ಕನಿಷ್ಠ ವೇತನ ರೂಪಾಯಿ 31,000 ನಿಗದಿ ಮಾಡಬೇಕು, ಪಿಂಚಣಿ ರೂಪಾಯಿ 6000 ಮಾಡಬೇಕು, ಸೇವಾ ಹಿರಿತನ ಭತ್ಯೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ ಸಿಐಟಿಯು ನಿಯೋಜಿತ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಕಲಬುರಗಿ ನಗರದಲ್ಲಿ ಗ್ರಾಮ ಪಂಚಾಯತಿ ನೌಕರರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಅಧ್ಯಕ್ಷರಾದ ಎಂ.ಬಿ. ನಾಡಗೌಡ ಮಾತನಾಡಿ, “ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರವಸೂಲಿಗಾರ, ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್ಸ್, ನೀರುಗಂಟಿಗಳು, ಜವಾನ, ಸ್ವಚ್ಛತಾಗಾರರನ್ನು ಏಕಕಾಲಕ್ಕೆ ಸರ್ಕಾರಿ ನೌಕರರನ್ನಾಗಿ ಘೋಷಿಸಬೇಕು. ದಿನ ನಿತ್ಯದ ಬಳಸುವ ವಸ್ತುಗಳ ಬೆಲೆ ಏರಿಕೆಗೆ ಅನುಗುಣವಾಗಿ ಕನಿಷ್ಠ, ವೇತನ ರೂ. 31,000 ನಿಗದಿಗೊಳಿಸಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ನಿರ್ವಹಿಸುವ ನೌಕರರಿಗೆ ನಿವೃತ್ತಿ ಅಥವಾ ಮರಣ ಹೊಂದಿದರೆ ಅವರಿಗೆ ಪ್ರತಿ ತಿಂಗಳು, ಕನಿಷ್ಠ 6000ರೂ. ಪಿಂಚಣಿ ವ್ಯವಸ್ಥೆ ಜಾರಿಗೆ ತರಬೇಕು” ಎಂದು ಆಗ್ರಹಿಸಿದರು.
ಗ್ರಾಮ ಪಂಚಾಯಿತಿಗಳಿಗೆ ಎರಡನೇ ಡಾಟಾ ಎಂಟ್ರಿ ಆಪರೇಟರ್ಸ್ ಹುದ್ದೆಗೆ ಅವಕಾಶ ನೀಡಿದ್ದು ಸ್ವಾಗತ. ಆದರೆ ಈಗಾಗಲೆ ಗ್ರಾಮ ಪಂಚಾಯಿತಿಗಳಲ್ಲಿ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುವ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ನೇಮಕ ಮಾಡಿಕೊಂಡು ಮುಂದುವರಿಸಬೇಕು. ಅಲ್ಲದೇ, ಈಗಾಗಲೇ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ವಾಟರ್‌ಮೆನ್, ಜವಾನ. ಸ್ವೀಪರ್‌ಗಳಲ್ಲಿ ಕಂಪ್ಯೂಟರ್ ಜ್ಞಾನ ಹಾಗೂ ವಿದ್ಯಾರ್ಹತೆ ಹೊಂದಿದವರಿಗೆ ಅವಕಾಶ ನೀಡಬೇಕು, ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯ ನಿರ್ವಹಿಸುವ ನೌಕರರಿಗೆ ವರ್ಗಾವಣೆಗೆ ಅವಕಾಶ ನೀಡಬೇಕು. ನೀರುಗಂಟಿಗಳಿಗೆ ಮಲ್ಟಿಪರ್ಪಸ್ ಎಂದಿರುವುದನ್ನು ಕೈಬಿಟ್ಟು ನಿರ್ದಿಷ್ಟವಾದ (ಜಾಬ್ ಚಾರ್ಟ್) ಕೆಲಸಗಳನ್ನು ನಿಗದಿಪಡಿಸಬೇಕು ಎಂದು ನಾಡಗೌಡ ಒತ್ತಾಯಿಸಿದರು.
