ಕಲಬುರಗಿ ಜಿಲ್ಲೆಯ ಕಬ್ಬು ಬೆಳೆಗಾರರಿಂದ ಕಬ್ಬು ಖರೀದಿ ಮಾಡಿರುವ ಸಕ್ಕರೆ ಕಾರ್ಖಾನೆಗಳು 5 ತಿಂಗಳು ಕಳೆದರು ಇನ್ನೂ ರೈತರಿಗೆ ಬಾಕಿ ಹಣ ಪಾವತಿಸದ ಹಿನ್ನೆಲೆ ಕರ್ನಾಟಕ ರೈತ ಪ್ರಾಂತ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯ, ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶಾನಲಯ ಸಚಿವ ಶಿವಾನಂದ ಪಾಟೀಲ ಹಾಗೂ ಕಲಬುರಗಿಯ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ.
ಸಕ್ಕರೆ ಕಾರ್ಖಾನೆಗಳು ಸುಮಾರು 112 ಕೋಟಿ ರೂ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟನೆ ನಡೆಸುವುದಾಗಿ ರೈತಸಂಘದ ಪ್ರಕಟಣೆ ತಿಳಿಸಿದೆ.
“ಸಿಹಿ ಬೆಳೆದು ಕಹಿ ಉಣ್ಣುವ ದುಃಸ್ಥಿತಿ ಕಬ್ಬು ಬೆಳೆಗಾರರಿಗೆ ಎದುರಾಗಿದೆ, ಮಂಡಿ ಉದ್ದ ಕಬ್ಬು ಎದೆಯುದ್ದ ಸಾಲ ಎಂಬ ನಾಣ್ಣುಡಿಗೆ ಕಬ್ಬು ಬೆಳೆಗಾರರ ಬದುಕು ನಿದರ್ಶನವಾಗಿದೆ, ಕೃಷಿ ಎಂಬುದು ಹಿರಿಮೆಯ ಕಾಯಕ ಎಂಬ ಸ್ಥಿತಿ ಮಾಯವಾಗಿ ಕೃಷಿ ಶಾಪವಾಗಿ ಪರಿಣಮಿಸಿದೆ, ರೈತರ ಆತ್ಮಹತ್ಯೆ ಹೆಚುತ್ತಿದೆ. ಇತ್ತ ಕೃಷಿಯನ್ನು ನೆಚ್ಚಿ ಬದುಕು ಕಟ್ಟಿಕೊಳ್ಳಲು ಹೊರಟ ಯುವ ರೈತರಿಗೆ ಹೆಣ್ಣು ಕೊಡಲು ಯಾರೂ ಮುಂದಾಗರು ಕಾರಣ ರೈತರನ್ನು ಮದವೆಯಾದರೆ ಜೀವನ ಭದ್ರತೆ ಸಿಗದೆಂಬ ಆತಂಕ. ಹೀಗಾಗಿಯೇ ನಾವು ನಮ್ಮ ಬೆವರಿನ ಪಾಲನ್ನು , ಬಂಡವಾಳಕ್ಕೆ ತಕ್ಕ ಪ್ರತಿಫಲವನ್ನು ನಿರೀಕ್ಷೆ ಮಾಡುತ್ತಿದ್ದೇವೆ”
ಇದನ್ನೂ ಓದಿ>ಕಲಬುರಗಿ | “ಮಹಾತ್ಮ ಫುಲೆ ಕ್ರಾಂತಿಜ್ಯೋತಿ ಪ್ರಶಸ್ತಿಗೆ” ಎ ಬಿ ಹೊಸಮನಿ ಆಯ್ಕೆ
“ಕಬ್ಬು ಸರಬರಾಜು ಮಾಡಿದ 14 ದಿನದೊಳಗೆ ಹಣ ಪಾವತಿ ಮಾಡುವಂತೆ ಕ್ರಮ ಕೈಗೊಳ್ಳಬೇಕು. ಹಣ ಪಾವತಿ ಮಾಡದ ಕಾರ್ಖಾನೆಯ ಆಡಳಿತ ಮಂಡಳಿಯ ಮೇಲೆ ಕಾನೂನು ಕ್ರಮ ಜರುಗಿಸಿ, ನಿಯಮದ ಪ್ರಕಾರ 16% ಬಡ್ಡಿಯನ್ನು ಬಾಕಿ ಮೊತ್ತದ ಜೊತೆಗೆ ಸೇರಿಸಿ ರೈತರಿಗೆ ಕೊಡುವಂತಾಗಬೇಕು” ಎಂಬ ಬೇಡಿಕೆ ಇಟ್ಟಿದ್ದಾರೆ.

ಕಾರ್ಖಾನೆಗೆ ಒಯ್ದ ಕಬ್ಬಿನ ಪ್ರಮಾಣ ಹಾಗೂ ಕಾರ್ಖಾನೆಯಲ್ಲಿ ಉತ್ಪಾದನೆಯಾದ ಸಕ್ಕರೆಯ ಪ್ರಮಾಣಕ್ಕೂ ತಾಳೆಯಾಗುತ್ತಿಲ್ಲ. ಹಾಗಾಗಿ ತಜ್ಞರ ತಂಡ ರಚಿಸಬೇಕು ಎಂದು ಮನವಿ ಮಾಡಿದ್ದಾರೆ. ಸಕ್ಕರೆ ಕಾರ್ಖಾನೆಗಳು 235 ಕ್ವಿಂಟಲ್ ಕಬ್ಬು ಕಟಾವು ಮಾಡಿಸಿದೆ. 1108 ಕೊಟಿ 46 ಲಕ್ಷ ಪಾವತಿ ಮಾಡಲಾಗಿದೆ. ಕೊಡಬೇಕಾದ ಬಾಕಿ ಮೊತ್ತ 102 ಕೊಟಿ 83 ಲಕ್ಷವಿದ್ದು ಈ ಮೊತ್ತಕ್ಕೆ ಬಡ್ಡಿ ಸೇರಿಸಿ ಬಾಕಿ ಹಣ ಕೊಡಿಸಬೇಕು ಎಂದು ಬೇಡಿಕೆ ಇಟ್ಟಿದೆ.
ಈ ಸಂದರ್ಭದಲ್ಲಿ ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷರಾದ ಶರಣಬಸಪ್ಪ ಮಮಶೆಟ್ಟಿ ಜೊತೆಗೆ ಸಂತ್ರಸ್ಥ ಕಬ್ಬು ಬೆಳೆಗಾರರಾದ ಚಂದ್ರಪ್ಪ ಪೂಜಾರಿ, ದೇವೇಂದ್ರ ಕಟ್ಟಿಮನಿ, ಸಾಯಬಣ್ಣ, ರೇವಣಸಿದ್ದಪ್ಪ ಸೇರಿದಂತೆ ಇನ್ನಿತರರಿದ್ದರು.





