ಮಂಗಗಳ ದಾಳಿಗೆ ಇಬ್ಬರು ಮಹಿಳೆಯರು ಗಾಯಗೊಂಡಿರುವ ಘಟನೆ ಕಲಬುರಗಿ ಸಮೀಪದ ಬಳವಾಡಗಿ ಗ್ರಾಮದಲ್ಲಿ ನಡೆದಿದೆ.
ಕೋತಿಗಳ ಗುಂಪು ಗ್ರಾಮಕ್ಕೆ ಬಂದು ತಂಗಿದ್ದು, ಆಹಾರವನ್ನು ಕಸಿದುಕೊಳ್ಳುವ ಮೂಲಕ ಜನರಿಗೆ ತೊಂದರೆ ನೀಡಲು ಪ್ರಾರಂಭಿಸಿವೆ. ಕೋತಿಗಳ ದಾಳಿಗೊಳಗಾದ ಲಕ್ಷ್ಮಿಬಾಯಿ ಸಿದ್ದಪ್ಪ ಮತ್ತು ಅನಿತಾ ಚವ್ಹಾಣ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಲಕ್ಷ್ಮಿ ಎಂಬುವವರು ಆಸ್ಪತ್ರೆಯಿಂದ ಮನೆಗೆ ತೆರಳಿದ್ದು, ಅನಿತಾ ಎಂಬುವವರು ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.
“ಮಹಿಳೆಯರ ಕಾಲುಗಳು, ಕೈಗಳು ಮತ್ತು ಮುಖಕ್ಕೆ ಗಾಯಗಳಾಗಿವೆ. ಈ ಕೋತಿಗಳು ಸ್ಥಳೀಯರಿಗೆ ಅಪಾಯ ಉಂಟು ಮಾಡುತ್ತಿದ್ದು, ಮಹಿಳೆಯರು ಮತ್ತು ಮಕ್ಕಳು ಹೊರಗೆ ಹೋಗಲು ಹೆದರುತ್ತಿದ್ದಾರೆ. ಹಾಗಾಗಿ ಕೋತಿಗಳನ್ನು ತಮ್ಮ ಗ್ರಾಮದಿಂದ ಕಾಡಿಗೆ ಸ್ಥಳಾಂತರಿಸಬೇಕು” ಎಂದು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹನುಮ ಜಯಂತಿ | ಪ್ರಸಾದ ತಿಂದು 200 ಹೆಚ್ಚು ಮಂದಿ ಅಸ್ವಸ್ಥ; ಓರ್ವ ಮಹಿಳೆ ಸಾವು
“ಗ್ರಾಮಸ್ಥರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆದರುತ್ತಿದ್ದಾರೆ. ಹೊರಗೆ ಕಾಲಿಡುವವರು ಲಾಠಿ ಹಿಡಿದು ಓಡಾಡುವಂತಾಗಿದೆ” ಎಂದು ಆತಂಕ ವ್ಯಕ್ತಪಡಿಸಿದರು.
ವಲಯ ಅರಣ್ಯಾಧಿಕಾರಿ ವಿಜಯಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, “ಕೋತಿಗಳನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ, ಕೋತಿಗಳನ್ನು ಹಿಡಿಯಲು ಮಹಾರಾಷ್ಟ್ರದಿಂದ ತಂಡವೊಂದು ಆಗಮಿಸಲಿದೆ. ಸಂತ್ರಸ್ತರಿಗೆ ಸರ್ಕಾರದಿಂದ ಪರಿಹಾರ ದೊರಕಿಸಲಾಗುವುದು” ಎಂದು ಭರವಸೆ ನೀಡಿದ್ದಾರೆ.