ಮನರೇಗಾ ಕಾರ್ಮಿಕರಿಗೆ ನಿರುದ್ಯೋಗ ಭತ್ಯೆ, ಕೂಲಿ ಪಾವತಿ, ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಪಡಿತರದಲ್ಲಿ ಸ್ಥಳೀಯ ಆಹಾರ ಧಾನ್ಯ, ಎಣ್ಣೆ ಬೇಳೆ ನೀಡುವಂತೆ ಒತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಕಾರ್ಯಕರ್ತರುಕಲಬುರಗಿ ಜಿಲ್ಲಾ ಪಂಚಾಯತ್ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ನಿರುದ್ಯೋಗ ಭತ್ಯೆ ಆದೇಶ ಆಗಿ ಸುಮಾರು 1 ವರ್ಷವಾದರೂ ಪಾವತಿ ಆಗದೆ ಇರುವುದು ಮತ್ತು ಕೆಲಸ ನೀಡದೆ ಇರುವುದು ಹಾಗೂ ಕಡಿಮೆ ಕೂಲಿ ಪಾವತಿ ಆಗುತ್ತಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
“ಕಮಲಾಪುರ ಮಹಾಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೇ 6 ರಿಂದ 12ರ ವರೆಗೆ ಕೆಲಸ ಮಾಡಿದವರ 9 ಮಂದಿ ಕೂಲಿ ವೇತನ ಬಂದಿಲ್ಲ. ಮಾಹಾಗಾಂವ ಗ್ರಾಮದ 6 ಗುಂಪಿನವರಿಗೆ, ಮಾಹಾಗಾಂವ ತಾಂಡದ 2 ಗುಂಪಿನವರಿಗೆ, ಮಾಹಾಗಾಂವ ಪಂಚಾಯತಿಯಲ್ಲಿ ಬರುವ ಚಂದ್ರನಗರ ಗ್ರಾಮದ 2 ಗುಂಪಿನವರಿಗೆ ಕೆಲಸ ನೀಡಿಲ್ಲ. ಈ ಎಲ್ಲ ಗುಂಪಿನವರಿಗೆ ಸುಮಾರು 45 ದಿನಗಳ ಕೆಲಸ ನೀಡಿಲ್ಲ” ಎಂದು ಆರೋಪಿಸಿದರು.

“ಕಮಲಾಪುರ ಕಿಣ್ಣಿಸಡಕ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 18 ಮಂದಿ ಕೆಲಸ ಮಾಡಿದ್ದು, ಅವರ ಕೂಲಿ ನೀಡದೆ ಶೂನ್ಯ ಮಾಡಿದ್ದಾರೆ. ತೋಟಗಾರಿ ಮತ್ತು ಕುಷಿ ಇಲಾಖೆಯಲ್ಲಿ ಕೆಲಸಕೇಳಿದರೆ ಯಾವುದೇ ರೀತಿಯ ಉತ್ತರ ನಿಡುತ್ತಿಲ್ಲ. ಕಮಲಾಪುರ ಮರಗುತ್ತಿ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 22 ಮಂದಿ ಕಾರ್ಮಿಕರ 6 ತಿಂಗಳ ಕೂಲಿ ಹಣ ಪಾವತಿಯಾಗಿಲ್ಲ” ಎಂದು ಹೇಳಿದರು.
“ಕಮಲಾಪುರ ಕೊಳಕುಂದ ಗ್ರಾಮ ಪಂಚಾಯಿತಿ ಯಲ್ಲಿ ಜೂನ್ 09ರಿಂದ 15ರ ವರೆಗೆ ಕೆಲಸ ಮಾಡಿದ ಕೂಲಿ ಹಣವನ್ನು ದಿನಕ್ಕೆ 100 ರೂ.ನಂತೆ ಹಾಕಿದ್ದಾರೆ. ಉಳಿದ ಹಣ ಹಾಕುತ್ತಿಲ್ಲ. ಕಮಲಾಪುರ ಅಂಬಲಗಾ ಗ್ರಾಮ ಪಂಚಾಯಿತಿ ಕುದಮುಡ ಗ್ರಾಮದಲ್ಲಿ ಸುಮಾರು 25 ಜಾಬ್ ಕಾರ್ಡ್‌ನಲ್ಲಿ 60 ಮಂದಿ ಇದ್ದು, ಈ ಗ್ರಾಮದಲ್ಲಿ 45 ದಿನ ಆದರೂ ಕೆಲಸ ನೀಡುತ್ತಿಲ್ಲ” ಎಂದರು.

