ರಾಜ್ಯದ ಏಕೈಕ ಮುಸ್ಲಿಂ ಶಾಸಕಿ ಕನೀಜ್ ಫಾತಿಮಾ; ಮನೆಯೊಡತಿ ಜನನಾಯಕಿಯಾಗಿದ್ದೇಗೆ?

Date:

ಪ್ರಸ್ತುತ ಸನ್ನಿವೇಶದಲ್ಲಿ ಒಬ್ಬ ಹಿಜಾಬ್ ಧರಿಸಿದ ಮುಸ್ಲಿಂ ಮಹಿಳೆ ಭಾರತದ ಚುನಾವಣಾ ರಾಜಕೀಯದಲ್ಲಿ ಗುರುತಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಇಂತಹ ದುರಿತ ಕಾಲದಲ್ಲಿಯೂ ರಾಜಕಾರಣ ಪ್ರವೇಶಿಸಿ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ ಕನೀಜ್ ಫಾತಿಮಾ.

ಕರ್ನಾಟಕದ ಮುಸ್ಲಿಂ ಮಹಿಳೆಯರ ಪ್ರತಿನಿಧಿಯಾಗಿ ಈ ಬಾರಿ ವಿಧಾನಸೌಧದ ಮೆಟ್ಟಿಲೇರಿರುವ ಏಕೈಕ ಮುಸ್ಲಿಂ ಮಹಿಳೆ ಕನೀಜ್ ಫಾತಿಮಾ. ಅವರು 2018ರಲ್ಲಿಯೂ ವಿಧಾನಸಭೆಯಲ್ಲಿದ್ದರು. ಆದರೆ, ಅವರು ತಾವು ಪ್ರತಿನಿಧಿಸುವ ಕ್ಷೇತ್ರದ ಜನರ ಹೊರತಾಗಿ, ಹೆಚ್ಚಿನವರಿಗೆ ಪರಿಚಿತರಾಗಿರಲಿಲ್ಲ. ಅವರನ್ನು ಕ್ಷೇತ್ರದಾಚೆಗಿನ ಹೆಚ್ಚಿನ ಜನರಿಗೆ ಪರಿಚಯ ಮಾಡಿಸಿದ್ದು, ಸಿಎಎ ವಿರೋಧಿ ಹೋರಾಟ.

ಕನೀಜ್ ಫಾತಿಮಾ ಅವರು ಗುಲ್ಬರ್ಗ ಉತ್ತರ ಕ್ಷೇತ್ರದ ಶಾಸಕಿ. ಅವರ ಪತಿ ಖಮರುಲ್ ಇಸ್ಲಾಂ ಅವರು, ಇದೇ ಕ್ಷೇತ್ರದಿಂದ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಮಾತ್ರವಲ್ಲದೆ, ಎರಡು ಬಾರಿ ಸಚಿವರೂ ಆಗಿದ್ದರು. 2017ರಲ್ಲಿ ಖಮರುಲ್ ಇಸ್ಲಾಂ ಅವರು ನಿಧನರಾದ ಬಳಿಕ, ಫಾತಿಮಾ ರಾಜಕೀಯ ಪ್ರವೇಶಿಸಿದರು.

2018ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ದಿಸುವಂತೆ ಕಾಂಗ್ರೆಸ್‌ ನಾಯಕರು ಕನೀಜ್ ಫಾತಿಮಾರನ್ನು ಕೇಳಿದ್ದರು. ಆದರೆ, ಈ ಪ್ರಸ್ತಾಪವು ಫಾತಿಮಾರಲ್ಲಿ ದಿಗ್ಭ್ರಮೆ ಮೂಡಿಸಿತ್ತು. ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದರು. ಆದರೆ, ಪಟ್ಟು ಹಿಡಿದ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಹಾಗೂ ಡಾ. ಜಿ ಪರಮೇಶ್ವರ್‌. ಫಾತಿಮಾ ಅವರನ್ನು ಸ್ಪರ್ಧೆಗೆ ಒಪ್ಪಿಸಿ ಕಣಕ್ಕಿಳಿಸಿದ್ದರು.

