ಧಾರವಾಡ | ʼಎನ್‌ಡಿಎ ಮೈತ್ರಿಕೂಟವನ್ನು ಸೋಲಿಸದಿದ್ದರೆ ಮತ್ತಷ್ಟು ಸಂಕಟ ಅನುಭವಿಸಬೇಕಾಗುತ್ತದೆʼ

Date:

ದೇಶವನ್ನು ದಿವಾಳಿತನಕ್ಕೆ ತಳ್ಳಿದ ಎನ್‌ಡಿಎ ಮತ್ತು ಇಂಡಿಯಾ  ಮೈತ್ರಿಕೂಟಗಳ ಅಭ್ಯರ್ಥಿಗಳನ್ನು ಈ ಲೋಕಸಭೆ ಚುನಾವಣೆಯಲ್ಲಿ ಸೋಲಿಸಲು ಜನ ಸಂಘಟಿತರಾಗದೇ ಹೋದರೆ, ಮುಂಬರುವ ದಿನಗಳಲ್ಲಿ ಮತ್ತಷ್ಟು ಸಂಕಟ ಎದುರಿಸಬೇಕಾಗುತ್ತದೆ ಎಂದು ಎಸ್‌ಯುಸಿಐ ಕಮ್ಯುನಿಸ್ಟ್‌ ಪಕ್ಷದ ಪಾಲಿಟ್ ಬ್ಯೂರೊ ಸದಸ್ಯ ಕಾಮ್ರೆಡ್ ಕೆ. ರಾಧಾಕೃಷ್ಣ ಎಚ್ಚರಿಸಿದರು.

ಧಾರವಾಡ ಜಿಲ್ಲೆಯ ಸಿಂಗನಹಳ್ಳಿ ಗ್ರಾಮದಲ್ಲಿ ಎಸ್‌ಯುಸಿಐ ಕಮ್ಯುನಿಸ್ಟ್‌ ಪಕ್ಷದ ಅಭ್ಯರ್ಥಿ ಶರಣಬಸವ ಗೋನವಾರ ಅವರ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮೊದಲು ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ದೇಶದಲ್ಲಿ ಬಂಡವಾಳಶಾಹಿ ಪರ ನೀತಿಗಳನ್ನು ಆರಂಭಿಸಿತು. ಜಾಗತೀಕರಣ, ಉದಾರೀಕರಣ, ಖಾಸಗೀಕರಣಕ್ಕೆ ಭಾರತದ ಬಾಗಿಲನ್ನು ತೆರೆಯಿತು. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಈ ನೀತಿಗಳನ್ನು ಅತ್ಯಂತ ವೇಗವಾಗಿ ಜಾರಿಗೊಳಿಸುತ್ತಿದೆ ಎಂದರು.

ಒಂದು ಕಲ್ಯಾಣ ರಾಜ್ಯದಲ್ಲಿ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಎಲ್ಲರಿಗೂ ಉಚಿತವಾಗಿ ದೊರೆಯುವಂತಿರಬೇಕು. ಆದರೆ, ಅವು ಇಂದು ಖಾಸಗಿ ಬಂಡವಾಳಗಾರರ ಕೈಗೆ ಸಿಕ್ಕು ವ್ಯಾಪಾರೀಕರಣಗೊಂಡಿವೆ. ತನ್ಮೂಲಕ ಕಲ್ಯಾಣ ರಾಜ್ಯದ ಆಶಯವೇ ಬುಡಮೇಲಾಗಿ ಹೋಗಿದೆ. ಈ ಪಕ್ಷಗಳ ಚುನಾವಣಾ ರಾಜಕೀಯದಿಂದ ಯಾವುದೇ ಬದಲಾವಣೆ ಸಾಧ್ಯವಿಲ್ಲ. ಹೋರಾಟಗಳಿಂದಲೇ ಸಮಾಜದಲ್ಲಿ ಬದಲಾವಣೆ ಬರುತ್ತದೆ ಎಂದು ನಂಬಿರುವ ನಾವು ಚುನಾವಣೆಯನ್ನು ನಮ್ಮ ಚಳವಳಿಯ ಭಾಗವಾಗಿಯೇ ನೋಡುತ್ತೇವೆ ಎಂದು ಪ್ರತಿಪಾದಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕಾಂಗ್ರೆಸ್‌ಗಿಂತ ಭಿನ್ನ ಎಂಬ ಭರವಸೆ ಮೂಡಿಸಿ ಅಧಿಕಾರ ಹಿಡಿದ ಬಿಜೆಪಿಯ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನರ ಬದುಕನ್ನು ಸಂಕಷ್ಟಕ್ಕೆ ತಳ್ಳಿತು. ಮೂರು ಕರಾಳ ಕೃಷಿ ಕಾನೂನುಗಳನ್ನು ಜಾರಿಗೆ ತಂದಿತು. ರೈತರು ಈ ಕಾಯ್ದೆಗಳ ವಿರುದ್ಧ ಸಂಘಟಿತರಾಗಿ ಹೋರಾಡಿ ಸುಮಾರು 750 ಜನ ರೈತರು ಹುತಾತ್ಮರಾದರು ಮತ್ತು ಈ ಕಾಯ್ದೆಗಳನ್ನು ವಾಪಸು ತೆಗೆದುಕೊಳ್ಳುವಂತೆ ಮಾಡಿದರು. ಕಾಂಗ್ರೆಸ್‌ನವರು ಮಾಡಿದ ಭ್ರಷ್ಟಾಚಾರದಿಂದಲೇ ಜನ ಬೇಸತ್ತು ಬಿಜೆಪಿಗೆ ಅಧಿಕಾರ ಕೊಟ್ಟರು. ಆದರೆ, ಬಿಜೆಪಿಯು ಅತ್ಯಂತ ಜನವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದೆ ಎಂದು ದೂರಿದರು.

