ಐತಿಹಾಸಿಕ ನಗರಿ ಮತ್ತು ಕಲ್ಯಾಣ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾದ ಕಲಬುರಗಿ ನಗರದಲ್ಲಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಜೇಷನ್(ಎಸ್‌ಐಓ) ವಿದ್ಯಾರ್ಥಿ ಸಂಘಟನೆಯ “ರಾಜ್ಯ ಸದಸ್ಯರ ಸಮ್ಮೇಳನದ ಭಾಗವಾಗಿ ನವೆಂಬರ್ 2ನೇ ತಾರೀಕಿನಂದು ಸಾರ್ವಜನಿಕ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಸ್‌ಐಓ ಗುಲ್ಬರ್ಗಾ ನಗರ ಘಟಕದ ಅಧ್ಯಕ್ಷರಾದ ಸುಫಿಯಾನ್ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು, ರಾಜ್ಯ ಸದಸ್ಯರ ಸಮ್ಮೇಳನವು ನವೆಂಬರ್ 1, 2 ಮತ್ತು 3ನೇ ತಾರೀಕಿನಂದು ಮೂರು ದಿನಗಳ ಕಾಲ “ಓದು, ಪ್ರತಿರೋಧ ಹಾಗೂ ಪುನಶ್ಚೇತನ” ಎಂಬ ಘೋಷ್ಯ ವಾಕ್ಯದಡಿ ನಡೆಯಲಿದೆ. ಇದರ ಎರಡನೇ ದಿನವಾದ ಶನಿವಾರ ನವೆಂಬರ್ 2ನೇ ತಾರೀಖಿನಂದು ಸಂಜೆ 6 ಗಂಟೆಗೆ ಕಲಬುರಗಿ ಮೊಘಲ್ ಗಾರ್ಡನ್‌ನಲ್ಲಿ ಬೃಹತ್ ಸಾರ್ವಜನಿಕ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಾರ್ವಜನಿಕ ಸಮಾವೇಶಕ್ಕೆ ಮುಖ್ಯ ಅತಿಥಿಯಾಗಿ ಜಮಾಅತೆ ಇಸ್ಲಾಮಿ ಹಿಂದ್‌ನ ರಾಷ್ಟ್ರೀಯ ಅಧ್ಯಕ್ಷರಾದ ಸೈಯ್ಯದ್ ಸಾದತುಲ್ಲಾಹ್ ಹುಸೇನಿಯವರು ದೆಹಲಿಯಿಂದ ಆಗಮಿಸಲಿದ್ದಾರೆ. ಕಲಬುರಗಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ರವರು ಅತಿಥಿಯಾಗಿ ಭಾಗವಹಿಸಲಿದ್ದಾರೆ, ಇದರೊಂದಿಗೆ ಜಮಾಅತ್ ಇಸ್ಲಾಮಿ ಹಿಂದ್‌ನ ರಾಷ್ಟ್ರೀಯ ಕಾರ್ಯದರ್ಶಿ ಎಸ್ ಅಮೀನುಲ್ ಹಸನ್, ಎಸ್.ಐ.ಓ ಕರ್ನಾಟಕ ರಾಜ್ಯಾಧ್ಯಕ್ಷರಾದ ಝೀಶಾನ್ ಅಖಿಲ್ ಸಿದ್ದೀಕಿ ಹಾಗೂ ಜಮಾಅತೆ ಇಸ್ಲಾಮಿ ಹಿಂದ್ ನ ಗುಲ್ಬರ್ಗಾ ಇದರ ಸ್ಥಾನೀಯ ಅಧ್ಯಕ್ಷರಾದ ಝಾಕೀರ್ ಹುಸೇನ್ ಅವರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದ್ದಾರೆ.
ನಗರದ ಎಲ್ಲ ಧರ್ಮೀಯ ವಿದ್ಯಾರ್ಥಿಗಳು, ಯುವಜನರು, ಹಾಗೂ ಹಿರಿಯ ನಾಗರಿಕರು “ಓದು, ಪ್ರತಿರೋಧ ಮತ್ತು ಪುನಶ್ಚೇತನ” ಎಂಬ ವಿಷಯದಲ್ಲಿ ನಡೆಯುವ ಈ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಗುಲ್ಬರ್ಗಾ ನಗರ ಘಟಕದ ಅಧ್ಯಕ್ಷರಾದ ಸುಫಿಯಾನ್ ವಿನಂತಿಸಿಕೊಂಡಿದ್ದಾರೆ.
