ಕಲಬುರಗಿ ಜಿಲ್ಲೆಯ ವಾಡಿಯಲ್ಲಿರುವ ಅದಾನಿ ಒಡೆತನದ ವಾಡಿ ಎಸಿಸಿ ಕಾರ್ಖಾನೆಯು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರು, ಸೋಮವಾರ (ಮಾ.4) ಪ್ರತಿಭಟನೆ ನಡೆಸಿದರು.
ಕಾರ್ಖಾನೆಯ ಗೇಟ್ ಮುಂಭಾಗ ಜಮಾಯಿಸಿದ ಕಾರ್ಮಿಕರು, ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ, ಕೆಲಸದ ಅವಧಿ ಬದಲಾವಣೆ, ದುಡಿಸಿಕೊಳ್ಳುತ್ತಿರುವ ಸಮಯವನ್ನು ಹೆಚ್ಚಳ ಮಾಡಿ ಕಾರ್ಮಿಕರ ಶೋಷಣೆ ಮಾಡುತ್ತಿದ್ದಾರೆ. ಊಟ ಮತ್ತು ವಿಶ್ರಾಂತಿಗೂ ಅವಕಾಶ ನೀಡುತ್ತಿಲ್ಲ. ನಮ್ಮನ್ನು ಯಂತ್ರಗಳಂತೆ ದುಡಿಸಿಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಾನಿರತ ಕಾರ್ಮಿಕರು ಆರೋಪಿಸಿದರು.
ಈ ಮೊದಲು ಬೆಳಗ್ಗೆ 8ರಿಂದ ಮಧ್ಯಾಹ್ನ 4ರ ವರೆಗೆ, 8 ಗಂಟೆಗಳ ಕಾಲ ಕೆಲಸದ ಸಮಯ ಇತ್ತು. ಅದರಲ್ಲಿ ಊಟ ಹಾಗೂ ವಿರಾಮಕ್ಕೂ ಕಾಲಾವಕಾಶ ಕೊಡಲಾಗುತ್ತಿತ್ತು. ಈ ಸಮಯಕ್ಕೆ ನಾವೆಲ್ಲಾ ಹೊಂದಿಕೊಂಡಿದ್ದು, ಹೆಚ್ಚುವರಿ ಕೆಲಸಕ್ಕೂ (ಒಟಿ) ಅವಕಾಶವಿತ್ತು. ಈಗ ಬೆಳಿಗ್ಗೆ 9ರಿಂದ ಸಂಜೆ 6ರ ವರೆಗೆ 9 ಗಂಟೆ ನಿರಂತರವಾಗಿ ದುಡಿಸಿಕೊಳ್ಳುತ್ತಿದ್ದಾರೆ. ಊಟ, ವಿಶ್ರಾಂತಿಯ ಸಮಯ ಕಡಿಮೆ ಮಾಡಿ, ಗುಲಾಮರಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಈ ಕೂಡಲೇ ಮೊದಲಿನ ಅವಧಿ ಮುಂದುವರಿಸಬೇಕು. ಪ್ರತಿದಿನ ಕೆಲಸ ನೀಡಬೇಕು ಎಂದು ಕಾರ್ಮಿಕರು ಪ್ರತಿಭಟನೆ ವೇಳೆ ಒತ್ತಾಯ ಮಾಡಿದರು.
ಇದನ್ನು ಓದಿದ್ದೀರಾ? ಫೇಸ್‌ಬುಕ್‌ನಲ್ಲಿ ಫೋಟೋ ಹಾಕಿ ಮಹಿಳೆಯರ ತೇಜೋವಧೆ: ಪುನೀತ್ ಕೆರೆಹಳ್ಳಿ ಹಿಂಬಾಲಕ ಪದ್ದು ಮಹಾರಾಜ್‌ಗೆ ಧರ್ಮದೇಟು
ಅಧಿಕಾರಿಗಳು ಸ್ಥಳಕ್ಕೆ ಬಂದು, ನಮ್ಮ ಮನವಿ ಆಲಿಸಬೇಕು ಎಂದು ಪಟ್ಟು ಹಿಡಿದಿರುವ ಕಾರ್ಮಿಕರು, ಮೊದಲಿನ ಕೆಲಸದ ಅವಧಿ ನಿಗದಿಪಡಿಸುವವರೆಗೂ ಕೆಲಸಕ್ಕೆ ತೆರಳುವುದಿಲ್ಲ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ.
