ಬೇಸಿಗೆ ಆರಂಭದಲ್ಲಿಯೇ ಧಾರವಾಡ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಈ ಸ್ಥಿತಿ ತಾರರಕ್ಕೆ ಹೋಗುವ ಸಾಧ್ಯತೆ ಗೋಚರವಾಗುತ್ತಿದೆ. ಸಮಸ್ಯೆ ನಿವಾರಣೆಗೆ ಮತ್ತು ತುರ್ತು ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರವು ಜಿಲ್ಲೆಯ ಬರಪೀಡಿತ ಪ್ರತೀ ತಾಲೂಕಿಗೆ 25 ಲಕ್ಷ ರೂ.ದಂತೆ ಎಂಟು ತಾಲೂಕುಗಳಿಗೆ ತಾತ್ಕಾಲಿಕವಾಗಿ 2 ಕೋಟಿ ರೂ.ಅನುದಾನ ಬಿಡುಗಡೆ ಮಾಡಿದೆ.
ಧಾರವಾಡ ತಾಲೂಕಿನಲ್ಲಿ ಪ್ರಸ್ತುತ 17 ಗ್ರಾಮ, ಹುಬ್ಬಳ್ಳಿ ತಾಲೂಕು ವ್ಯಾಪ್ತಿಯ 16 ಗ್ರಾಮ, ಕುಂದುಗೋಳ ತಾಲೂಕಿನ 15 ಗ್ರಾಮಗಳು, ಕಲಘಟಗಿ ತಾಲೂಕಿನ 54, ನವಲಗುಂದ ತಾಲೂಕಿನ 16, ಅಣ್ಣಿಗೇರಿಯ 12 ಮತ್ತು ಅಳ್ನಾವರ ತಾಲೂಕಿನ 9 ಗ್ರಾಮಗಳು ಸೇರಿ ಒಟ್ಟು 139 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದು ಎಂದು ಜಿಲ್ಲಾಡಳಿತ ಗುರುತಿಸಿದೆ.
ಕುಂದಗೋಳ ತಾಲೂಕಿನ ಶಿರೂರು, ಬೆಳ್ಳಿಗಟ್ಟಿ, ಸಂಶಿ, ಕೊಡ್ಲಿವಾಡ, ಬೆನಕನಹಳ್ಳಿ ಸೇರಿ 8 ರಿಂದ 10 ಗ್ರಾಮಗಳಲ್ಲಿ, ಕಲಘಟಗಿ ತಾಲೂಕಿನ ಮಿಶ್ರಿಕೋಟೆ, ಸಂಗಮೇಶ್ವರ, ಸುಳಕಟ್ಟಿ, ಆಲದಕಟ್ಟಿ ಸೇರಿ ಹಲವು ಗ್ರಾಮಗಳಲ್ಲಿ ಹೆಚ್ಚಿನ ಕುಡಿಯುವ ನೀರಿನ ಸಮಸ್ಯೆ ಇದೆ. ಟ್ಯಾಂಕ್‌ಗಳ ಮೂಲಕ ನೀರು ಪೂರೈಸಲು ಅಧಿಕಾರಿಗಳಿಗೆ ಕೋರಿದರೆ, ಇಂದಿಗೂ ಸ್ಪಂದಿಸುತ್ತಿಲ್ಲ. ಒಂದು ವಾರದೊಳಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಖಾಲಿ ಕೊಡಗಳ ಸಮೇತ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ರತ್ನ ಭಾರತ ರೈತ ಸಮಾಜದ ಮುಖಂಡರು ಎಚ್ಚರಿಸಿದ್ದಾರೆ.
ಕೆಲವೆಡೆ ಕೊಳವೆಬಾವಿಗಳ ಅಂತರ್ಜಲ ಮಟ್ಟ ಕುಸಿದಿದ್ದು, ತಾಲೂಕಿನಲ್ಲಿ ಹೆಚ್ಚು ನೀರು ಬರುವ 43 ಕೊಳವೆಬಾವಿಗಳನ್ನು ಈಗಾಗಲೇ ಗುರುತಿಸಲಾಗಿದ್ದು, ನೀರಿನ ಸಮಸ್ಯೆ ಉಂಟಾದಲ್ಲಿ ಆ ಕೊಳವೆಬಾವಿಗಳ ಮೂಲಕ ನೀರು ಪಡೆದು ಜನರಿಗೆ ಪೂರೈಸುವ ಚಿಂತನೆಯಿದೆ ಎಂದು ಪಂಚಾಯತ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಉಮಚಗಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚು ಉಲ್ಬಣಗೊಂಡಿದೆ. ಈ ಗ್ರಾಮದಲ್ಲಿ ಸುಮಾರು 2500 ಜನಸಂಖ್ಯೆ ಇದೆ. ಗ್ರಾಮಕ್ಕೆ ನಿತ್ಯ ಮೂರು ಟ್ಯಾಂಕರ್‌ಗಳ ಮೂಲಕ 24 ಸಾವಿರ ಲೀಟರ್ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ ಎಂದು ಪಂಚಾಯತ್ ಅಧಿಕಾರಿಗಳು ಮಾಹಿತಿ ನಿಡಿದ್ದಾರೆ.
ಇನ್ನು, ಉಮಚಗಿ ಗ್ರಾಮದಲ್ಲಿ ಮಳೆಗಾಲದಲ್ಲಿ ಜನ, ಜಾನುವಾರುಗಳಿಗೆ ಅನುಕೂಲಕ್ಕಾಗಿ ಕೆರೆ ನಿರ್ಮಿಸಲಾಗಿತ್ತು, ಈ ಕೆರೆಯಲ್ಲಿ 2 ವರ್ಷಗಳಿಗೆ ಆಗುವಷ್ಟು ನೀರು ಸಂಗ್ರಹವಾಗಿತ್ತು. ಆದರೆ, ಕಳೆದ ಡಿಸೆಂಬರ್‌ನಲ್ಲಿ ಗ್ರಾಮದ ವ್ಯಕ್ತಿಯೊಬ್ಬರು ಕೆರೆಯಲ್ಲಿ ಬಿದ್ದು ಮೃತಪಟ್ಟರು ಎಂಬ ಕಾರಣಕ್ಕೆ ಗ್ರಾಮದ ಜನ ಕೆರೆಯಲ್ಲಿದ್ದ ನೀರನ್ನು ಮೋಟರ್‌ಹಚ್ಚಿ ಹೊರಗೆ ಹಾಕಿ ಇಡೀ ಕೆರೆಯನ್ನೇ ಖಾಲಿ ಮಾಡಿದ್ದರು. ಇದೀಗ ಇಡೀ ಗ್ರಾಮವು ನೀರಿನ ಸಮಸ್ಯೆ ಎದುರಿಸುವಂತಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ಒಟ್ಟಿನಲ್ಲಿ ಜಿಲ್ಲೆಯ ಅನೇಕ ಗ್ರಾಮಗಳು ಬೇಸಿಗೆ ಆರಂಭದಲ್ಲೆ ನೀರಿನ ಸಮಸ್ಯೆ ಅನುಭವಿಸುತ್ತಿದ್ದು ಇನ್ನೂ ಮಧ್ಯ ಬೇಸಿಗೆಯಲ್ಲಿನೀರಿಗೆ ಉಂಟಾಗಬಹುದಾದ ತ್ವಾರದ ಬಗ್ಗೆ ಯೋಚಿಸಬೇಕಿದೆ.