“ಆದಾಯಕ್ಕೆ ಅನುಗುಣವಾಗಿ ಕರ ವಸೂಲಿಗಾರರ ಹುದ್ದೆಗಳನ್ನು ನಿಗದಿಗೊಳಿಸಬೇಕು, ಪ್ರತಿಯೊಂದು ಗ್ರಾಮ ಪಂಚಾಯಿತಿಗಳಿಗೆ ಲೆಕ್ಕ ಸಹಾಯಕ ಹುದ್ದೆ ಸೃಷ್ಟಿಸಬೇಕು. ಗ್ರೇಡ್-1 ಕಾರ್ಯದರ್ಶಿ ಹುದ್ದೆಗಳಿಗೆ ಶೇಕಡಾ 100ರಷ್ಟು ಸ್ಥಾನಗಳನ್ನು ಗ್ರೇಡ್-2 ಕಾರ್ಯದರ್ಶಿಗಳಿಗೆ ಶೇಕಡ 50ರಷ್ಟು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ ಶೇಕಡ 50ರಷ್ಟು ಸ್ಥಾನಗಳನ್ನು ಬಡ್ತಿ ನೀಡಬೇಕು. ಅನ್ಯ ಇಲಾಖೆಯವರಿಗೆ ಬಡ್ತಿ ನೀಡಬಾರದು” ಎಂದು ಒತ್ತಾಯಿಸಿದರು.

“ಗ್ರೇಡ್-1 ಪಂಚಾಯಿತಿಗಳನ್ನು ಜನಸಂಖ್ಯೆಗೆ ಆಧರಿಸಿ ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೆ ಏರಿಸಬೇಕು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗೆ ಶೇಕಡ 60ರಷ್ಟು ಸ್ಥಾನವನ್ನು ಗ್ರೇಡ್-1 ಕಾರ್ಯದರ್ಶಿಗಳಿಗೆ ನೀಡಬೇಕು. ಐಪಿಡಿ ಸಾಲಪ್ಪ ವರದಿಯಂತೆ ಸ್ವಚ್ಚತಾಗಾರರನ್ನು ನೇಮಿಸಬೇಕು” ಎಂದು ಒತ್ತಾಯಿಸಿದರು.
“ಸೇವಾ ಹಿರಿತನ ಪರಿಗಣಿಸಿ ವೇತನ ಹೆಚ್ಚಳ ಮಾಡಬೇಕು, ತೀವ್ರವಾದ ಅನಾರೋಗ್ಯಕ್ಕೆ ತುತ್ತಾದ ನೌಕರರಿಗೆ ಆಸ್ಪತ್ರೆ ವೆಚ್ಚ ಭರಿಸಬೇಕು, ಗ್ರೇಡ್-1 ಕಾರ್ಯದರ್ಶಿಗಳಿಂದ ಪಿ.ಡಿ.ಓ. ಹುದ್ದೆಗೆ ರಾಜ್ಯಮಟ್ಟದಲ್ಲಿ ಕೊಡುವ ಮುಂಬಡ್ತಿಯನ್ನು ಕೈಬಿಟ್ಟು ಜಿಲ್ಲಾ ಮಟ್ಟದಲ್ಲಿ ಮುಂಬಡ್ತಿಗೆ ಅವಕಾಶ ನೀಡಬೇಕು” ಎಂದು ಮನವಿ ಮಾಡಿದರು.
“ಬಿಲ್ ಕಲೆಕ್ಟರ್ ಮತ್ತು ಗುಮಾಸ್ತ ವೃಂದದಿಂದ ಗ್ರೇಡ್-2 ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗಳಿಗೆ ನೇಮಕಗೊಂಡ ನೌಕರರಿಗೆ ಕೆ.ಸಿ.ಎಸ್.ಆರ್. 325 ನಿಯಮಾನುಸಾರ ಹಿಂದಿನ ಸೇವೆಯನ್ನು ಪರಿಗಣಿಸಿ ಹಳೆ ಪಿಂಚಣಿ ಜಾರಿ ಮಾಡಬೇಕು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಇ-ಹಾಜರಾತಿ ಲೋಪದೋಷಗಳನ್ನು ಪಂಚಾಯತ್ ತಂತ್ರಾಂಶದಲ್ಲಿ ಸರಿಪಡಿಸುವ ಬಗ್ಗೆ ಸಿಬ್ಬಂದಿಗಳಿಗೆ ಪೂರ್ಣ ವೇತನ ಪಾವತಿಸಬೇಕು” ಆಗ್ರಹಿಸಿದರು.