ಪ್ರಸ್ತುತ ಸನ್ನಿವೇಶದಲ್ಲಿ ಹಿಜಾಬ್ ಧರಿಸಿದ ಒಬ್ಬ ಮುಸ್ಲಿಂ ಮಹಿಳೆ ಭಾರತದ ಚುನಾವಣಾ ರಾಜಕೀಯದಲ್ಲಿ ಗುರುತಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೂ, ಒಲ್ಲದ ಮನಸ್ಸಿನಿಂದ ಹಿಂಜರಿಕೆಯಿಂದಲೇ ಫಾತಿಮಾ ಚುನಾವಣಾ ಕಣಕ್ಕಿಳಿದಿದ್ದರು. ಕ್ಷೇತ್ರದಲ್ಲಿ ಮೂರು ದಶಕಗಳ ತಮ್ಮ ಪತಿಯ ವರ್ಚಸ್ಸು, ಕಾಂಗ್ರೆಸ್‌ ನಾಯಕರ ಬೆಂಬಲವು ಅವರನ್ನು ವಿಧಾನಸಭೆಗೆ ಕಳಿಸಿತು.

ಐದು ವರ್ಷಗಳ ನಂತರ, ಇತ್ತೀಚೆಗೆ ನಡೆದ 2023ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಅವರು ತೀವ್ರ ಸ್ಪರ್ಧೆಯನ್ನು ಎದುರಿಸಿದರು. ಅವರು ಸ್ಪರ್ಧಿಸಿದ್ದ ಗುಲ್ಬರ್ಗ ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಭಾರೀ ಪ್ರಚಾರಗಳನ್ನು ನಡೆಸಿತ್ತು. ಮಾತ್ರವಲ್ಲದೆ, ಜೆಡಿಎಸ್‌, ಓವೈಸಿ ಅವರ ಎಐಎಂಐಎಂ ಅಭ್ಯರ್ಥಿ ಸೇರಿದಂತೆ ಒಂಬತ್ತು ಮುಸ್ಲಿಂ ಅಭ್ಯರ್ಥಿಗಳು ಮತ್ತು ಒಬ್ಬರು ಪಕ್ಷೇತರ ಅಭ್ಯರ್ಥಿ ಫಾತಿಮಾ ವಿರುದ್ಧ ಸ್ಪರ್ಧಿಸಿದ್ದರು.

ಈ ತೀವ್ರ ಪೈಪೋಟಿಯ ಹೋರಾಟದಲ್ಲಿಯೂ ಫಾತಿಮಾ ಅವರು 3,000 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು. ಅಲ್ಲದೆ, ಬಿಜೆಪಿಯ ಲಿಂಗಾಯತ ಅಭ್ಯರ್ಥಿ ಚಂದ್ರಕಾಂತ್ ಪಾಟೀಲ್ ಅವರನ್ನು ಸೋಲಿಸುವಲ್ಲಿ ಯಶಸ್ವಿಯಾದರು. ಆ ಮೂಲಕ ಎರಡನೇ ಬಾರಿಗೆ ಫಾತಿಮಾ ವಿಧಾನಸಭೆ ಪ್ರವೇಶಿಸಿದ್ದಾರೆ.

“ಗಮನಾರ್ಹ ಮುಸ್ಲಿಂ ಜನಸಂಖ್ಯೆ ಇರುವ ಕ್ಷೇತ್ರದಲ್ಲಿ ಹೆಚ್ಚು ಮುಸ್ಲಿಂ ಅಭ್ಯರ್ಥಿಗಳು ಸ್ಪರ್ಧಿಸಿದಾಗ, ಗೆಲುವು ಕಠಿಣವಾಗಿರುತ್ತದೆ. ಬಿಜೆಪಿ ಕೂಡ ಇಲ್ಲಿ ಭಾರೀ ಪ್ರಚಾರ ನಡೆಸಿತ್ತು. ವಿಶೇಷವಾಗಿ ಹಿಜಾಬ್ ನಿಷೇಧದ ವಿಷಯದಲ್ಲಿ ನಾನು ಎಷ್ಟು ದನಿಯೆತ್ತಿದ್ದೇನೆ ಎಂಬುದನ್ನು ಅವರು ಗಮನಿಸಿದ್ದರು. ಹಾಗಾಗಿ, ಮತ ಧ್ರುವೀಕರಣ ಸಾಧ್ಯವೆಂದು ಅವರು ಭಾವಿಸಿದ್ದರು. ಆದರೆ, ಅದು ಹಾಗಾಗಲಿಲ್ಲ. ಕ್ಷೇತ್ರದ ಜನ ನನ್ನ ಕೈಹಿಡಿದರು” ಎಂದು ಚುನಾವಣಾ ಫಲಿತಾಂಶ ಹೊರಬಿದ್ದಾಗ ಫಾತಿಮಾ ಹೇಳಿದ್ದರು.

