ಕಲ್ಯಾಣ ಕರ್ನಾಟಕ ಕಲಬುರಗಿ ಜಿಲ್ಲೆಯ ರೈತರಿಗೆ ಬೆಳೆವಿಮೆ ಹಣವನ್ನು ಬಿಡುಗಡೆ ಮಾಡಿದರೆ ಮುಂಗಾರು ಬಿತ್ತನೆ ಬೀಜ ರಸಗೊಬ್ಬರ ಖರೀದಿಗೆ ಆಸರೆಯಾಗುತ್ತದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಶರಣಬಸಪ್ಪ ಮಮಶೆಟ್ಟಿ ಅಗ್ರಹಿಸಿದ್ದಾರೆ.
“ತೊಗರಿ ಬೆಳೆನಷ್ಟ ಪರಿಹಾರ ಮಂಜೂರು ಮಾಡಲು ರೈತ ಸಂಘ ಹೋರಾಟ ನಡೆಸಿದಾಗ ವರದಿ ತರಿಸಿಕೊಂಡು ಪರಿಹಾರ ಘೋಷಿಸಲು ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು. ಇದೀಗ ಭರವಸೆ ಭರವಸೆಯಾಗಿಯೇ ಉಳಿದಿದೆ. ರೈತರ ಬಗ್ಗೆ ಕನಿಷ್ಠ ಕಾಳಜಿ ತೋರಿದ್ದು ಬೇಸರದ ಸಂಗತಿಯಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ತೊಗರಿ ರೈತರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ಹೋದಾಗ ಬೆಳೆವಿಮೆ ಹಣ ₹600 ಕೋಟಿ ಕೊಡುತ್ತೇವೆಂದು ಹೇಳಿ ವಿಮೆ ಘೋಷಣೆ ಮಾಡಿದ್ದರು. ಅದನ್ನು ನೋಡಿ ನಮಗೆ ಮೂಗಿಗೆ ತುಪ್ಪದ ವಾಸನೆ ಬಡಿದಂತಾಯಿತು, ಇದರಿಂದ ರೈತರು ಖುಷಿ ಪಟ್ಟು ಸ್ವಾಗತಿಸಿದರು. ವಿಮೆ ಹಣ ಘೋಷಿಸಿ 2 ತಿಂಗಳು ಗತಿಸಿದರೂ ಈವರೆಗೆ ನಯಾ ಪೈಸೆ ವಿಮೆಹಣ ಕೊಡಲಿಲ್ಲ” ಎಂದು ದೂರಿದರು.
“ಜೂನ್ ಮೊದಲನೆಯ ವಾರದಲ್ಲಿ ಒಂದು ವೇಳೆ ಮಳೆ ಆರಂಭವಾದರೆ ರೈತರು ಮುಂಗಾರು ಬೆಳೆ ಬಿತ್ತನೆ ಮಾಡಲು ಬೀಜ ರಸಗೊಬ್ಬರ ಹೋದಿಸಿಕೊಳ್ಳುವ ತಯಾರಿಯಲ್ಲಿದ್ದಾರೆ. ವಿಮೆ ಹಣವನ್ನು ರೈತರ ಖಾತೆಗೆ ಜಮೆ ಮಾಡಿದರೆ, ಆ ವಿಮೆಹಣ ಮುಂಗಾರು ಬಿತ್ತನೆಗೆ ಆಸರೆ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ, ರಾಜ್ಯ ಸರ್ಕಾರ ಈಗಾಗಲೇ ₹112 ಕೋಟಿ ಮಾತ್ರ ಬಿಡುಗಡೆ ಮಾಡಿದೆ. ಇದು ಕೆಲವು ರೈತರ ಕಣ್ಣಿಗೆ ಸುಣ್ಣ ಇನ್ನಷ್ಟು ರೈತರ ಕಣ್ಣಿಗೆ ಬೆಣ್ಣೆ ಹಚ್ಚಿದಂತಾಗುತ್ತದೆ. ಒಟ್ಟಾರೆ ಘೋಷಣೆ ಮಾಡಿದ ₹600 ಕೋಟಿ ರೂಪಾಯಿ ಬೆಳೆವಿಮೆ ಹಣವನ್ನು ಕೂಡಲೇ ಬಿಡುಗಡೆ ಮಾಡಿ ಮುಂಗಾರು ಬಿತ್ತನೆ ಮಾಡಲು ರೈತರ ನೆರವಿಗೆ ಆಸರೆಯಾಗಬೇಕು” ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಪರವಾಗಿ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಸಾಲದ ಹಣ ತಡವಾಗಿ ನೀಡಿದಕ್ಕೆ ಹಲ್ಲೆ : ಆರು ಜನರಿಗೆ 2 ವರ್ಷ ಜೈಲು ಶಿಕ್ಷೆ
“ಒಂದು ವೇಳೆ ಬೇಡಿಕೆ ಈಡೇರಿಸದೆ ನಿರ್ಲಕ್ಷ್ಯ ತೋರಿದರೆ ಇದೇ ಮೇ 20ರಂದು ಇಸ್ಕೊ ಟೊಕಿ ಬೆಳೆವಿಮೆ ಕಂಪನಿ ಎದುರು ಪ್ರತಿಭಟನೆ ನಡೆಸಲಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.