ಇಬ್ಬರು ಪ್ರಾಪ್ತವಯಸ್ಕರ ನಡುವೆ ಏಳು ವರ್ಷಗಳ ಕಾಲ ಪರಸ್ಪರ ಸಮ್ಮತಿಯಿಂದ ನಡೆದ ದೈಹಿಕ ಸಂಬಂಧವನ್ನು, ನಂತರದ ದಿನಗಳಲ್ಲಿ ವಿವಾಹವಾಗಲು ನಿರಾಕರಿಸಿದರು ಎಂಬ ಒಂದೇ ಕಾರಣಕ್ಕೆ ‘ಅತ್ಯಾಚಾರ’ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಜಾರ್ಖಂಡ್ ಹೈಕೋರ್ಟ್ ಆದೇಶ ನೀಡಿದೆ.
ನ್ಯಾಯಮೂರ್ತಿ ಅನಿಲ್ ಕುಮಾರ್ ಚೌಧರಿ ಅವರಿದ್ದ ಏಕಸದಸ್ಯ ಪೀಠವು, ಅರ್ಜಿದಾರ ಲಾಲು ಮಹತೋ ಅವರ ವಿರುದ್ಧ ಗಿರಿಡಿಹ್ ಜಿಲ್ಲೆಯ ನ್ಯಾಯಾಲಯದಲ್ಲಿದ್ದ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 376(2)(n) ಅಡಿಯಲ್ಲಿನ ಕ್ರಿಮಿನಲ್ ಪ್ರಕ್ರಿಯೆ ಹಾಗೂ ಎಫ್‌ಐಆರ್ (FIR) ಅನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ.
ಇದನ್ನೂ ಓದಿ: ಬಾಲಕಿ ಅತ್ಯಾಚಾರ, ಕೊಲೆ: ಸುವೋ ಮೋಟೋ ದೂರು ದಾಖಲಿಸಿಕೊಂಡ ಜಾರ್ಖಂಡ್ ಹೈಕೋರ್ಟ್
ಪ್ರಕರಣದ ದೂರುದಾರ ಯುವತಿ ಹಾಗೂ ಅರ್ಜಿದಾರರು 2016ರಲ್ಲಿ ಶುಭ ಸಮಾರಂಭವೊಂದರಲ್ಲಿ ಭೇಟಿಯಾಗಿದ್ದರು. ಬಳಿಕ ಅವರಿಬ್ಬರ ನಡುವೆ ಪ್ರೀತಿ ಬೆಳೆದು, ಗಿರಿಡಿಹ್ ಮತ್ತು ರಾಂಚಿಯ ಹೋಟೆಲ್‌ಗಳಲ್ಲಿ ದೈಹಿಕ ಸಂಬಂಧ ಏರ್ಪಟ್ಟಿತ್ತು. ಮದುವೆಯಾಗುವುದಾಗಿ ನಂಬಿಸಿ ತನ್ನನ್ನು ಏಳು ವರ್ಷಗಳ ಕಾಲ ಲೈಂಗಿಕವಾಗಿ ಬಳಸಿಕೊಂಡು, 2023ರಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿ ಮದುವೆಗೆ ನಿರಾಕರಿಸಿದ್ದಾರೆ ಎಂದು ಯುವತಿ ದೂರು ನೀಡಿದ್ದರು. ಪೊಲೀಸರು ಈ ದೂರಿನ ಆಧಾರದ ಮೇಲೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.
ಸುಪ್ರೀಂ ಕೋರ್ಟ್‌ನ ಈ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿದ ಹೈಕೋರ್ಟ್, “ಮದುವೆಯಾಗುವುದಾಗಿ ನೀಡಿದ ಭರವಸೆಯು ಆರಂಭದಲ್ಲೇ ಸುಳ್ಳಾಗಿದ್ದು, ಕೇವಲ ದೈಹಿಕ ಸಂಬಂಧ ಬೆಳೆಸುವ ಉದ್ದೇಶದಿಂದಲೇ ಆ ಭರವಸೆ ನೀಡಿದ್ದರೆ ಮಾತ್ರ ಅದನ್ನು ‘ಸುಳ್ಳು ಭರವಸೆ’ ಎನ್ನಬಹುದು. ಆದರೆ, ನಂತರದ ಪರಿಸ್ಥಿತಿಯಲ್ಲಿ ಭರವಸೆ ಈಡೇರಿಸಲು ಸಾಧ್ಯವಾಗದಿರುವುದನ್ನು ಸುಳ್ಳು ಭರವಸೆ ಎನ್ನಲಾಗುವುದಿಲ್ಲ” ಎಂದು ಸ್ಪಷ್ಟಪಡಿಸಿತು.