ಫಾತಿಮಾ ಅವರ ಪತಿ ರಾಜಕೀಯದಲ್ಲಿ ಸಕ್ರಿಯರಾಗಿದ್ದಾಗ, ಫಾತಿಮಾ ಅವರು ಹೆಚ್ಚಾಗಿ ಮನೆಯ ಕೆಲಸಗಳು ಮತ್ತು ಮಗನ ಪೋಷಣೆಗೆ ಅಂಟಿಕೊಂಡಿದ್ದರು. ಆದರೆ, ಪತಿಯ ನಿಧನದ ನಂತರ ಅನಿವಾರ್ಯವಾಗಿ ಅವರು ರಾಜಕೀಯ ಪ್ರವೇಶಿಸಿದರು. ಅವರನ್ನು ಕ್ಷೇತ್ರದ ಜನರು ಗೆಲ್ಲಿಸಿದ್ದು, ಅವರ ಜವಾಬ್ದಾರಿಯನ್ನೂ ಹೆಚ್ಚಿಸಿತು. ಬಳಿಕ, ಸಿಎಎ, ಹಿಜಾಬ್ ನಿಷೇಧದ ವಿರೋಧಿ ಹೋರಾಟಗಳಲ್ಲಿ ಸಕ್ರಿಯರಾದರು. ಮಾತ್ರವಲ್ಲದೆ, ಜನಪರವಾಗಿ ದನಿ ಎತ್ತಿದರು.

“ನನ್ನ ಪತಿ ರಾಜಕೀಯದಲ್ಲಿದ್ದಾಗ, ಅವರ ಪರವಾಗಿ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಿದೆ. ವಿಶೇಷವಾಗಿ, ಮುಸ್ಲಿಂ ಮಹಿಳಾ ಮತದಾರರನ್ನು ಭೇಟಿ ಮಾಡುತ್ತಿದ್ದೆ. ಆಗ, ಅನೇಕ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದರು. ಆದರೆ, ಏನನ್ನಾದರೂ ಮಾಡಬಹುದಾದ ಸ್ಥಾನದಲ್ಲಿ ನಾನಿರಲಿಲ್ಲ” ಎಂದು ಹೇಳುತ್ತಾರೆ ಫಾತಿಮಾ.

ಆದರೆ, 2018ರಲ್ಲಿ ಶಾಸಕಿಯಾಗಿ ಆಯ್ಕೆಯಾದ ಬಳಿಕ ಜೀವನವು ಹೊಸ ಅಲೆಯೊಂದಿಗೆ ಬೆಸೆದುಕೊಡಿತು. ಜನರು ನನ್ನನ್ನು ಗುರುತಿಸಲು ಪ್ರಾರಂಭಿಸಿದರು. ತಾವು ರಾಜಕೀಯವಾಗಿ ಪರಿವರ್ತನೆ ಕಾಣಲು ಸಾಧ್ಯವಾಯಿತು” ಎಂದು ಅವರು ಹೇಳುತ್ತಾರೆ.

ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾದ ಬಳಿಕ ಕನೀಜ್ ಫಾತಿಮಾ ಅವರು ಜನರ ಒಡನಾಟದಲ್ಲಿದ್ದರು. ಅದೇ ವೇಳೆಗೆ, 2020ರಲ್ಲಿ ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೊಳಿಸಿತು. ಸಿಎಎ ವಿರುದ್ಧ ಅವರು ಬೀದಿಗಿಳಿದು ಹೋರಾಟ ಮಾಡಿದರು. ಗುಲ್ಬರ್ಗದಲ್ಲಿ ಹೋರಾಟವನ್ನು ಸಂಘಟಿಸಿ, ಮುನ್ನಡೆಸಿದರು.

