ಕೂಲಿ ಕಾರ್ಮಿಕರು ಕೆಲಸ ಮಾಡಿ 6, 7 ತಿಂಗಳು ಆದರೂ ವೇತನ ಕೊಡುತ್ತಿಲ್ಲ. ಹೀಗೆ ಸತಾಯಿಸಿದರೆ ಕೆಲಸಕ್ಕೆ ಯಾರು ಬರುತ್ತಾರೆ ಎನ್ನುತ್ತಾರೆ ಕೂಲಿ ಕಾರ್ಮಿಕರು
ಮನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರು ಕೆಲಸ ಮಾಡಿ 6, 7 ತಿಂಗಳುಗಳು ಕಳೆದಿವೆ. ಇನ್ನೂ ವೇತನ ಪಾವತಿಯಾಗಿಲ್ಲ. ಫಾರಂ ನಂ.6ಅನ್ನು ಭರ್ತಿ ಮಾಡಿ ಸಲ್ಲಿಸಿದ್ದೇವೆ. ಆದರೂ, ವೇತನ ಕೊಡುತ್ತಿಲ್ಲ. ಕೆವೈಸಿ ಅಪ್‌ಡೇಟ್ ಮಾಡಿಸಬೇಕೆಂದು ಪಂಚಾಯತಿ ಅಧಿಕಾರಿಗಳು ಹೇಳುತ್ತಾರೆ. ಕಂಪ್ಯೂಟರ್ ಸೆಂಟರ್‌ನಲ್ಲಿ ಚೆಕ್ ಮಾಡಿಸಿದರೆ, ಕೆವೈಸಿ ಅಪ್‌ಡೇಟ್ ಆಗಿದೆ. ಅನಗತ್ಯವಾಗಿ ಕಾರ್ಮಿಕರಿಗೆ ಅಧಿಕಾರಿಗಳು ತೊಂದರೆ ಕೊಡುತ್ತಿದ್ದಾರೆ. ಕಳೆದ ಬಾರಿ ಕೆಲಸ ಮಾಡಿದ್ದಾಗ ವೇತನ ಬಂದಿದೆ. ಈಗ ಹೇಗೆ ಸಮಸ್ಯೆಯಾಗುತ್ತದೆ? – ಇದು ಮನರೇಗಾ ಅಡಿಯಲ್ಲಿ ಕೂಲಿ ಕೆಲಸ ಮಾಡಿ, ವೇತನ ಪಡೆಯಲಾಗದ ಕಾರ್ಮಿಕರ ಮಾತು.
ಕಲಬುರಗಿ ಜಿಲ್ಲೆಯ ಕುಸುನೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಲವಾರು ಕಾಲಿ ಕಾರ್ಮಿಕರು ಮನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದಾರೆ. ಆದರೆ, ಪಂಚಾಯತಿ ಅವ್ಯವಸ್ಥೆ, ಬೇಜವ್ದಾರಿತನ, ನಿರ್ಲಕ್ಷ್ಯ ಧೋರಣೆಯಿಂದಾಗಿ ಕೂಲಿ ಕಾರ್ಮಿಕರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಫಾರಂ ನಂ.6ರಲ್ಲಿ ಎಲ್ಲ ವಿವರಗಳನ್ನ ಸ್ಪಷ್ಟವಾಗಿ ನೀಡಿದ್ದರೂ, ಅಧಿಕಾರಿಗಳೂ ಮಹಿಳಾ ಕಾರ್ಮಿಕರ ಹೆಸರಿನ ಜೊತೆಗೆ ಗಂಡನ ಹೆಸರು ಹಾಕುವಾಗ ಬೇರಾವುದೋ ಹೆಸರು ಹಾಕುತ್ತಿದ್ದಾರೆ. ಹೀಗಾಗಿ, ಮನೆಗಳಲ್ಲಿ ಮಹಿಳಾ ಕಾರ್ಮಿಕರೊಂದಿಗೆ ಅವರ ಗಂಡಂದಿರು ಜಗಳ ಮಾಡುತ್ತಿದ್ದಾರೆ. ಪಂಚಾಯತಿ ಅಧಿಕಾರಗಳ ಬೇಜಬ್ವಾರಿತನದಿಂದ ಸಂಸಾರಗಳು ಹಾಳಾಗುತ್ತಿವೆ ಎಂದು ಕಾರ್ಮಿಕರು ದೂರಿದ್ದಾರೆ.