ಬಿಜೆಪಿಯವರು ‘ಬೇಟಿ ಬಚಾವೋ, ಬೇಟಿ ಪಡಾವೋ’ ಎಂದು ದೊಡ್ಡದಾಗಿ ಘೋಷಣೆ ಮಾಡುತ್ತಾರೆ. ಆದರೆ, ಮಹಿಳಾ ಕುಸ್ತಿಪಟುಗಳಿಗೆ ಕಿರುಕುಳ ನೀಡಿದ ಬ್ರಿಜ್ ಭೂಷಣ ಸಿಂಗ್‌ರಂತಹ ಸಂಸದರು ಅವರ ಪಕ್ಷದಲ್ಲೇ ಇದ್ದಾರೆ. ಹಾಸನ ಕ್ಷೇತ್ರದಲ್ಲಿ ಎಚ್‌.ಡಿ. ದೇವೇಗೌಡರ ಕುಟುಂಬದ ದಬ್ಬಾಳಿಕೆ ಈಗ ಹೊರಗೆ ಬಂದಿದೆ. ಸಾವಿರಾರು ಮಹಿಳೆಯರು ಆ ಕುಟುಂಬದ ದೌರ್ಜನಕ್ಕೆ ಒಳಗಾಗಿರುವುದು ಬೆಳಕಿಗೆ ಬರುತ್ತಿದೆ. ಅಪ್ಪ ರೇವಣ್ಣ, ಮಗ ಪ್ರಜ್ವಲ್ ರೇವಣ್ಣನ ಕರ್ಮಕಾಂಡಗಳು ಬಯಲಿಗೆ ಬಂದರೂ ಅವರ ಜೊತೆ ಮೈತ್ರಿ ಮಾಡಿಕೊಂಡ ಮೋದಿ, ಶಾ ಹಾಗೂ ರಾಜ್ಯದ ಬಿಜೆಪಿ ಮುಖಂಡರು ಮಾತೇ ಆಡುತ್ತಿಲ್ಲ ಎಂದು ಟೀಕಿಸಿದರು.

ನಮ್ಮ ಪಕ್ಷ ದೇಶದ 151ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದು ರಾಜ್ಯದಲ್ಲಿ 19 ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದೇವೆ. ಜನವಿರೋಧಿಯಾಗಿರುವ ಎನ್‌ಡಿಎ ಹಾಗೂ ಇಂಡಿಯಾ ಮೈತ್ರಿಕೂಟಗಳನ್ನು ತಿರಸ್ಕರಿಸಿ ಈ ಬಾರಿ ಜನಪರ ಹೋರಾಟಗಳಿಂದ ಹೊರಹೊಮ್ಮಿದ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಶರಣು ಗೋನವಾರ ಅವರನ್ನು ಬೆಂಬಲಿಸಲು ಧಾರವಾಡ ಕ್ಷೇತ್ರದ ಜನತೆ ಮುಂದಾಗಬೇಕು ಎಂದು ಅವರು ಮನವಿ ಮಾಡಿದರು.

ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮಿತಿ ಸದಸ್ಯ ಕಾಮ್ರೆಡ್ ರಾಮಾಂಜನಪ್ಪ ಆಲ್ದಳ್ಳಿ ಅವರು ಮಾತನಾಡಿ, ನಮ್ಮ ಎಸ್‌ಯುಸಿಐ ಕಮ್ಯುನಿಸ್ಟ್‌ ಪಕ್ಷವು ಧಾರವಾಡ ಹಾಗೂ ಸುತ್ತಲಿನ ಜಿಲ್ಲೆಗಳಲ್ಲಿ ಜನರ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಹೋರಾಟಗಳನ್ನು ಸಂಘಟಿಸುತ್ತಿದೆ. ಕಾಂಗ್ರೆಸ್, ಬಿಜೆಪಿಯಂತಹ ಬಂಡವಾಳಶಾಹಿ ಪರ ಪಕ್ಷಗಳಿಗೆ ಪರ್ಯಾಯವಾಗಿ ಹೋರಾಟದ ರಾಜಕೀಯವನ್ನು ಮಾಡುತ್ತಿರುವ ನಮ್ಮ ಪಕ್ಷವನ್ನು ಬೆಂಬಲಿಸಿ ಹೋರಾಟಗಳನ್ನು ಬಲಪಡಿಸಬೇಕು ಎಂದು ಅವರು ಹೇಳಿದರು.

ಎಸ್‌ಯುಸಿಐ ಕಮ್ಯುನಿಸ್ಟ್‌ ಪಕ್ಷದ ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಣ ಜಡಗಣ್ಣವರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಮುಖಂಡರಾದ ವಿ.ನಾಗಮ್ಮಾಳ್, ಧಾರವಾಡ ಕ್ಷೇತ್ರದ ಅಭ್ಯರ್ಥಿ ಶರಣಬಸವ ಗೋನವಾರ, ಹಾವೇರಿ ಕ್ಷೇತ್ರದ ಅಭ್ಯರ್ಥಿ ಗಂಗಾಧರ ಬಡಿಗೇರ, ಉತ್ತರ ಕನ್ನಡ ಕ್ಷೇತ್ರದ ಅಭ್ಯರ್ಥಿ ಗಣಪತಿ ಹೆಗಡೆ, ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ವಿ.ದೀಪಾ, ಪಕ್ಷದ ಸದಸ್ಯರಾದ ಗೋವಿಂದ ಕೃಷ್ಣಪ್ಪನವರ, ಬಾಳೇಶ, ಖಂಡೋಜಿ, ರಾಣಪ್ಪ, ಮಡಿವಾಳಪ್ಪ ಮತ್ತಿತರರು ಇದ್ದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ವೃದ್ಧರು ಹಾಗೂ ವಿಕಲಚೇತನರ ಬೆಂಬಲ ಸಭೆ

ಪಿಂಚಣಿ ಕಡಿತ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಮತ್ತು ವಿಕಲಚೇತನರಿಗೆ ಉಂಟಾಗುತ್ತಿರುವ...

ಕೋಲಾರ | ಜಡತ್ವಕ್ಕೆ ವಿವೇಕ ನೀಡಿದ ಕುಸ್‌ ಕುಸ್ ದಿಲ್ ಕುಶ್ ನಾಟಕ

ಯಾವುದು ಸ್ಥಿರವಲ್ಲ. ಗಳಿಗೆ ಗಳಿಗೆಯೂ ಬದಲಾಗುತ್ತಿರುತ್ತದೆ. ಸ್ಥಿರವೆಂದು ಭಾವಿಸಿದವನಿಗೆ ಅವನ ತಲೆಯೇ...

ರಾಯಚೂರು | ಮದುವೆಗೆ ಪ್ರಿಯಕರನ ಮನೆಯವರ ವಿರೋಧ : ಮಹಡಿಯಿಂದ ಜಿಗಿದು ಯುವತಿ ಆತ್ಮಹತ್ಯೆ

ಪ್ರೀತಿಸಿದ ಯುವಕನ ಮನೆಯವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಮನನೊಂದ ಯುವತಿ ಮಹಿಳಾ...

ದಕ್ಷಿಣ ಕನ್ನಡ | ಭಾರೀ ಮಳೆ; ಕಲ್ಲಡ್ಕದಲ್ಲಿ ರಸ್ತೆಯೇ ಮಾಯವಾದ ದೃಶ್ಯ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಭಾರೀ ಮಳೆ ಸುರಿಯಿತು....