ದಲಿತ ಸಂಘಟನೆಗಳ ಸಮನ್ವಯ ಸಮಿತಿಯಿಂದ ಸಮಾಜ ಕಲ್ಯಾಣ ಸಚಿವ ಡಾ. ಎಚ್ ಸಿ ಮಹದೇವಪ್ಪ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸದಂತೆ ಕಲಬುರಗಿಯ ಸುನೀಲ್ ಮಾನಪಡೆ ಆಗ್ರಹಿಸಿದರು.
ಕಲಬುರಗಿ ನಗರದ ಪತ್ರಿಕೆ ಭಾವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಸುನೀಲ್ ಮಾನಪಡೆ ಮಾತನಾಡಿ, “ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್ ಸಿ ಮಹದೇವಪ್ಪ ಅವರು ಈಗಾಗಲೇ ನಾಲ್ಕು ಬಾರಿ ಸಚಿವರಾಗಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ರೂಪಿಸಿ ಜಾರಿ ಮಾಡುವ ಮೂಲಕ ಇಡೀ ರಾಜ್ಯದ ಶೋಷಿತ ಸಮುದಾಯಗಳನ್ನು ಮುನ್ನೆಲೆಗೆ ತರುವ ಮತ್ತು ಅವುಗಳನ್ನು ಅನುಷ್ಠಾನಕ್ಕೆ ತಂದು ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ಯಶಸ್ಸು ಮತ್ತು ಶಕ್ತಿಯನ್ನು ತಂದುಕೊಡುವಂಥಹ ಕೆಲಸ ಮಾಡಿದ್ದಾರೆ” ಎಂದರು.
“ವಿಶೇಷವಾಗಿ ಇಂದು ದಲಿತ ಹಿಂದುಳಿದ ಸಮುದಾಯಗಳನ್ನು ರಾಜ್ಯಾದ್ಯಂತ ಒಗ್ಗೂಡಿಸಿ ಅವರಿಗೆ ಅರಿವು, ಸಾಮಾಜಿಕ ನ್ಯಾಯ ಶೋಷಿತ ಸಮುದಾಯಗಳ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿರುವ ಈ ಸಂದರ್ಭದಲ್ಲಿ ಎಚ್ ಸಿ ಮಹದೇವಪ್ಪ ಅವರನ್ನು ಕಾಂಗ್ರೆಸ್ ಪಕ್ಷದ ರಾಜ್ಯ ಮತ್ತು ಕೇಂದ್ರ ಸಮಿತಿಗಳು ರಾಷ್ಟ್ರದ ರಾಜಕಾರಣಕ್ಕೆ ತೆಗೆದುಕೊಳ್ಳುವ ಮನಸ್ಥಿತಿಯಿಂದ ಹೊರ ಬರಬೇಕು” ಎಂದು ಕಾಂಗ್ರೆಸ್ ವರಿಷ್ಠರಿಗೆ ಒತ್ತಾಯಿಸಿದರು.
“ಈಗಾಗಲೇ ಪಕ್ಷದ ಮೇಲೆ ಕೆಲವು ಅಪಾದನೆಗಳಿವೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುವ ಸಂದರ್ಭ ಒದಗಿ ಬಂದ ಅವಕಾಶವನ್ನು ತಪ್ಪಿಸುವುದಕ್ಕಾಗಿಯೇ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕಳುಹಿಸಲು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಹೇಳಿ ಅವರನ್ನು ರಾಜ್ಯದಿಂದ ಹೊರದಬ್ಬಿದರು ಮತ್ತು ಅದೇ ರೀತಿ ಜಿ ಪರಮೇಶ್ವರ್ ಅವರು 2013ರ ಚುನಾವಣೆಯಲ್ಲಿ ಪಕ್ಷದ ಕೆಲವು ಹಿರಿಯರು ಅವರನ್ನು ಸೋಲಿಸಲು ಜೇಡರ ಬಲೆ ಹೆಣೆದು ಅವರನ್ನು ಸೋಲಿಸಿ ಮುಖ್ಯಮಂತ್ರಿ ಪದವಿಯಿಂದ ಹಿಂದೆ ಸರಿಸಲು ವ್ಯವಸ್ಥಿತವಾಗಿ ಪಿತೂರಿ ನಡೆಸಿರುವುದು ಕಾಂಗ್ರೆಸ್ ಪಕ್ಷದ ಮೇಲಿರುವ ಅಪಾದನೆಯಾಗಿದೆ” ಎಂದರು.