“ರಾಜ್ಯದಲ್ಲಿ ಮೊದಲನೇ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಕ್ಲರ್ಕ್ ಹುದ್ದೆ ತೆರವಾದ ನಂತರ ಅನುಮೋದನೆ ನೀಡಬೇಕೆಂಬ ಷರತ್ತನ್ನು ಕೈಬಿಟ್ಟು ಅನುಮೋದನೆ ನೀಡಲು ಅವಕಾಶ ನೀಡಬೇಕು, ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಎಲ್ಲಾ ವಿಭಾಗದ ಹುದ್ದೆಗಳನ್ನು ತುಂಬಬೇಕು” ಎಂದು ಅಧ್ಯಕ್ಷರಾದ ಎಂ.ಬಿ. ನಾಡಗೌಡ ಒತ್ತಾಯಿಸಿದರು.
“ಬೇಡಿಕೆಗಳ ಬಗ್ಗೆ ಸಚಿವರಿಗೆ ಒಂದು ವಾರದ ಕಾಲಾವಕಾಶ ನೀಡಿರುವ ಗಡುವು ಮುಗಿದು ಮೂರು ತಿಂಗಳು ಕಳೆದರೂ ನೌಕರರ ಒಂದೂ ಬೇಡಿಕೆಯೂ ಇತ್ಯರ್ಥವಾಗಿಲ್ಲ. ಆದ್ದರಿಂದ ನೌಕರರ ಹಕ್ಕುಗಳ ರಕ್ಷಣೆಗಾಗಿ ಮತ್ತು ನಮ್ಮ ಬೇಡಿಕೆಗಳ ಇತ್ಯರ್ಥಕ್ಕಾಗಿ ಕಲ್ಬುರ್ಗಿ ಸಚಿವರ ನಿವಾಸದ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ರಾಜ್ಯ ಸಮಿತಿ ತೀರ್ಮಾನಿಸಿದೆ. ಬೇಡಿಕೆಗಳನ್ನು ಬಗೆಹರಿಸಿ ಸರ್ಕಾರದ ಆದೇಶ ಮಾಡಿದರೆ ಪ್ರತಿಭಟನೆಯನ್ನು ಕೈಬಿಡಲಾಗುವುದು” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಬೆಂಗಳೂರು | ‘ಬಾಗಿಲಿನಿಂದ ದೂರ ಇರು’ ಎಂದು ಹೇಳಿದ್ದಕ್ಕೆ ಬಿಎಂಟಿಸಿ ಕಂಡಕ್ಟರ್‌ಗೆ ಚಾಕು ಇರಿದ ಪ್ರಯಾಣಿಕ!
“ಕಲಬುರಗಿ ಸಚಿವರ ಮನೆ ಚಲೋ ಪ್ರತಿಭಟನೆ ಮಾಡಿಯೂ ನಮ್ಮ ಸಮಸ್ಯೆ ಬಗೆಹರಿಯದಿದ್ದರೆ ಮತ್ತೆ ಅಕ್ಟೋಬರ್ 23ರಂದು ಮತ್ತೆ ವಿಧಾನಸೌಧ ಚಲೋ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದೆ” ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಜಿ. ರಾಮಕೃಷ್ಣ, ಆರ್ ಎಸ್ ಬಸವರಾಜ, ನಾಗರಾಜ್ ಭಂಗೂರು, ಎಂ ಬಿ ಸಜ್ಜನ, ಗೌರಮ್ಮ ಪಿ ಪಾಟೀಲ್, ಶಾಂತಾ ಎನ್ ಘಂಟಿ, ಕೆ ನೀಲಾ, ಶರಣಬಸಪ್ಪಾ ಮಮಶೆಟ್ಟಿ, ಮಾರುತಿ ಸುಗ್ಗಾ, ಭಿಮ್ರಾವ ಅಂಬಲಗಿ ಇನ್ನಿತರರು ಉಪಸ್ಥಿತರಿದ್ದರು.

