ಶಾಸಕರ ಸಂಬಳ ಭತ್ಯೆಗಳನ್ನು ಯಾವ ನಾಚಿಕೆ ಇಲ್ಲದೆ ಹೆಚ್ಚಿಸಿಕೊಂಡ ಕಾಂಗ್ರೆಸ್, ಬಿಜೆಪಿ ಹಾಗೂ ಜನತಾದಳ ಶಾಸಕರು ಜನಸಾಮಾನ್ಯರ ಬದುಕಿಗೆ ಮಾತ್ರ ಯಾವುದೇ ರಿಯಾಯಿತಿ ನೀಡದೆ ಡೀಸೆಲ್, ಟೋಲ್ ದರ ಏರಿಕೆ ಮಾಡಿರುವುದು ಖಂಡನಾರ್ಹ ಎಂದು ಕಲಬುರಗಿ ಜಿಲ್ಲಾ ಸಿಪಿಐ(ಎಂ) ಕಾರ್ಯದರ್ಶಿ ಕೆ.ನೀಲಾ ಆಕ್ರೋಶ ವ್ಯಕ್ತಪಡಿಸಿದರು.
ʼಡೀಸೆಲ್ ದರ ಪ್ರತಿ ಲೀಟರ್‌ಗೆ ₹2 ರಷ್ಟು ಏರಿಕೆ ಮಾಡಿರುವುದು ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಶೇ 4 ರಿಂದ 5ರಷ್ಟು ಟೋಲ್ ದರವನ್ನು ಹೆಚ್ಚಳ ಮಾಡಿರುವುದು ಅತ್ಯಂತ ಜನವಿರೋಧಿ ಕ್ರಮಗಳಾಗಿವೆ. ಈ ಎರಡು ದರ ಏರಿಕೆ ಕ್ರಮ ಕೂಡಲೇ ಕೈಬಿಡಬೇಕುʼ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ʼರಾಜ್ಯ ಸರ್ಕಾರವು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ 18.44ರಿಂದ ಶೇ 21.77ಕ್ಕೆ ಏರಿಕೆ ಮಾಡಿ, ಅದೇಶಿಸಿದೆ. ಬೆಂಗಳೂರಿನಲ್ಲಿ ₹89.02 ಇದ್ದ ಡೀಸೆಲ್ ಬೆಲೆ ₹91.02 ಆಗಲಿದೆ. ಉಳಿದ ಜಿಲ್ಲೆಗಳಲ್ಲಿ ಈಗಿರುವ ದರಕ್ಕೆ ಅನುಗುಣವಾಗಿ ಶೇಕಡಾ 2.73ರಷ್ಟು ಹೆಚ್ಚಳವಾಗಲಿದೆ. ನೆರೆ ರಾಜ್ಯಗಳಿಗೆ ಹೋಲಿಸಿದರೆ ಈಗ ತೆರಿಗೆ ದರ ಏರಿಕೆಯ ನಂತರ ಮಾರಾಟ ಬೆಲೆ ಹೆಚ್ಚಳವಾದರೂ, ನೆರೆಯ ರಾಜ್ಯಗಳಿಗಿಂತ ಕರ್ನಾಟಕ ದಲ್ಲಿಯೇ ಡೀಸೆಲ್ ಬೆಲೆ ಕಡಿಮ ಇರಲಿದೆ’ ಎಂದು
ಸರ್ಕಾರದ ಆರ್ಥಿಕ ಇಲಾಖೆ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿರುವುದು ಅರ್ಥಹೀನʼ ಎಂದರು.