“ಕಲಬುರಗಿ ಕೂಸನೂರ ಗ್ರಾಮ ಪಂಚಾಯಿತಿ ಗ್ರಾಮದಲ್ಲಿ 26 ಮಂದಿ ಕೂಲಿ ಜಮಾ ಆಗಿಲ್ಲ. 14 ಮಂದಿ ಕಾರ್ಮಿಕರ ಜಾಬ್ ಕಾರ್ಡ್ ಕೊಟ್ಟರೂ ಕೂಡಾ ಅವರ ಹೆಸರು ಚಾಬ್ ಕಾರ್ಡ್‌ನಲ್ಲಿ ಬರುತ್ತಿಲ್ಲ. ಸುಮಾರು 300 ಮಂದಿ ಕಾರ್ಮಿಕರ ಜಾಬ್ ಕಾರ್ಡ್ ಕೊಡಲು ಕೇಳಿದರೆ ಕೊಡುತ್ತಿಲ್ಲ. 4 ರಿಂದ 5 ಕಾಮಗಾರಿಗಳ ಕೆಲಸಗಳಾಗಿವೆ ಎಂದು ಫೋಟೋ ಹಚ್ಚಿದ್ದಾರೆ. ಆದರೆ ಯಾವುದೇ ತರಹದ ಕಾಮಗಾರಿ ನಡೆದಿಲ್ಲ” ಎಂದು ಆರೋಪಿಸಿದರು
“ರೈತರ ಮತ್ತು ಕಾರ್ಮಿಕರ ಹಿತದೃಷ್ಠಿಯಿಂದ ಪೌಷ್ಠಿಕ ಅಂಶದ ಕೊರತೆ ನೀಗುವುದಕ್ಕಾಗಿ ಅನುಕೂಲಕರ ದರದಲ್ಲಿ ಆಯಾ ಪ್ರದೇಶಕ್ಕನುಗುಣವಾಗಿ ಪಡಿತರ ಅಕ್ಕಿಯೊಂದಿಗೆ ರಾಗಿ ಅಥವಾ ಜೋಳ ಮತ್ತು 1 ಕೆಜಿ ತೊಗರಿ ಬೇಳೆ, 1 ಕೆಜಿ ಅಡುಗೆ ಎಣ್ಣೆಯನ್ನು ವಿತರಿಸಬೇಕು. ಇದರಿಂದ ರೈತರ ಬೆಳೆಗೂ ಸ್ಥಳೀಯವಾಗಿ ಸೂಕ್ತ ಮಾರುಕಟ್ಟೆ ಸಿಕ್ಕರೆ ಕಾರ್ಮಿಕರಿಗೆ ಪೌಷ್ಠಿಕ ಆಹಾರ ದೊರೆಯುತ್ತದೆ” ಎಂದು ಪತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಪಡಿತರ, ಮನರೇಗಾ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಒತ್ತಾಯ
“ಉದ್ಯೋಗ ಖಾತರಿಯಲ್ಲಿ 90 ದಿನಗಳಿಗೂ ಹೆಚ್ಚಿನ ಮಾನವ ದಿನಗಳನ್ನು ಮುಗಿಸಿದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಗಾಗಿ ಬಿಒಸಿಡಬ್ಲ್ಯೂ ಅಡಿಯಲ್ಲಿ ಕಾರ್ಮಿಕ ಚೀಟಿಗಳನ್ನು ನೀಡಬೇಕು. ಇವುಗಳು ಅಪೌಷ್ಟಿಕತೆ ನೀಗಿಸುವ ಆಹಾರ ಭದ್ರತೆ ಮತ್ತು ಆರೋಗ್ಯ ಶಿಕ್ಷಣದಂತಹ ಸಾಮಾಜಿಕ ಭದ್ರತೆ ನೀಡುವ ಯೋಜನೆಗಳಾಗಿದ್ದು, ರೈತರು ಮತ್ತು ಕಾರ್ಮಿಕರಿಗೆ ಏಕಕಾಲಕ್ಕೆ ಪ್ರಯೋಜನ ದೊರಕಲಿರುವ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಆಗ್ರಹಿಸಿದರು.
ರಾಜ್ಯ ಕಾರ್ಯಕರ್ತ ಶರಣ ಗೌಡ, ಜಿಲ್ಲಾ ಕಾರ್ಯದರ್ಶಿ ಶಿವರೆಡ್ಡಿ, ರೇಷ್ಮಾ, ರೇವಣಸಿದ್ಧಪ್ಪ, ಮಲ್ಲಿಕಾರ್ಜುನ ಹೊಸಮನಿ, ಜಾನೆ, ಪ್ರಕಾಶ್, ಮಲ್ಲಿಕಾರ್ಜುನ, ನೀಲಮ್ಮ, ಚನ್ನಮ್ಮ, ನಿರ್ಮಲ ಸೇರಿದಂತೆ ಇತರರು ಇದ್ದರು.