ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದಲ್ಲಿ ನಡೆದ ಗಣೇಶ ಮೂರ್ತಿಯ ವಿಸರ್ಜನ ಮೆರವಣಿಗೆಯ ವೇಳೆ ಪಿಎಸ್‌ಐ ಒಬ್ಬರು ಡಿಜೆ ಹಾಡಿಗೆ ಸಮವಸ್ತ್ರದಲ್ಲೇ ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜೇರಟಗಿಯಲ್ಲಿ ಸೆಪ್ಟೆಂಬರ್ 23ರ ರಾತ್ರಿ ನಡೆದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯಲ್ಲಿ ಜೇವರ್ಗಿ ತಾಲೂಕಿನ ನೇಲೋಗಿ ಪೊಲೀಸ್ ಠಾಣೆಯ ಪಿಎಸ್‌ಐ ಆಗಿರುವ ಚಿದಾನಂದ ಸವದಿ ಎಂಬುವವರು ನೃತ್ಯ ಮಾಡಿದ್ದಾರೆ.
ಮೆರವಣಿಗೆಯಲ್ಲಿ ಭಜರಂಗಿ ಹಾಡಿಗೆ ಯುವಕರು ಚಿದಾನಂದ ಅವರನ್ನು ಭುಜದ ಮೇಲೆ ಹೊತ್ತು ನೃತ್ಯ ಮಾಡಿದ್ದಾರೆ ಎಂಬ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.
ಭದ್ರತೆ ನೀಡಬೇಕಿದ್ದ ಪಿಎಸ್‌ಐ, ಯುವಕರೊಂದಿಗೆ ಸೇರಿ ನೃತ್ಯ ಮಾಡುವ ಮೂಲಕ ಕರ್ತವ್ಯ ಲೋಪ ಎಸಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಗೃಹ ಇಲಾಖೆ ಏನು ಮಾಡುತ್ತಿದೆ? ಕಣ್ಮುಚ್ಚಿ ಕುಳಿತಿದೆಯೇ ಎಂದು ಜನರು ಸೋಷಿಯಲ್ ಮೀಡಿಯಾಗಳಲ್ಲಿ ಪ್ರಶ್ನಿಸುತ್ತಿದ್ದಾರೆ.
