ಗ್ರಾಮ ಪಂಚಾಯಿತಿಯಲ್ಲಿ ಘನತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ಮಹಿಳೆಯರು ಗ್ರಾಮದ ಸ್ವಚ್ಛತೆ ಜತೆಗೆ ತಮ್ಮನ್ನೂ ಅಭಿವೃದ್ಧಿಪಡಿಸಿಕೊಂಡು ಸಬಲರಾಗಬೇಕು ಎಂದು ಯೋಜನಾ ನಿರ್ದೇಶಕ ಜಗದೇವಪ್ಪಾ ಬಿ ತಿಳಿಸಿದರು.
ಕಲಬುರಗಿ ಜಿಲ್ಲಾ ಪಂಚಾಯತ್, ಸಾಹಸ್ ಸಂಸ್ಥೆ ಹಾಗೂ ರೈನ್ ಮ್ಯಾಟರ್ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಿಷನ್ ಸ್ವಚ್ಛ ಕಲ್ಯಾಣ ಕರ್ನಾಟದ ಸುಸ್ಥಿರ ಘನತ್ಯಾಜ್ಯ ನಿರ್ವಹಣೆ ಕಾರ್ಯಕ್ರಮ ಅನುಷ್ಠಾನ ಕುರಿತು ಜಿಲ್ಲೆಯ 54 ಗ್ರಾಮ ಪಂಚಾಯಿತಿಗಳ ಸಂಜೀವಿನಿ ಒಕ್ಕೂಟದ ಮಹಿಳೆಯರಿಗೆ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು.
“ಮಹಿಳೆಯರ ಸಬಲಿಕರಣಕ್ಕಾಗಿಯೇ ಎನ್‌ಆರ್‌ಎಲ್‌ಎಂ ಯೋಜನೆಯ ಇದ್ದು, ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಮಹಿಳೆಯರ ಅಭಿವೃದ್ಧಿಗೆ ಜಿಲ್ಲಾ ಪಂಚಾಯತ್ ಸದಾ ಬೆಂಬಲವಾಗಿ ನಿಲ್ಲುತ್ತದೆ” ಎಂದು ಕಲಬುರಗಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಜಗದೇವಪ್ಪಾ ಬಿ ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಾರುಣಿಕ ಕೊರೆ ಮಾತನಾಡಿ, “ಪ್ರಸ್ತುತ ಸಂದರ್ಭದಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ಸೊಳ್ಳೆ ಕಡಿತದಿಂದ ಡೆಂಘೀ ಹರಡುತ್ತಿದೆ. ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಮಹಿಳೆಯರು ಮುನ್ನೆಚ್ಚರಿಕೆ ಕ್ರಮವಾಗಿ ತಾವು ನಿರ್ವಹಿಸುವ ಘನತ್ಯಾಜ್ಯ ವಿಲೇವಾರಿ ಕೆಲಸದಲ್ಲಿ ಜಾಗರೂಕರಾಗಿರಬೇಕು. ತಮ್ಮ ಮನೆಯ ಸುತ್ತಮುತ್ತ ಸಂಗ್ರಹಗೊಂಡ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವುದರಿಂದ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ನೀರು ಸಂಗ್ರಹಿಸಿಡುವ ಡ್ರಮ್, ಬಕೆಟ್, ಕೊಡ ಹಾಗೂ ಇನ್ನಿತರ ವಸ್ತುಗಳನ್ನು ಪ್ರತಿದಿನ ತೊಳೆದು ಸ್ವಚ್ಛವಾಗಿಟ್ಟುಕೊಳ್ಳಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ನಮಾಜ್ ವೇಳೆ ಮಸೀದಿಗೆ ಮದ್ಯದ ಬಾಟಲಿ ಎಸೆತ : ಇಬ್ಬರ ಬಂಧನ
ಜಿಲ್ಲಾ ಆರೋಗ್ಯ ಅಧಿಕಾರಿ ಮತ್ತು ಜಿಲ್ಲಾ ಆರೋಗ್ಯ ತರಬೇತುದಾರರಾದ ಡಾ ಲಕ್ಷ್ಮಿದೇವಿ ಮಾತನಾಡಿ, “ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತ್ಯಾಜ್ಯದಲ್ಲಿ ವಿಲೇವಾರಿಯಲ್ಲಿ ತೊಡಗಿರುವ ಮಹಿಳೆಯರು ತಮ್ಮ ವೈಯಕ್ತಿಕ ಸ್ವಚ್ಛತೆ ಹಾಗೂ ಮುಟ್ಟಿನಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸ್‌ಬಿಎಂ(ಜಿ) ಸಮಾಲೋಚಕರು, ಸಾಹಸ್ ಸಂಸ್ಥೆಯ ಪಿ ಸಿ ರಾಜಶೇಖರ್ ಬಿರಾದಾರ್, ದೇವರಾಜ್ ಆರ್ ಕನ್ನಡಿಗ ಹಾಗೂ ಸಿಬ್ಬಂದಿಗಳು, ಎನ್‌ಆರ್‌ಎಲ್‌ಎಂ, ಡಿಪಿಎಂ, ಎಸ್‌ಎಚ್‌ಜಿ ಮಹಿಳೆಯರು ಇದ್ದರು.
