ಕಾಡುತ್ತಿದೆ. ನಾನು ವಯಸ್ಸಾದವಳು ನೀರು ಹೊತ್ತು ತರಲು ಆಗುವುದಿಲ್ಲ. ಯಾರಾದರೂ ನೀರು ತಂದುಕೊಟ್ಟರೆ ಮಾತ್ರ ನನಗೆ ನೀರು ಸಿಗುತ್ತದೆ. ನೀರು ಪ್ರತಿನಿತ್ಯ ಅತೀ ಮುಖ್ಯವಾಗಿ ಬೇಕು. ಅದರಿಂದ ನಮಗೆ ನೀರಿನ ಸವಲತ್ತು ಮಾಡಿಕೊಡಿ” ಎಂದು ಬೇಡಿಕೊಂಡರು.

ಗೀತಾ ಹೊಸಮನಿ
ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.