ಕೂಲಿ ಕಾರ್ಮಿಕರ ಸಮಸ್ಯೆಗಳ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ಕಾರ್ಮಿಕ ಸುಭಾಷ್, “ಕುಸುನೂರ ತಾಂಡಾದ 300ಕ್ಕೂ ಹೆಚ್ಚು ಮಂದಿ ಜಾಬ್ ಕಾರ್ಡ್ ಮಾಡಿಸಿದ್ದಾರೆ. ಅವೆಲ್ಲವೂ ಪಂಚಾಯತ್‌ನಲ್ಲಿಯೇ ಇವೆ. ಹಳೆಯ ಜಾಬ್ ಕಾರ್ಡ್ ಪಡೆದುಕೊಂಡು, ಹೊಸ ಜಾಬ್ ಕಾರ್ಡ್ ವಿತರಿಸುವಂತೆ ಕೇಳಿದರೂ, ವಿತರಣೆ ಮಾಡುತ್ತಿಲ್ಲ. ನಾಳೆ-ನಾಳಿದ್ದು ಎಂದು ಕಾಲಹರಣ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಗ್ರಾಮೀಣ ಕೂಲಿ ಕಾರ್ಮಿಕ ಸಂಘಟನೆ ಕಾರ್ಯಕರ್ತ ರೇವಣಸಿದ್ದಪ್ಪ ನಿಲಂಗಿಕರ್ ಮಾತನಾಡಿ, “ಕಳೆದ ಎರಡು ವರ್ಷಗಳಿಂದ ಕೂಲಿ ಕಾರ್ಮಿಕರ ಎನ್‌ಎಂಆರ್ (ಹಾಜರಾತಿ) ತೆಗೆದುಕೊಡುವಂತೆ ಪಂಚಾಯತಿಗೆ ಹಲವು ಬಾರಿ ಕೇಳಿದ್ದೇವೆ. ಫಾರಂ ನಂ.6 ಸರಿಯಾಗಿ ಬರೆದು ಕೊಟ್ಟರೂ ಎನ್‌ಎಂಆರ್ ತೆಗೆಯುವಾಗ ಕೆಲವರದ್ದಷ್ಟೇ ತೆಗೆದು, ಉಳಿದವರದ್ದು ಕೆವೈಸಿ ಸಮಸ್ಯೆಯಿದೆ ಎಂದು ಹೇಳುತ್ತಿದ್ದಾರೆ. ನಾವೇ ಎಲ್ಲರದ್ದೂ ಕೆವೈಸಿ ಅಪ್‌ಡೇಟ್ ಮಾಡಿಸಿದ್ದೇನೆ. ಆದರೂ, ಅಧಿಕಾರಿಗಳು ಬೇಜವ್ದಾರಿ ಧೋರಣೆ ತಳೆದಿದ್ದಾರೆ” ಎಂದು ಕಿಡಿಕಾರಿದ್ದಾರೆ.
“ಕೂಲಿ ಕಾರ್ಮಿಕರು ಕೆಲಸ ಮಾಡಿ 6, 7 ತಿಂಗಳು ಆದರೂ ವೇತನ ಕೊಡುತ್ತಿಲ್ಲ. ಹೀಗೆ ಸತಾಯಿಸಿದರೆ ಕೆಲಸಕ್ಕೆ ಯಾರು ಬರುತ್ತಾರೆ. ನಮಗೆ ಜಿಪಿಎಸ್ ಆ್ಯಪ್ ಒಂದೆ ಕೊಟ್ಟಿದ್ದಾರೆ. ಆದರೆ, ಲೆಟರ್‌ನಲ್ಲಿ 5 ಆ್ಯಪ್ ಕೊಟ್ಟಿದಿವಿ ಎಂದು ಸುಳ್ಳು ಬರೆದಿದ್ದಾರೆ” ಎಂದು ಆರೋಪಿಸಿದ್ದಾರೆ.
ಈದಿನ.ಕಾಮ್ ಜೊತೆ ಮಾತನಾಡಿದ ಕುಸುನೂರ ಗ್ರಾಮ ಪಂಚಾಯತಿ ಪಿಡಿಓ, “ಕಳೆದ ವರ್ಷ 2022ರಲ್ಲಿ ಮ್ಯಾಡೇಜ್ 7,000 ಸಾವಿರ ಇತ್ತು. ಕುಸುನೂರ್ ಗ್ರಾಮ ಪಂಚಾಯತಿಯಲ್ಲಿ ಒಟ್ಟು 250ರಿಂದ 260 ಜನ ಕೂಲಿ ಕಾರ್ಮಿಕರು ಕೆಲಸ ಮಾಡಿದ್ದಾರೆ. 38 ಲಕ್ಷ ರೂ. ಪೇಮೆಂಟ್ ಮಾಡಿದ್ದೇವೆ. 100 ದಿನಗಳ ಕಾಲ ಸಂಪೂರ್ಣ ಕೆಲಸ ಕೊಟ್ಟಿದ್ದೇವೆ. ಯಾವುದೇ ವೇತನ ಕೊಡುವುದು ಬಾಕಿ ಇಲ್ಲ” ಎಂದು ಹೇಳಿದ್ದಾರೆ.
“2023ರಲ್ಲಿ ಮ್ಯಾಡೇಜ್ 1,056 ಇದೆ. ಆಕ್ಟಿವ್ ಆಗಿ ಕೆಲಸ ಮಾಡುವ 280 ಕೂಲಿ ಕಾರ್ಮಿಕರಿದ್ದಾರೆ. ಏಪ್ರಿಲ್‌ನಿಂದ ಜುಲೈ ಅಂತ್ಯದ ವರೆಗೆ 22,000 ರೂ. ವೇತನ ಪಾವತಿ ಆಗಿದೆ. 14,000 ರೂ. ಬಾಕಿ ಇದೆ” ಎಂದು ಹೇಳಿದ್ದಾರೆ. ಆದರೆ, ಪೇಮೆಂಟ್ ಮಾಡಿರುವ ವೋಚರ್ ಕೇಳಿದಾಗ, ಅವುಗಳನ್ನು ಕೊಡಲು ಪಿಡಿಓ ನಿರಾಕರಿಸಿದ್ದಾರೆ. ಮಾಹಿತಿ ಕೊಡುವ ಆದೇಶವಿಲ್ಲ ವೆಂದು ಸಬೂಬು ಹೇಳಿದ್ದಾರೆ.