“ಇಂತಹ ಹಲವಾರು ಆಪಾದನೆ ಇದ್ದರೂ ಕೂಡ ಮತ್ತೊಬ್ಬ ಹಿರಿಯ ರಾಜಕೀಯ ಮುತ್ಸದಿ ಮತ್ತು ದಲಿತ, ಶೋಷಿತ ಸಮುದಾಯದಗಳ ಚಿಂತಕ ಎಚ್ ಸಿ ಮಹದೇವಪ್ಪ ಅವರನ್ನೂ ಕೂಡ ಈಗ ರಾಷ್ಟ್ರ ರಾಜಕಾರಣಕ್ಕೆ ಕಳುಹಿಸಿ ಹೊರದಬ್ಬುವ ವ್ಯವಸ್ಥಿತ ಪಿತೂರಿ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿದೆ. ಇಂತಹ ದಲಿತ ವಿರೋಧಿ ರಾಜಕೀಯ ಪಿತೂರಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ” ಎಂದರು.
“ಎಚ್ ಸಿ ಮಹದೇವಪ್ಪ ಅವರನ್ನು ಒಂದು ವೇಳೆ ಸಚಿವ ಸಂಪುಟದಿಂದ ಕೈಬಿಟ್ಟು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಒತ್ತಾಯಿಸಿ, ಸಚಿವ ಸ್ಥಾನದಿಂದ ಕೆಳಗಿಳಿಸಿದರೆ, ಕಾಂಗ್ರೆಸ್ ಪಕ್ಷವು ರಾಜ್ಯದ ಎಲ್ಲ 28 ಕ್ಷೇತ್ರದಲ್ಲಿ ದಲಿತ ಮತ್ತು ಹಿಂದುಳಿದ ವರ್ಗಗಳ ಮತಗಳನ್ನು ತಾವಾಗಿಯೇ ಕಳೆದುಕೊಳ್ಳುವ ಅಥವಾ ಒಡೆದು ಹಾಕುವ ಪ್ರಯತ್ನಕ್ಕೆ ಅವರೇ ಹೊಣೆಗಾರರಾಗುತ್ತಾರೆ. ಈ ದಲಿತ ಮತ್ತು ಹಿಂದುಳಿದ ವರ್ಗಗಳ ಮತಗಳು ಛಿದ್ರಗೊಂಡು, ಪಕ್ಷಕ್ಕೆ ಹಾನಿಯಾದರೆ, ಅದಕ್ಕೆ ರಾಜ್ಯದ ನಾಯಕತ್ವವೇ ಕಾರಣ. ಆದ್ದರಿಂದ ಕಾಂಗ್ರೆಸ್ ಪಕ್ಷದ ಕೆಲವು ಮನುವಾದಿ ಮನಸ್ಥಿತಿಯ ನಾಯಕರ ಕಾರಣದಿಂದ ದಲಿತ ನಾಯಕತ್ವಕ್ಕೆ ಕೊಡಲಿ ಪೆಟ್ಟು ನೀಡುತ್ತಿರುವುದು ಖಂಡನೀಯ. ಈ ಕುತಂತ್ರದ ವಿರುದ್ಧ ರಾಜ್ಯದ್ಯಾಂತ ಎಲ್ಲ ದಲಿತ ಹಿಂದುಳಿದ ಸಮುದಾಯದ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಲಿವೆ” ಎಂದು ಎಚ್ಚರಿಕೆ ನೀಡಿದರು.
“ಎಚ್ ಸಿ ಮಹದೇವಪ್ಪ ಅವರನ್ನು ರಾಜ್ಯ ರಾಜಕಾರಣದಲ್ಲೇ ಉಳಿಸಿಕೊಂಡು ಮಂತ್ರಿಗಳಾಗಿ ಸೇವೆ ಮಾಡಲು ಕಾಂಗ್ರೆಸ್ ಪಕ್ಷದ ವರಿಷ್ಠರುಗಳಾದ ಡಾ. ಮಲ್ಲಿಕಾರ್ಜುನ ಖರ್ಗೆ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಈ ಮೂಲಕ ಒತ್ತಾಯಿಸುತ್ತೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ವಿವಿ ಸಾಗರ ನಾಲೆಗಳಿಗೆ ತುರ್ತಾಗಿ ನೀರು ಹರಿಸಬೇಕು: ಕಸವನಹಳ್ಳಿ ರಮೇಶ್
ಈ ಸಂದರ್ಭದಲ್ಲಿ ಲಕ್ಷ್ಮಿಕಾಂತ ಸಿಂಗೆ, ಸುಭಾಷ ಕೋರೆ, ಭೀಮಶಾ ಖನ್ನಾ, ಕೈಲಾಶ ದೋಣಿ, ರಾಜಕುಮಾರ ಕೋರಳ್ಳಿ, ಸುನೀಲ್ ಮಾನಪಡೆ, ಬಾಬು ಪರಸೋನ್, ಸಿದ್ದಲಿಂಗ ಪಾಳಾ ಸೇರಿದಂತೆ ಇತರರು ಇದ್ದರು.