ಯುವತಿಯರನ್ನು ಬಳಸಿಕೊಂಡು ನಗರದಲ್ಲಿ ಹನಿಟ್ರ್ಯಾಪ್ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದಲಿತ ಸೇನೆಯ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ ಸಹಿತ ಒಟ್ಟು ಆರು ಜನರು ಸೋಮವಾರ ರಾತ್ರಿ ಪೊಲೀಸರಿಗೆ ಶರಣಾಗಿದ್ದಾರೆ.
ಹನಿಟ್ರ್ಯಾಪ್ ಪ್ರಕರಣದ ಆರೋಪಿಗಳಾದ ದಲಿತ ಸೇನೆಯ ರಾಜ್ಯಾಧ್ಯಕ್ಷ ಹಾಗೂ ವಕೀಲರಾಗಿರುವ ಹಣಮಂತ ಯಳಸಂಗಿ, ಸಂಘಟನೆಯ ಕಲಬುರಗಿ ಜಿಲ್ಲಾಧ್ಯಕ್ಷ ಮಂಜುನಾಥ್ ಭಂಡಾರಿ, ಶ್ರೀಕಾಂತ್ ರೆಡ್ಡಿ, ಉದಯ್ ಕುಮಾರ್ ಖಣಗೆ, ಅರವಿಂದ ಕುಮಾರ್ ಕಮಲಾಪುರ ಹಾಗೂ ಸಂತೋಷ ಪಾಳ ಅವರು ನಗರ ಪೋಲಿಸ್ ಆಯುಕ್ತರ ಕಚೇರಿಯಲ್ಲಿ ಸ್ವಯಂ ಪ್ರೇರಿತರಾಗಿ ಪೊಲೀಸರಿಗೆ ಶರಣಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಬಂಧಿಸಲಾಯಿತು.
ಸರಕಾರಿ ಅಧಿಕಾರಿಗಳು, ಉದ್ಯಮಿಗಳನ್ನೇ ಗುರಿಯಾಗಿರಿಸಿ ಹನಿಟ್ರ್ಯಾಪ್ ಮಾಡಲು ಯುವತಿಯರನ್ನು ಮುಂದೆ ಬಿಟ್ಟು ಲಾಡ್ಜ್‌ಗೆ ಕರೆಸುತ್ತಿದ್ದು, ನಂತರ ತಾವೇ ದಾಳಿ ನಡೆಸಿ, ಪೋಟೋ-ವಿಡಿಯೋ ಚಿತ್ರೀಕರಿಸಿ ಹಣ ನೀಡುವಂತೆ ಬ್ಲ್ಯಾಕ್‌ಮೇಲ್ ಮಾಡಿ ಲಕ್ಷ ಲಕ್ಷ ಹಣ ವಸೂಲಿ ಮಾಡುತ್ತಿದ್ದ ಆರೋಪ ಇವರ ಮೇಲಿದ್ದು, ಈ ಸಂಬಂಧ ಕಲಬುರಗಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು.
ಓರ್ವ ಪೊಲೀಸ್ ಕಾನ್ಸ್‌ಟೇಬಲ್ ಹಾಗೂ ಉದ್ಯಮಿಯನ್ನು ಹನಿಟ್ರ್ಯಾಪ್ ಮಾಡಿ 47 ಲಕ್ಷ ವಸೂಲಿ ಮಾಡಿದ್ದು, ಅಮಾಯಕ ಯುವತಿಯರನ್ನೂ ಹಣ ನೀಡದೇ ವಿಡಿಯೋ ಇಟ್ಟುಕೊಂಡು ವಂಚಿಸಿದ್ದಾರೆ ಎಂದು ನೊಂದ ಯುವತಿಯರು ಭೀಮ್ ಆರ್ಮಿ ಪದಾಧಿಕಾರಿಗಳೊಂದಿಗೆ ಸುದ್ದಿಗೋಷ್ಠಿ ಮಾಡಿದ್ದರು.
ಪೊಲೀಸರಿಗೆ ಶರಣಾದ ವೇಳೆ ಹೇಳಿಕೆ ನೀಡಿರುವ ದಲಿತ ಸೇನೆಯ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ, “ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರಿಗೆ ಕಪ್ಪು ಚುಕ್ಕೆ ಬರಬಾರದು ಎಂಬ ಕಾರಣದಿಂದ ಸ್ವಯಂ ಪ್ರೇರಿತನಾಗಿ ಶರಣಾಗಿದ್ದೇನೆ. ನನ್ನ ವಿರುದ್ಧ ಪಿತೂರಿ ಮಾಡಿದವರ ಹೊಟ್ಟೆ ತಣ್ಣಗಾಗಿರಬಹುದು. ಇದು ಕೇವಲ ತಾತ್ಕಾಲಿಕ. ನಾನು ಅನ್ಯಾಯದ ವಿರುದ್ಧ ಹೋರಾಟವನ್ನು ಮುಂದುವರೆಸುತ್ತೇನೆ. ದೋಷಮುಕ್ತರಾಗಿ ನಾವು ಹೊರಬರುತ್ತೇವೆ ಎಂಬ ವಿಶ್ವಾಸ ನಮಗಿದೆ” ಎಂದು ತಿಳಿಸಿದರು.
ಆರೋಪಿಗಳು ಪೊಲೀಸರಿಗೆ ಶರಣಾದ ಸಂದರ್ಭದಲ್ಲಿ ನೂರಾರು ಮಂದಿ ದಲಿತ ಸೇನೆಯ ಕಾರ್ಯಕರ್ತರು ಪೊಲೀಸ್ ಕಮಿಷನರ್ ಆವರಣದಲ್ಲಿ ನೆರೆದಿದ್ದರು.
ಇದನ್ನು ಓದಿದ್ದೀರಾ? ಕಲಬುರಗಿ | ಹನಿಟ್ರ್ಯಾಪ್ ಆರೋಪ; ದಲಿತ ಸೇನೆ ರಾಜ್ಯಾಧ್ಯಕ್ಷ ಸೇರಿ ಹಲವರ ವಿರುದ್ಧ ಎಫ್‌ಐಆರ್: ಓರ್ವನ ಬಂಧನ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮೂಲದ ಇಬ್ಬರು ಯುವತಿಯರು ಮತ್ತು ಕಲಬುರಗಿ ಜಿಲ್ಲೆಯ ಓರ್ವ ವಿವಾಹಿತ ಮಹಿಳೆ ಕಲಬುರಗಿ ನಗರದ ಸ್ಟೇಷನ್ ಬಜಾರ್ ಪೋಲಿಸ್ ಠಾಣೆಯಲ್ಲಿ 8 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು. ನಂತರ ಪ್ರಕರಣವನ್ನು ಸೈಬರ್ ಕ್ರೈಂಗೆ ವರ್ಗಾವಣೆ ಮಾಡಲಾಗಿತ್ತು. ದಲಿತ ಸೇನೆಯ ಕಮಲಾಪುರ ಸಂಘಟನೆಯ ತಾಲೂಕು ಅಧ್ಯಕ್ಷ ರಾಜು ಲೆಂಗಟಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದರು.
