ನಮ್ಮ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠವಾದ ಸಂವಿಧಾನ. ಈ ದೇಶದ ಪ್ರತಿಯೊಬ್ಬ ಪ್ರಜೆಯು ಸ್ವತಂತ್ರವಾಗಿ ಜೀವಿಸುವುದಕ್ಕೆ ಸಂವಿಧಾನ ಅವಕಾಶ ನೀಡಿದೆ. ಈ ದೇಶದ ರಕ್ಷಾಕವಚ ಸಂವಿಧಾನ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಶಾಸಕ ಅಜಯ ಸಿಂಗ್ ಹೇಳಿದರು.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂವಿಧಾನದಿಂದ ಸಾಮಾಜಿಕ ನ್ಯಾಯ ಸಿಕ್ಕಿದೆ. ಭಾರತೀಯ ಪ್ರಜೆಗಳೆಲ್ಲರೂ ಕೂಡ ಸಂವಿಧಾನದ ಪಾಲನೆ ಮಾಡಬೇಕು. ರಾಜ್ಯ ಸರ್ಕಾರ ಒಂದು ತಿಂಗಳುಗಳ ಕಾಲ ಸಂವಿಧಾನ ಜಾಗೃತಿ ಜಾತ ಹಮ್ಮಿಕೊಂಡಿದ್ದು ಹೆಮ್ಮೆಯ ವಿಷಯ.
ಭಾರತೀಯ ಪ್ರತಿಯೊಬ್ಬ ಪ್ರಜೆಯೂ ಕೂಡ ಸಂವಿಧಾನದ ಆಶೆಯನ್ನು ತಿಳಿದುಕೊಳ್ಳಬೇಕು ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಸಂವಿಧಾನ ಜಾಗೃತಿ ರಥಯಾತ್ರೆ ಸಂಚರಿಸಲಿದ್ದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನದ ಮಹತ್ವ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸೊನ್ನ ವಿರಕ್ತಮಠದ ಶಿವಾನಂದ ಸ್ವಾಮೀಜಿ, ತಾಲೂಕು ದಂಡಾಧಿಕಾರಿ ಮಲ್ಲಣ್ಣ ಯಲಗೋಡ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮೋನಮ್ಮ ಸುತಾರ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ತಾಲೂಕು ಪಂಚಾಯಿತಿ ಇ.ಒ ಅಬ್ದುಲ್ ನಬಿ, ಡಾ. ಸಿದ್ದು ಪಾಟೀಲ್, ವಿವಿಧ ಇಲಾಖೆಯ ಅಧಿಕಾರಿಗಳು ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಹಾಗೂ ಸಂವಿಧಾನ ಪ್ರಿಯರು ಭಾಗವಹಿಸಿದ್ದರು.