ಯುವಕನಿಗೆ ಮೊದಲಿನಿಂದಲೂ ಮದುವೆಯಾಗುವ ಉದ್ದೇಶವಿರಲಿಲ್ಲ ಎಂಬುದಕ್ಕೆ ದೂರಿನಲ್ಲಿ ಯಾವುದೇ ಆಧಾರಗಳಿಲ್ಲ. ಏಳು ವರ್ಷಗಳ ಕಾಲ ಯಾವುದೇ ಪ್ರತಿಭಟನೆಯಿಲ್ಲದೆ ಈ ದೈಹಿಕ ಸಂಬಂಧ ಮುಂದುವರಿದಿದೆ. ಇಬ್ಬರ ನಡುವಿನ ಸಂಬಂಧ ಮುರಿದುಬಿದ್ದ ತಕ್ಷಣ, ಇಷ್ಟು ಸುದೀರ್ಘ ಕಾಲದ ಸಮ್ಮತಿಯ ಸಂಬಂಧವನ್ನು ಅತ್ಯಾಚಾರ ಎಂದು ಕರೆಯಲಾಗುವುದಿಲ್ಲ. ಆದ್ದರಿಂದ ಈ ಪ್ರಕರಣದಲ್ಲಿ ಕ್ರಿಮಿನಲ್ ವಿಚಾರಣೆ ಮುಂದುವರಿಸುವುದು ಕಾನೂನಿನ ದುರುಪಯೋಗವಾಗುತ್ತದೆ ಎಂದು ನ್ಯಾಯಪೀಠ ತೀರ್ಮಾನಿಸಿದೆ.
ಸುಪ್ರೀಂ ಕೋರ್ಟ್ ಈ ಹಿಂದಿನ ತೀರ್ಪುಗಳಲ್ಲಿ ಹೇಳುವುದೇನು?
‘ವಿವಾಹದ ಭರವಸೆ ನೀಡಿ ಲೈಂಗಿಕ ಸಂಬಂಧ ಬೆಳೆಸಿ, ನಂತರ ಮದುವೆಯಾಗಲು ನಿರಾಕರಿಸುವುದು’ ಅತ್ಯಾಚಾರವಾಗುತ್ತದೆಯೇ ಎಂಬ ವಿಷಯದಲ್ಲಿ ಸುಪ್ರೀಂ ಕೋರ್ಟ್ ಹಲವು ಪ್ರಕರಣಗಳಲ್ಲಿ ಕಾನೂನು ಚೌಕಟ್ಟನ್ನು ರೂಪಿಸಿದೆ.
ಇದನ್ನೂ ಓದಿ: ಅತ್ಯಾಚಾರ ಸಂತ್ರಸ್ತರಿಗೆ ‘ಟು ಫಿಂಗರ್ ಟೆಸ್ಟ್’ ಮಾಡುವಂತಿಲ್ಲ: ಜಾರ್ಖಂಡ್ ಹೈಕೋರ್ಟ್
ಈ ಹಿಂದೆ ಸುಪ್ರೀಂ ಕೋರ್ಟ್ ಪ್ರಮೋದ್ ಸೂರ್ಯಭಾನ್ ಪವಾರ್ ವಿರುದ್ಧ ಮಹಾರಾಷ್ಟ್ರ ಸರ್ಕಾರ (2019) ಪ್ರಕರಣದಲ್ಲಿ ‘ಸುಳ್ಳು ಭರವಸೆ’ಮತ್ತು ‘ಭರವಸೆಯ ಉಲ್ಲಂಘನೆ’ ನಡುವಿನ ವ್ಯತ್ಯಾಸವನ್ನು ಸ್ಪಷ್ಟಪಡಿಸಿತ್ತು. ಆರಂಭದಿಂದಲೇ ಮದುವೆಯಾಗುವ ಯಾವುದೇ ಉದ್ದೇಶವಿಲ್ಲದೆ, ಕೇವಲ ದೈಹಿಕ ಸಂಬಂಧ ಬೆಳೆಸುವ ವಂಚನೆಯ ದುರುದ್ದೇಶದಿಂದ ಮದುವೆಯ ಭರವಸೆ ನೀಡಿದ್ದರೆ ಮಾತ್ರ ಅದನ್ನು ‘ಸುಳ್ಳು ಭರವಸೆ’ (ವಂಚನೆ) ಎಂದು ಪರಿಗಣಿಸಿ ಅತ್ಯಾಚಾರ (IPC 376 / IPC 90) ಎಂದು ಪರಿಗಣಿಸಬಹುದು.
ಆದರೆ, ಸಂಬಂಧದ ಆರಂಭದಲ್ಲಿ ಮದುವೆಯಾಗುವ ಉದ್ದೇಶವಿದ್ದು, ಕಾಲಕ್ರಮೇಣ ಕುಟುಂಬದ ವಿರೋಧ, ಭಿನ್ನಾಭಿಪ್ರಾಯ ಅಥವಾ ಬದಲಾದ ಸನ್ನಿವೇಶಗಳಿಂದ ಮದುವೆ ಸಾಧ್ಯವಾಗದಿದ್ದರೆ ಅದನ್ನು ‘ಭರವಸೆಯ ಉಲ್ಲಂಘನೆ’ ಎನ್ನಲಾಗುತ್ತದೆ. ಇದನ್ನು ಅತ್ಯಾಚಾರ ಎಂದು ಪರಿಗಣಿಸಲಾಗುವುದಿಲ್ಲ. ಪ್ರಾಪ್ತವಯಸ್ಕರ ನಡುವಿನ ದೈಹಿಕ ಸಂಬಂಧವು ಯಾವುದೇ ಪ್ರತಿಭಟನೆಯಿಲ್ಲದೆ ಸುದೀರ್ಘ ಕಾಲ ಮುಂದುವರಿದಿದ್ದರೆ, ಅದನ್ನು ‘ಪರಸ್ಪರ ಸಮ್ಮತಿಯ ಸಂಬಂಧ’ ಎಂದು ನ್ಯಾಯಾಲಯ ಪರಿಗಣಿಸುತ್ತದೆ.





