ಕಲ್ಯಾಣ ಕರ್ನಾಟಕಕ್ಕೆ ರಾಜ್ಯ ಸರ್ಕಾರದಿಂದ ಅನ್ಯಾಯವಾಗುತ್ತಿದೆ. ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಯತ್ನಿಸಿದ ಹೋರಾಟ ಸಮಿತಿಯವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಹೋರಾಟ ಸಮಿತಿಯ ಅಧ್ಯಕ್ಷ ಎಂ.ಎಸ್.ಪಾಟೀಲ ನರಿಬೋಳ ಸೇರಿದಂತೆ ಹಲವು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು, ಆ ಬಳಿಕ ಬಿಡುಗಡೆ ಮಾಡಿದ್ದಾರೆ.
ಕಲಬುರಗಿ ನಗರದ ಕೋರ್ಟ್ ವೃತ್ತದಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದವರೆಗೆ ಪ್ರತ್ಯೇಕ ರಾಜ್ಯದ ಧ್ವಜವನ್ನು ಪ್ರದರ್ಶಿಸುತ್ತಾ ಮೆರವಣಿಗೆಯಲ್ಲಿ ಸಾಗಿದ ಎಂ.ಎಸ್. ಪಾಟೀಲ ನರಿಬೋಳ, ವಿನೋದ ಕುಮಾರ ಜೆನೇವರಿ, ಲಕ್ಷ್ಮೀಕಾಂತ ಸ್ವಾದಿ, ಶ್ರವಣಕುಮಾರ ನಾಯಕ ಮತ್ತು ಇತರರನ್ನು ಸ್ಟೇಶನ್ ಬಝಾರ್ ಠಾಣೆಯ ಪೊಲೀಸರು ವಶಕ್ಕೆ ಪಡೆದರು.
#WATCH | Workers of Kalyana Karnataka Pratyeka Rajya Horata Samiti detained as they hold a protest in Kalaburagi demanding a separate state for the Kalyana Karnataka region. pic.twitter.com/5xQSV2QCiB
— ANI (@ANI) November 1, 2024
ಈ ಸಂದರ್ಭದಲ್ಲಿ ಮಾತನಾಡಿದ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್. ಪಾಟೀಲ ನರಿಬೋಳ, “ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ. 371 (ಜೆ) ಕಲಂ ಸಂಪೂರ್ಣ ಕಾರ್ಯರೂಪಕ್ಕೆ ಬರುತ್ತಿಲ್ಲ. ಸಂಪೂರ್ಣ ಜಾರಿಯಾಗಲು ಕಲ್ಯಾಣ ಕರ್ನಾಟಕ ಭಾಗದ ಹೊರತುಪಡಿಸಿ ಇತರ ಜನಪ್ರತಿನಿಧಿಗಳು ಹಾಗೂ ಕೆಲವು ಕುತಂತ್ರಿ ಅಧಿಕಾರಿಗಳು ಬಿಡುತ್ತಿಲ್ಲ. ನಮ್ಮ ಭಾಗದ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನಗಳು ಸಿಗುತ್ತಿಲ್ಲ” ಎಂದು ಆರೋಪಿಸಿದರು.
“ಅಡಿಕೆ, ರಾಗಿ ಬೆಳೆಗಳಿಗೆ ಸಿಗುತ್ತಿರುವ ಪ್ರಾಮುಖ್ಯತೆ ನಮ್ಮ ಪ್ರದೇಶದಲ್ಲಿ ಬೆಳೆಯುವ ತೊಗರಿ, ಜೋಳಕ್ಕೆ ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಎಲ್ಲಾ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಮಟ್ಟದಲ್ಲಿ ಪ್ರತ್ಯೇಕ ರಾಜ್ಯ ಧ್ವಜಾರೋಹಣ ಮಾಡಿ ತೆಲಂಗಾಣ ಮಾದರಿ ಹೋರಾಟ ಮಾಡುತ್ತೇವೆ” ಎಂದು ಎಚ್ಚರಿಸಿದರು.
ಇದನ್ನು ಓದಿದ್ದೀರಾ? ರಾಯಚೂರು | ದೀಪಾವಳಿ ಬಂದರೂ ನಗರದ ಬೀದಿ ದೀಪಗಳಿಗೆ ಇನ್ನೂ ಬಂದಿಲ್ಲ ‘ಬೆಳಕು’
ಸರ್ಕಾರ ಪೊಲೀಸರ ಮುಖಾಂತರ ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಇದು ಖಂಡನೀಯ. ಬಂಧನಕ್ಕೆ ಹೆದರಿ ಹೋರಾಟ ಕೈಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದರು.
ನಂತರ ಸ್ಟೇಶನ್ ಬಝಾರ್ ಠಾಣೆಯ ಪೊಲೀಸ್ ಅಧಿಕಾರಿಗಳು ಹೋರಾಟಗಾರರಿಂದ ಮುಚ್ಚಳಿಕೆ ಬರೆಸಿಕೊಂಡು, ಬಿಡುಗಡೆ ಮಾಡಿದರು.
