ಬೀದರ್ ತಾಲೂಕಿನ ಜನವಾಡ ಸಮೀಪದ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ 2012ರಲ್ಲಿ ಆರಂಭಿಸಲಾದ ಕನ್ನಡ ಕೃಷಿ ಡಿಪ್ಲೋಮಾ ಕಾಲೇಜು ಗ್ರಾಮೀಣ ಭಾಗದ ರೈತರ, ಕೃಷಿಕರ ಮಕ್ಕಳಿಗೆ ಸ್ವಯಂ ಉದ್ಯೋಮದಾರರಾಗಿ ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳುವುದರ ಜತೆಗೆ, ಉದ್ಯೋಗ ಗಿಟ್ಟಿಸಿಕೊಳ್ಳಲು ತುಂಬಾ ಸಹಕಾರಿಯಾಗಿದೆ.
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಅಧೀನದಲ್ಲಿ ಬರುವ ಈ ಕೃಷಿ ಡಿಪ್ಲೋಮಾ ಕಾಲೇಜಿನಲ್ಲಿ 2025-26 ನೇ ಸಾಲಿನ ಡಿಪ್ಲೋಮಾ (ಕೃಷಿ) ಕೋರ್ಸ್ಗೆ ಪ್ರವೇಶ ಪ್ರಕ್ರಿಯೆ ಈಗ ಆರಂಭಗೊಂಡಿದೆ.
ಬೀದರ್-ಔರಾದ್ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಜನವಾಡ ಸಮೀಪ ಒಟ್ಟು 36 ಎಕರೆ ವಿಸ್ತೀರ್ಣದಲ್ಲಿ ಕೃಷಿ ಸಂಶೋಧನಾ ಕೇಂದ್ರ ಇದೆ. ಇಲ್ಲಿ ಬೀಜೋತ್ಪಾದನೆ ಹಾಗೂ ಕೃಷಿ ಸಂಶೋಧನೆ ನಡೆಸಲಾಗುತ್ತದೆ. ಇದೇ ಆವರಣದಲ್ಲಿ ಸುಸಜ್ಜಿತ ಕಟ್ಟಡದಲ್ಲಿ 2012-13ರಲ್ಲಿ ಕೃಷಿ ಡಿಪ್ಲೋಮಾ ಕೋರ್ಸ್ ಕಾಲೇಜು ಪ್ರಾರಂಭಿಸಲಾಯಿತು. ಮೊದಲು ಪ್ರತಿ ವರ್ಷ ಒಂದು ಬ್ಯಾಚ್ಗೆ 50 ರಿಂದ 70 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿತ್ತು. ಪ್ರಸಕ್ತ ವರ್ಷ 35 ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಕೃಷಿ ಕಾರ್ಮಿಕರ ಮಕ್ಕಳಿಗೆ ಶೇ. 50 ರಷ್ಟು ಸೀಟು :
ಎರಡು ವರ್ಷಗಳ ಈ ಕೋರ್ಸ್ಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ. 2025ರ ಜುಲೈ 28ಕ್ಕೆ ಅಭ್ಯರ್ಥಿಗಳು 19 ವರ್ಷ ಮೀರದ ಎಸ್ಎಸ್ಎಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ ಶೇ.45 ರಷ್ಟು (ಪಜಾ/ಪಪಂ/ಪ್ರವರ್ಗ-1 ಶೇ.40ರಷ್ಟು) ಅಂಕಗಳು ಪಡೆದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ರೈತರ ಮತ್ತು ಕೃಷಿ ಕಾರ್ಮಿಕರ ಮಕ್ಕಳಿಗೆ ಶೇ.50ರಷ್ಟು ಸೀಟುಗಳನ್ನು ಮೀಸಲಿಡಲಾಗಿದೆ ಎಂದು ಕಾಲೇಜಿನ ಮುಖ್ಯಸ್ಥರು ಈದಿನಕ್ಕೆ ಮಾಹಿತಿ ನೀಡಿದ್ದಾರೆ.

ಅರ್ಜಿ ಸಲ್ಲಿಸುವುದು ಹೇಗೆ :
ಡಿಪ್ಲೋಮಾ (ಕೃಷಿ) ಕೋರ್ಸ್ಗೆ ಪ್ರವೇಶಕ್ಕೆ ಕುರಿತಂತೆ ಅರ್ಜಿ ನಮೂನೆಯನ್ನು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರಿನ ವೆಬ್ಸೈಟ್ www.uasraichur.karnataka.gov.in ನಲ್ಲಿ 2025ರ ಜುಲೈ 28 ತನಕ ಡೌನ್ಲೋಡ್ ಮಾಡಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಡಿ.ಡಿ. ಮತ್ತು ಎಲ್ಲ ಅವಶ್ಯಕ ದಾಖಲೆಗಳೊಂದಿಗೆ ರಾಯಚೂರು ಕೃಷಿ ವಿವಿ ವಿಳಾಸಕ್ಕೆ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಜುಲೈ 28ರಂದು ಕೊನೆಯ ದಿನವಾಗಿದೆ.
