ಬಿಹಾರದ ಬೋಧಗಯಾದಲ್ಲಿರುವ ಮಹಾಬೋಧಿ ವಿಹಾರದ ಸಂಪೂರ್ಣ ಆಡಳಿತವನ್ನು ಬೌದ್ಧರಿಗೆ ಹಸ್ತಾಂತರ ಮಾಡಿ, ಬೋಧಗಯಾ ಟೆಂಪಲ್ (ಬಿಟಿ) ಕಾಯ್ದೆ–1949 ರದ್ದು ಮಾಡುವಂತೆ ಆಗ್ರಹಿಸಿ ಬೌದ್ಧ ಧರ್ಮೀಯರು ಕಲಬುರಗಿ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಸಂವಿಧಾನ ದಿನದಂದು ದೇಶದಾದ್ಯಂತ ಪ್ರತಿಭಟನೆಗೆ ದಲಿತ ಸಂಘಟನೆಗಳು, ಬೌದ್ಧ ಸಂಘ–ಸಂಸ್ಥೆಗಳು, ಬುದ್ಧ ವಿವಾಹರಗಳು ಹಾಗೂ ಆಲ್ ಇಂಡಿಯಾ ಬುದ್ಧಿಸ್ಟ್ ಫೋರಂ ಕರೆ ನೀಡಿದ್ದವು.
ಪ್ರತಿಭಟನೆ ನಡೆಸಿದ ಬುದ್ಧನ ಅನುಯಾಯಿಗಳು ಹಾಗೂ ಸಂಘಟನೆಗಳ ಮುಖಂಡರು ರಾಷ್ಟ್ರಪತಿ, ಪ್ರಧಾನಿ ಹಾಗೂ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.
ಪ್ರತಿಭಟನೆ ಉದ್ದೇಶಿಸಿ ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ ಮಾತನಾಡಿ, “ಬುದ್ಧನಿಗೆ ಜ್ಞಾನೋದಯವಾದ ಬೋಧಗಯಾ ಜಗತ್ತಿನಲ್ಲಿ ಇರುವ ಬೌದ್ಧರಿಗೆ ಪವಿತ್ರ ಸ್ಥಳವಾಗಿದೆ. ಇದುವರೆಗೂ ಬೌದ್ಧ ಪರಂಪರೆಯ ಆಡಳಿತವನ್ನು ಸಂಪೂರ್ಣವಾಗಿ ಬೌದ್ಧರಿಗೆ ನೀಡಿಲ್ಲ. ತಲಾ ನಾಲ್ವರು ಬೌದ್ಧರು ಮತ್ತು ಹಿಂದೂಗಳು ಒಳಗೊಂಡ ಆಡಳಿತ ಮಂಡಳಿ ಇರುವುದು ಸರಿಯಲ್ಲ ಸಂಪೂರ್ಣವಾಗಿ ವಿಹಾರದ ಆಡಳಿತ ಬೌದ್ಧರಿಗೆ ನೀಡಿ ಬೋಧಗಯಾ ದೇವಸ್ಥಾನ (ಬಿಟಿ) ಕಾಯ್ದೆ–1949 ರದ್ದು ಮಾಡಬೇಕು” ಎಂದು ಆಗ್ರಹಿಸಿದರು.

ಬೌದ್ಧ ಸಾಹಿತಿ ಬುದ್ಧ ಘೋಷ ದೇವಿಂದ್ರ ಹೆಗ್ಗಡೆ ಮಾತನಾಡಿ, “ಸಂವಿಧಾನದ ಕಲಂ 25, 26 ಮತ್ತು 29ರ ಅನ್ವಯ ಎಲ್ಲ ಜಾತಿ, ಜನಾಂಗದವರು ಸ್ವತಂತ್ರವಾಗಿ ದೇವಸ್ಥಾನ, ಮಂದಿರ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಆಯಾ ಜಾತಿಗಳ ದೇವಸ್ಥಾನ, ಟ್ರಸ್ಟ್‌ಗಳಿಗೆ ಆಯಾ ಜಾತಿಗಳ ಪ್ರಮುಖರೆ ಆಡಳಿತ ಮಂಡಳಿಗಳಿವೆ. ಆದರೆ, ಬೋಧಗಯಾದಲ್ಲಿ ಇದಕ್ಕೆ ವಿರುದ್ಧವಾದ ಆಡಳಿತ ಮಂಡಳಿ ಇದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಬುದ್ಧನಿಗೆ ಜ್ಞಾನೋದಯವಾದ ಬೋಧಗಯಾ ಬೌದ್ಧರಿಗೆ ಪವಿತ್ರ ಸ್ಥಳವಾಗಿದ್ದು, ಅದರ ಆಡಳಿತವನ್ನು ಸಂಪೂರ್ಣವಾಗಿ ಬೌದ್ಧರಿಗೆ ನೀಡಿಲ್ಲ. ತಲಾ ನಾಲ್ವರು ಬೌದ್ಧರು ಮತ್ತು ಹಿಂದೂಗಳು ಒಳಗೊಂಡ ಆಡಳಿತ ಮಂಡಳಿ ರದ್ದು ಮಾಡಬೇಕು. ಬೋಧಗಯಾದ ಆಡಳಿತವನ್ನು ಬೌದ್ಧರಿಗೆ ನೀಡಬೇಕು. ಇದರಿಂದ ಬುದ್ಧನಿಗೆ ಗೌರವ ನೀಡಿದಂತಾಗುತ್ತದೆ ಎಂದು ಪ್ರತಿಪಾದಿಸಿದರು.
