ಕಲಬುರಗಿಯ ಚೇಬರ್ ಆಫ್ ಕಾಮರ್ಸ್ ನಲ್ಲಿ ಮೇ. 2ರಂದು ಗುಜರಾತ್‌ನ ಶಾಸಕ, ಜನಪ್ರಿಯ ರಾಷ್ಟ್ರೀಯನಾಯಕ, ಸಾಮಾಜಿಕ ಕಾರ್ಯಕರ್ತ ಜಿಗ್ನೇಶ್ ಮೇವಾನಿ ಅವರೊಂದಿಗೆ ‘ಸಮುದಾಯಗಳೊಂದಿಗೆ ಸಂವಾದ’ ಕಾರ್ಯಕ್ರಮ ನಡೆಯಲಿದೆ.
ಈ ಕುರಿತು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಬಸವರಾಜ್ ಕೌತಾಳ ಅವರು ಮಾತನಾಡಿದರು.
ಭಾರತದ ಮಹಾಜನತೆ ಸಂವಿಧಾನವು ತಮಗೆ ಕೊಡಮಾಡಿರುವ ಅತಿಮುಖ್ಯವಾದ ಹಕ್ಕನ್ನು ಚಲಾಯಿಸಲು ಮುಂದಡಿಯಿಡುತ್ತಿರುವ ಸಂದರ್ಭವಿದು. ಹಲವು ಹಂತಗಳಲ್ಲಿ ಭಾರತದ ಜನತೆ ಮತದಾನ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಒಂದು ಹಂತ ಮುಗಿದಿದೆ. ಮೊದಲು ಮತದಾನ ಮಾಡಿದ 14 ಕ್ಷೇತ್ರಗಳ ಚುನಾವಣೆಯ ಸಂದರ್ಭದಲ್ಲಿಯೂ ಮತ್ತು ನಂತರ ಮತದಾನ ಮಾಡಲು ಸಜ್ಜಾಗುತ್ತಿರುವ ಇನ್ನುಳಿದ 14 ಕ್ಷೇತ್ರಗಳಲ್ಲಿಯೂ ಹತಾಶರಾದಂತಹ ಒಂದು ಗುಂಪು, ಹೆಣ್ಣು ಮಕ್ಕಳ ದುರಂತ ಸಾವಿನ ವಿಚಾರವನ್ನೂ, ಅವರ ಮಾಂಗಲ್ಯದ ಭಾವನಾತ್ಮಕ ಸಂಗತಿಯನ್ನೂ ಮತ್ತು ತಮ್ಮ ಕೈಗೆ ಸಿಗುವ ಇಂತಹ ಯಾವುದೇ ವಿಚಾರವನ್ನೂ ರಾಜಕಾರಣಕ್ಕೆ ಬಳಸಿದ ಸನ್ನಿವೇಶ ನೋಡಿದ್ದೇವೆ ಎಂದರು.
ಈ ದೇಶದ ಪ್ರಜ್ಞಾವಂತ ನಾಗರೀಕರಾಗಿ, ದೇಶದ ಶೋಷಿತ ಜನರ ಮತ್ತು ಎಲ್ಲ ಜನಸಾಮಾನ್ಯರ ಆಶಾಕಿರಣವಾದ ಸಂವಿಧಾನವನ್ನು ಬದಲಿಸುವ ಕುರಿತ ಬದ್ಧತೆಯ ಬಗ್ಗೆ. ರಾಜಕೀಯ ಪಕ್ಷವೊಂದು ಮಾತಾಡುವುದನ್ನು ಕೇಳಿ ಆಘಾತಗೊಂಡಿದ್ದೇವೆ. ಹೆಣ್ಣುಮಕ್ಕಳ ಕೈಗೆ ಪುಡಿಗಾಸು ದೊರಕುತ್ತಿರುವುದನ್ನೂ ಸಹಿಸಲಾಗದೆ ಅವರನ್ನು ‘ದಾರಿತಪ್ಪುತ್ತಿದ್ದಾರೆ’ ಮಾತಾಡುವುದನ್ನು ಕಂಡು ನೊಂದಿದ್ದೇವೆ. ಎಂಬಂತಹ ಭಾಷೆಯಲ್ಲಿ ಇಂತಹ ಸಂದರ್ಭದಲ್ಲಿ ಮತದಾನದ ನಿಷ್ಪಕ್ಷಪಾತತೆಯ ಮೇಲೆ ಇಂತಹ ಹಲವು ಸಂಗತಿಗಳ ಪರಿಣಾಮವೇನು ಎಂಬ ಆತಂಕ ಹಲವರಲ್ಲಿ ಮನೆಮಾಡಿದೆ ಎಂದರು.
ಜೊತೆಗೆ, ಬಹುಸಂಖ್ಯಾತ ಜನಸಮುದಾಯಗಳ ಭಾಗವಾದ ನಾವುಗಳು, ಚುನಾವಣೆ ಹೊಸ್ತಿಲಲ್ಲಿ ಸಮುದಾಯಗಳು ಸಂದಿಗ್ಧದಲ್ಲಿರುವ ಸನ್ನಿವೇಶದಲ್ಲಿ ಚಿಂತಿಸುತ್ತಿದ್ದೇವೆ ಈ ಸಿಕ್ಕಿನಿಂದ ಹೊರಬರುವ ಮಾರ್ಗವೇನು? ಸಮುದಾಯದ ಮುಂದೆ ಇರುವ ಆಯ್ಕೆಗಳಾದರೂ ಏನು? ಈ ಅನುಮಾನಗಳ ಬಗ್ಗೆ ಮುಕ್ತವಾಗಿ ಚರ್ಚಿಸಲು, ಸವಾಲಿನ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ಕಂಡುಕೊಳ್ಳಲು. ಸಮುದಾಯಗಳ ಮುಂದಾಳುಗಳು ಮತ್ತು ಜನಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾಳಜಿಯುಳ್ಳ ನಾಗರಿಕರೆಲ್ಲರೂ ಒಂದೆಡೆ ಸೇರುತ್ತಿದ್ದೇವೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಗುಜರಾತ್‌ನ ಯುವ ಶಾಸಕ, ಜನಪ್ರಿಯ ರಾಷ್ಟ್ರೀಯನಾಯಕ, ಸಾಮಾಜಿಕ ಕಾರ್ಯಕರ್ತ ಜಿಗ್ನೇಶ್ ಮೇವಾನಿ ಅವರು ನಮ್ಮೊಂದಿಗೆ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ʼಸಮುದಾಯಗಳೊಂದಿಗೆ ಸಂವಾದ’ ಕಾರ್ಯಕ್ರಮಕ್ಕೆ ಕಲಬುರ್ಗಿಯ ಪ್ರಜ್ಞಾವಂತ ಜನತೆ ಬಂದು ಭಾಗವಹಿಸಬೇಕೆಂದು ಈ ಮೂಲಕ ಕರೆ ನೀಡುತ್ತಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಶ್ವಿನಿ ಮದನಕರ, ರಾಜೇಂದ್ರ ರಾಜವಾಳ, ಮರೆಪ್ಪ ಹಳ್ಳಿ, ಅಬ್ದುಲ್ ಖಾದರ್, ಸಂಧ್ಯಾರಾಜ್ ಸ್ಯಾಮೂವೆಲ್ ಇನ್ನಿತರರು ಉಪಸ್ಥಿತರಿದ್ದರು.