ಅರ್ಹ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ರೋಸ್ಟರ್ ಪದ್ಧತಿಯನ್ನು ಆಧರಿಸಿ ಸೀಟುಗಳ ಹಂಚಿಕೆಯನ್ನು ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ವೆಬ್ಸೈಟ್ www.uasraichur.karnataka.gov.in ನಲ್ಲಿ ಪ್ರಕಟಿಸಲಾಗುತ್ತದೆ. ನಂತರ ಪ್ರವೇಶಕ್ಕೆ ಆಯ್ಕೆಯಾದ ಅಭ್ಯರ್ಥಿಗಳು ಸಂಬಂಧಪಟ್ಟ ಕೇಂದ್ರದಲ್ಲಿ ಮೂಲ ದಾಖಲಾತಿಗಳನ್ನು ಪರಿಶೀಲನೆ ಮಾಡಿಸುವ ನಿಗದಿತ ಶುಲ್ಕವನ್ನು ಪಾವತಿಸಿ ಪ್ರವೇಶ ಪಡೆಯತಕ್ಕದ್ದು ಎಂದು ರಾಯಚೂರು ಕೃಷಿ ವಿವಿ ಕುಲಸಚಿವರು ಆದೇಶದಲ್ಲಿ ತಿಳಿಸಿದ್ದಾರೆ.
ಡಿಪ್ಲೋಮಾ ಕೋರ್ಸ್ನ ಅನುಕೂಲಗಳೇನು :
ರೈತರ ಮಕ್ಕಳಿಗೆ ಅನುಕೂಲ ಆಗಲೆಂಬ ಉದ್ದೇಶದಿಂದ 2012-13ರಲ್ಲಿ ರಾಯಚೂರು ಕೃಷಿ ವಿವಿ ಅಡಿಯಲ್ಲಿ ಜನವಾಡ ಸಮೀಪದ ಕೃಷಿ ಸಂಶೋಧನಾ ಕೇಂದ್ರ ಆವರಣದಲ್ಲಿ ಕೃಷಿ ಡಿಪ್ಲೋಮಾ ಕೋರ್ಸ್ ಮೊದಲ ಬಾರಿಗೆ ಶುರುವಾಯಿತು. ಅಂದಿನಿಂದ ಇಲ್ಲಿಯವರೆಗೆ ಕೋರ್ಸ್ಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗಿದೆ. 2012 ರಿಂದ ಇಲ್ಲಿಯವರೆಗೆ 346ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಆಸಕ್ತಿಯಿಂದ ಕಲಿತಿರುವ ವಿದ್ಯಾರ್ಥಿಗಳು ವಿವಿಧ ಖಾಸಗಿ ಕಂಪನಿಗಳಲ್ಲಿ ಸ್ವಂತ ಉದ್ಯೋಗ ಗಿಟ್ಟಿಸಿಕೊಳ್ಳುವುದರ ಜತೆಗೆ ಪೋಷಕರಿಗೆ ಕೃಷಿಯಲ್ಲಿ ನೆರವಾಗುತ್ತಿದ್ದಾರೆ. ಕಲಿತ ವಿಷಯವನ್ನು ಕೃಷಿಯಲ್ಲಿಯೂ ಅಳವಡಿಸಿಕೊಂಡಿದ್ದಾರೆ.

ಕೃಷಿ ಡಿಪ್ಲೋಮಾ ಕೋರ್ಸ್ ಮುಗಿಸಿದ ವಿದ್ಯಾರ್ಥಿಗಳು ಕೃಷಿಯಲ್ಲಿ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಉನ್ನತ ಹುದ್ದೆಗಳಿಗೆ ತೆರಳಲು ಸಹಾಯಕವಾಗುತ್ತದೆ ಎಂಬ ಆಶಾಭಾವನೆಯನ್ನು ಈ ಭಾಗದ ರೈತರು ಹೊಂದಿದ್ದಾರೆ. ಎರಡು ವರ್ಷದ ಈ ಕೋರ್ಸ್ ಮುಗಿಸಿದ ನಂತರ ಬಿಎಸ್ಸಿ (ಕೃಷಿ) ಬಯಸುವ ವಿದ್ಯಾರ್ಥಿಗಳಿಗೆ ಶೇ.5ರಷ್ಟು ಮೀಸಲಾತಿ ಇದೆ. ಬೀಜ ಮತ್ತು ಗೊಬ್ಬರ ಅಂಗಡಿ ತೆರೆಯಲು ಪರವಾನಿಗೆ ಪಡೆಯಲು ಸಹಕಾರ. ಗುತ್ತಿಗೆ ಆಧಾರದಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮ, ಬೀಜ ಖರೀದಿ ಕೇಂದ್ರ, ಖಾಸಗಿ ಕಂಪನಿ, ಬೀಜ ವಿತರಣಾ ಕೇಂದ್ರ ಸೇರಿದಂತೆ ಕೃಷಿ ವಿವಿಯಲ್ಲಿ ಕ್ಷೇತ್ರ ಸಹಾಯಕ ಹುದ್ದೆ ಪಡೆಯಬಹುದು.