ಬೌದ್ಧ ಸಮುದಾಯದ ಸದಸ್ಯರು, ಹಿರಿಯ ಬೌದ್ಧ ಭಿಕ್ಕುಗಳು, ಕಾನೂನು ತಜ್ಞರು, ಭಾರತ ಮತ್ತು ಅಂತರರಾಷ್ಟ್ರೀಯ ಬೌದ್ಧ ಭಿಕ್ಕುಗಳನ್ನು ಒಳಗೊಂಡ ಹೊಸ ಬೋಧಗಯಾ ಮಹಾಬೋಧಿ ಮಹಾವಿಹಾರ ಚೈತ್ಯ ಟ್ರಸ್ಟ್ ರಚನೆ ಮಾಡಬೇಕು. ಈ ಬಗ್ಗೆ ಪ್ರಧಾನಿ ಹಾಗೂ ರಾಷ್ಟ್ರಪತಿಗಳು ತ್ವರಿತವಾಗಿ ಕ್ರಮ ತೆಗೆದುಕೊಂಡು, ಮಹಾಬೋಧಿ ವಿಹಾರವನ್ನು ಬೌದ್ಧ ಸಮುದಾಯದಕ್ಕೆ ಹಿಂತಿರುಗಿಸಬೇಕು ಎಂದು ಒತ್ತಾಯಿಸಿದರು.
ಭಾರತೀಯ ಕಾನೂನಿನ ಅಡಿಯಲ್ಲಿ ಮಾನ್ಯತೆ ಪಡೆದ ಅಲ್ಪಸಂಖ್ಯಾತ ಬೌದ್ಧರ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಹೀಗಾಗಿ, ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗವನ್ನು ತುರ್ತಾಗಿ ಮರು ಪರಿಶೀಲನೆ ಮಾಡಬೇಕಿದೆ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿದ್ಧಾರ್ಥ ವಿಹಾರದ ಭಂತೆ ಸಂಘಾನಂದ, ಬೀದರ್ ಬುದ್ಧವಿಹಾರದ ಭಂತೆ ವರಜ್ಯೋತಿ, ಭಂತೆ ಅಶ್ವಜ್ಯೋತಿ, ಸೂರ್ಯಕಾಂತ ನಿಂಬಾಳಕರ, ಅರ್ಜುನ ಭದ್ರೆ, ಸೂರ್ಯಕಾಂತ ನಿಂಬಾಳಕರ್, ಸೂರ್ಯಕಾಂತ್, ಭೀಮಶಾ ಖನ್ನಾ, ಮಲ್ಲಪ್ಪ ಹೊಸಮನಿ, ಅಶೋಕ ಅಂಬಲಗಿ, ಪ್ರಕಾಶ ಅವರಾದಕರ್, ರಾಜು ಕೋರಳ್ಳಿ, ಡಾ.ರಾಹುಲ್ ಸಿಂಧೆ, ಮೀಲಿಂದ ಸನಗುಂದಿ, ರಮೇಶ ಚಿಮ್ಮಿದಲಾಯಿ, ಸುರೇಶ್ ಮೇನಗಾನ್, ಎಸ್. ಜಿ ಬಾಡಿಗಿ, ಪ್ರೊ.ವಿ ಟಿ ಕಾಂಬಳೆ, ಆರ್. ಎಮ್ ಸಿಂಧೆ, ಡಾ.ಎಮ್.ಬಿ ಐವಳೆ, ರೇವಣಸಿದ್ದ, ಮಲ್ಲಿಕಾರ್ಜುನ, ಎನ್.ಎಸ್ ಕಟ್ಟಿಮನಿ, ವೈ ಸಿದ್ರಾಮಪ್ಪ, ಅಶೋಕ್ ಕೆ, ಭೀಮಣ್ಣ, ಶಿವಪುತ್ರ ಹಂಗರಗಿ, ಬಿ.ಎನ್ ಬಂತೇಜಿ, ರಾಜಕುಮಾರ, ಸಂಘನಂದ ಬಂತೇಜಿ ಕಲಬುರಗಿ, ಅಶ್ವಜ್ಯೋತಿ ಬಂತೇಜಿ, ವರಜ್ಯೋತಿ ಬಂತೇಜಿ, ಎಸ್. ಎಸ್ ತಿಗಡಿ, ಈಶ್ವರ ಬಾಡಿಗಿ, ಸಂಜೀವಕುಮಾರ್ ಟಿ ಜವಲ್ಕರ್, ಅರ್ಜುನ ಗೊಬ್ಬರ್, ಬಾಬುರಾವ್ ಶೇಳ್ಳಗಿ, ಮಾರುತಿ ಹುಲಗೊಲ್ಕರ್, ಶ್ರೀಹರಿ ಕರ್ಕಳಿ, ಸೋಮಶೇಖರ್ ಬೆಡಕಪಳ್ಳಿ, ವಿಜಯಕುಮಾರ್ ಸಜ್ಜನ್, ಸತೀಶ್ ಕೊಭಾಲ್ಕರ್, ದೇವಿಂದ್ರ ಕುಮಸಿ, ಮಲ್ಲಿಕಾರ್ಜುನ, ಗೋಪಾಲ ರಾಮಪುರೆ, ರೇವಣಸಿದ್ದ ಹೊಡಬೀರನಳ್ಳಿ, ಇನ್ನಿತರ ಅನೇಕ ಮುಖಂಡರು ಭಾಗವಹಿಸಿದ್ದರು.