‘ಗ್ಯಾರಂಟಿ ಯೋಜನೆಗೆ ಹಣನೀಡುವ ನೆಪದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರವು ಜನ ಸಾಮಾನ್ಯರ ಬದುಕಿನ ಮೇಲೆ ಬೆಲೆ ಏರಿಕೆಯ ಗದಾ ಪ್ರಹಾರವನ್ನೇ ಹರಿಯಬಿಟ್ಟಿದೆ. ಶಾಸಕರ ಸಂಬಳ ಭತ್ಯೆಗಳನ್ನು ಯಾವ ನಾಚಿಕೆ ಇಲ್ಲದೆ ಹೆಚ್ಚಿಸಿಕೊಂಡ ಕಾಂಗ್ರೆಸ್, ಬಿಜೆಪಿ ಹಾಗೂ ಜನತಾದಳ ಶಾಸಕರು ಜನಸಾಮಾನ್ಯರ ಬದುಕಿಗೆ ಮಾತ್ರ ಯಾವುದೇ ರಿಯಾಯಿತಿ ನೀಡದಿರುವುದು ಖಂಡನಾರ್ಹವಾಗಿದೆ. ಹಾಲಿನ ಬೆಲೆ, ವಿದ್ಯುತ್ ದರ ಮತ್ತು ಕಸ ಸಂಗ್ರಹಣೆ ದರ ಏರಿಕೆಯ ಕಹಿಗಳನ್ನು ಅನುಭವಿಸುತ್ತಿರುವಾಗಲೇ ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಹಾಲು, ಡೀಸೆಲ್ ಮತ್ತು ಟೋಲ್ ದರ ಹೆಚ್ಚಳ ಮಾಡಿದ ಪರಿಣಾಮ ಜನರ ಬದುಕು ಮತ್ತಷ್ಟು ದುಸ್ಥರವಾಗಿದೆʼ ಎಂದು ಹೇಳಿದರು.
ʼದೇಶದಾದ್ಯಂತ ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ಟೋಲ್ ದರವನ್ನು ಶೇ 4ರಿಂದ ಶೇ 5ರಷ್ಟು ಹೆಚ್ಚಳ ಮಾಡಿದ್ದು, ಮಂಗಳವಾರದಿಂದಲೇ ಜಾರಿಯಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ನೀತಿಯು ಜನಸಾಮಾನ್ಯರ ಬದುಕನ್ನು ಮತ್ತಷ್ಟು ದುಸ್ಥರಗೊಳಿಸಿದ್ದು, ಮೋದಿ ಸರ್ಕಾರ ಜನರ ಬದುಕಿನ ಮೇಲೆ ಮತ್ತಷ್ಟು ಹೊರೆ ಹೊರಿಸಲು ಹೊರಟಿರುವುದು ಅನ್ಯಾಯದ ಪರಮಾವಧಿಯಾಗಿದೆ’ ಎಂದು ಸಿಪಿಐ(ಎಂ) ಸಂಘಟಕರು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ವಿಕಾಟ ಸಾಗರ ಸಿಮೆಂಟ ಕಂಪನಿಯಿಂದ ಅನ್ಯಾಯ ಬೆಸತ್ತು ಕುಟುಂಬ ಪೆಟ್ರೋಲ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ
“ಜನರ ಬದುಕಿನ ಪ್ರಶ್ನೆ ಬಂದಾಗಲೆಲ್ಲ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಸದಾ ಒಂದೇ ನಾಣ್ಯದ ಎರಡು ಮುಖಗಳು ಎನ್ನುವ ಮಾತುಗಳು ಈ ಡೀಸೆಲ್ ಹಾಗೂ ಟೋಲ್ ದರ ಏರಿಕೆ ವಿಷಯದಲ್ಲಿ ಸಾಭೀತಾಗಿವೆ. ಒಟ್ಟಾರೆ ಎರಡೂ ಸರ್ಕಾರಗಳ ಈ ನೀತಿಗಳು ಕಾರ್ಪೊರೇಟ್ ವಲಯದವರನ್ನು ತುಷ್ಟೀಕರಣಗೊಳಿಸುವಲ್ಲಿ ಮುಂದಾಗಿವೆʼ ಎಂದು ದೂರಿದರು.