ಬಾಲಕರಿಗೆ ಹಾಸ್ಟೆಲ್ ಸೌಲಭ್ಯ :
ಅಂದಾಜು 1 ಎಕರೆ ಪ್ರದೇಶದಲ್ಲಿರುವ ಕಾಲೇಜು ಕಟ್ಟಡದಲ್ಲಿ 4 ತರಗತಿ ಕೋಣೆ, ಪ್ರಯೋಗಾಲಯ, ಎರಡು ವಿಶೇಷ ಬೋಧನಾ ಕೊಠಡಿ, ಗ್ರಂಥಾಲಯ ಸೇರಿದಂತೆ ಮೂಲ ಸೌಕರ್ಯ ಹೊಂದಿದೆ. ಬಾಲಕಿಯರಿಗೆ ವಸತಿ ನಿಲಯ ಕಟ್ಟಡ ಆಗುವ ನಿರೀಕ್ಷೆಯಿದೆ. ಇನ್ನು ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಬಾಲಕರಿಗೆ ವಸತಿ ನಿಲಯ ಸೌಲಭ್ಯ ವ್ಯವಸ್ಥೆ ಕೂಡ ಇದೆ. ವಿಶ್ವವಿದ್ಯಾಲಯ ಅಧೀನದಲ್ಲಿನ ಕಾಲೇಜುಗಳ ಸಂಶೋಧಕರು, ಪ್ರಾಧ್ಯಾಪಕರು ಆಗಮಿಸಿ ಇಲ್ಲಿನ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ತೆಗೆದುಕೊಳ್ಳುತ್ತಾರೆ. ಪೂರ್ಣ ಪ್ರಮಾಣದಲ್ಲಿ ಕಾಯಂ ಇಲ್ಲದ ಕಾರಣಕ್ಕೆ ವಸತಿ ನಿಲಯ, ಕಾಲೇಜಿನಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಯನ್ನು ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆʼ ಎಂದು ಕಾಲೇಜಿನ ಸಂಯೋಜಕ ಡಾ.ಆರ್.ಎಲ್.ಜಾಧವ್ ಹೇಳುತ್ತಾರೆ.

ʼಕಾಲೇಜು ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ವಿವಿಧ ಬೆಳೆಗಳನ್ನು ಬೆಳೆಯಲು ಸಹಕಾರಿಯಾಗುವ ಉದ್ದೇಶದಿಂದ ಕೃಷಿ ಜಮೀನು ಸಹ ಇದೆ. ಕೃಷಿ ಡಿಪ್ಲೋಮಾ ಕೋರ್ಸ್ಗಳಲ್ಲಿ ಒಟ್ಟು ನಾಲ್ಕು ಸೆಮಿಸ್ಟರ್ಗಳಿದ್ದು, ಒಂದು ಸೆಮಿಸ್ಟರ್ಗೆ 6 ರಿಂದ7 ವಿಷಯಗಳಿರುತ್ತವೆ. ತರಗತಿಯಲ್ಲಿ ಪಠ್ಯಕ್ರಮ ಬೋಧನೆ ಜತೆಗೆ ಪ್ರಾಯೋಗಿಕಗಳು, ಪ್ರಾತ್ಯಕ್ಷಿಕೆ, ಕ್ಷೇತ್ರ ವೀಕ್ಷಣೆ ಸೇರಿದಂತೆ ಹಲವು ವಿಧದ ಜ್ಞಾನಾರ್ಜನೆ ಮಾಡಿಸಲಾಗುತ್ತದೆʼ ಎಂದರು.
ಕಲ್ಯಾಣ ಕರ್ನಾಟಕದ ಏಕೈಕ ಕೃಷಿ ಡಿಪ್ಲೋಮಾ ಕಾಲೇಜು :
ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಕೃಷಿ ವಿವಿ ವ್ಯಾಪ್ತಿಯ ನಾಲ್ಕು ಡಿಪ್ಲೊಮಾ ಕಾಲೇಜುಗಳಿಗೆ ತಡೆಹಿಡಿಯಲಾಗಿತ್ತು. ಕೃಷಿ ಡಿಪ್ಲೊಮಾ ಕೋರ್ಸ್ಗಳ ಪುನಾರಂಭಕ್ಕೆ ವಿದ್ಯಾರ್ಥಿಗಳು ಬೇಡಿಕೆ ಸಲ್ಲಿಸಿದ ಹಿನ್ನೆಲೆಯಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ನಾಲ್ಕು ಕಾಲೇಜುಗಳಲ್ಲಿ ಪ್ರವೇಶಾತಿ ಪ್ರಾರಂಭಕ್ಕೆ ಪುನ: ಅವಕಾಶ ಮಾಡಿಕೊಟ್ಟಿದ್ದಾರೆ.
ಈ ಹಿಂದೆ ಸ್ಥಗಿತಗೊಂಡ ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯ ವ್ಯಾಪ್ತಿಯ ಮಂಡ್ಯ ವಿ.ಸಿ.ಫಾರ್ಮ್, ಶಿವಮೊಗ್ಗ ಕೃಷಿ ವಿ.ವಿ ವ್ಯಾಪ್ತಿಯ ಉಡುಪಿ ಜಿಲ್ಲೆಯ ಬ್ರಹ್ಮಾವರ ಕಾಲೇಜು, ಧಾರವಾಡ ಕೃಷಿ ವಿ.ವಿ ವ್ಯಾಪ್ತಿಯ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಕಾಲೇಜು ಮತ್ತು ರಾಯಚೂರು ಕೃಷಿ ವಿ.ವಿ ವ್ಯಾಪ್ತಿಯ ಬೀದರ್ ಕೃಷಿ ಡಿಪ್ಲೊಮಾ ಕಾಲೇಜುಗಳು ಪುನರಾರಂಭಗೊಂಡಿವೆ.
ಇದನ್ನೂ ಓದಿ : ಪ್ರಭುರಾವ ಕಂಬಳಿವಾಲೆ, ಜಯದೇವಿ ತಾಯಿ ಲಿಗಾಡೆ ಪ್ರತಿಷ್ಠಾನ ರಚನೆ ನನೆಗುದಿಗೆ : ಬೇಕಿದೆ ಇಚ್ಚಾಶಕ್ತಿ!
ರಾಯಚೂರು ಕೃಷಿ ವಿಶ್ವವಿದ್ಯಾಲಯ ಅಧೀನದಲ್ಲಿ ಈ ಹಿಂದೆ ಬಳ್ಳಾರಿ ಹಾಗೂ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಭೀಮರಾಯನಗುಡಿ ಹಾಗೂ ಬೀದರ್ ತಾಲ್ಲೂಕಿನ ಜನವಾಡ ಸಮೀಪದ ಕೃಷಿ ಸಂಶೋಧನಾ ಕೇಂದ್ರದಲ್ಲಿನ ಕಾಲೇಜು ಸೇರಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಟ್ಟು ಮೂರು ಕಾಲೇಜುಗಳಿದ್ದವು. ಬಳ್ಳಾರಿ ಮತ್ತು ಭೀಮರಾಯನಗುಡಿಯಲ್ಲಿನ ಕಾಲೇಜು ಸರ್ಕಾರ ಸ್ಥಗಿತಗೊಳಿಸಿದೆ. ಸದ್ಯ ಬೀದರ್ ಜಿಲ್ಲೆಯ ಜನವಾಡ ಸಮೀಪದಲ್ಲಿರುವ ಕೃಷಿ ಡಿಪ್ಲೋಮಾ ಕಾಲೇಜು ಮಾತ್ರ ಕಾರ್ಯನಿರ್ವಹಿಸುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಏಕೈಕ ಕೃಷಿ ಡಿಪ್ಲೋಮಾ ಕಾಲೇಜು ಇದಾಗಿದೆ.
ಕೃಷಿ ಡಿಪ್ಲೋಮಾ ಕೋರ್ಸ್ ಕುರಿತು ಹೆಚ್ಚಿನ ಮಾಹಿತಿಗಾಗಿ ಕಾಲೇಜು ಸಂಯೋಜಕರಾದ ಡಾ.ಆರ್.ಎಲ್.ಜಾಧವ (9972146214) ಕಾಂಬಳೆ ರಾಮದಾಸ (8892589036) ಅವರನ್ನು ಸಂಪರ್ಕಿಸಬಹುದು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.