ಈ ವರದಿ ಓದಿದ್ದೀರಾ?: ಚುನಾವಣೆ 2023 | ಬಿಜೆಪಿಗೆ ಬದಲಾವಣೆಯ ಪಾಠ ಹೇಳಿದ ಕರ್ನಾಟಕ

ಸಿಎಎ ಹೋರಾಟ ವ್ಯಾಪಕವಾಗಿದ್ದ ಸಮಯದಲ್ಲಿಯೇ ಕೊರೊನಾ ದೇಶವನ್ನು ಆಕ್ರಮಿಸಿತು. ಆ ಸಮಯದಲ್ಲಿ ತಮ್ಮ ಕ್ಷೇತ್ರದಲ್ಲಿ ಜನರಿಗಾಗಿ ದುಡಿದರು. ಕೊರೊನಾ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಕ್ಷೇತ್ರದ ಜನರಿಗೆ ನೆರವು ನೀಡಿದರು.

ಕೊರೊನಾ ಹಾವಳಿ ತಣ್ಣಗಾಗುತ್ತಿದ್ದಂತೆಯೇ ರಾಜ್ಯ ಬಿಜೆಪಿ ಸರ್ಕಾರ 2022ರಲ್ಲಿ ಹಿಜಾಬ್‌ ನಿಷೇಧದ ವಿವಾದ ಸೃಷ್ಟಿಸಿತು. ಅದರ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ಫಾತಿಮಾ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಿದರು.

“ಇಂದು ನಾನು ಶಾಸಕಿ ಮತ್ತು ರಾಜಕಾರಣಿ. ಹಿಜಾಬ್ ನಿಷೇಧದ ಮೂಲಕ ಅಥವಾ ಸಿಎಎ-ಎನ್‌ಆರ್‌ಸಿ ಮೂಲಕ ಕರ್ನಾಟಕದ ಜನರು ತುಳಿತಕ್ಕೊಳಗಾದಾಗಲೆಲ್ಲ ನಾನು ಧ್ವನಿ ಎತ್ತಿದ್ದೇನೆ” ಎಂದು ಕನೀಜ್ ಹೇಳಿದರು.

“ಹಿಜಾಬ್ ನಿಷೇಧವನ್ನು ಕಾಂಗ್ರೆಸ್‌ ಸರ್ಕಾರ ತೆಗೆದುಹಾಕುತ್ತದೆ ಮತ್ತು ಮುಸ್ಲಿಮರಿಗೆ 2ಬಿ ಮೀಸಲಾತಿಯನ್ನು ಮರಳಿ ತರುತ್ತದೆ” ಎನ್ನುವುದು ಅವರ ವಿಶ್ವಾಸ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಯುವತಿಗೆ ಕಿರುಕುಳ ನೀಡಿದವನಿಗೆ ಚಪ್ಪಲಿ ಏಟು

ತನ್ನನ್ನು ಹಿಂಬಾಲಿಸಿ ಬಂದು ಕಿರುಕುಳ ನೀಡಿದ್ದಾನೆಂದು ಆರೋಪಿಸಿ ಯುವತಿಯೊಬ್ಬಳು ಯುವಕನಿಗೆ ಚಪ್ಪಲಿಯಿಂದ...

ಬಳ್ಳಾರಿ | ʼಕೈಗಾರಿಕೆ ಆರಂಭಿಸಿ, ಇಲ್ಲವೇ ಭೂಮಿ ಬಿಡಿʼ; ಸಂತ್ರಸ್ತ ರೈತರ ಹೋರಾಟ

ಬಿಎಸ್‌ಎಎಲ್ ಸ್ಟೀಲ್ ಕೈಗಾರಿಕೆಗಾಗಿ 1995 ಹಾಗೂ 1998ರಲ್ಲಿ ಭೂಮಿ ಕಳೆದುಕೊಂಡು ವಂಚನೆಗೊಳಗಾಗಿರುವ...

ಬಿಜೆಪಿ ಆತ್ಮಾವಲೋಕನ : ಕೆ ಸುಧಾಕರ್ ಕುಯಿಲು, ಎಂಟಿಬಿ ಹುಯಿಲು!

ಬಿಜೆಪಿಯ ಆತ್ಮಾವಲೋಕನ ಸಭೆಯಲ್ಲಿ ಎಂಟಿಬಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಕೆ. ಸುಧಾಕರ್...

ಧಾರವಾಡ | ಶಿವಾಜಿ ಕುರಿತು ಅವಹೇಳನಕಾರಿ ಪೋಸ್ಟ್; ಯುವಕನ ಬಂಧನ

ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಶಿವಾಜಿ ಕುರಿತು ಅವಹೇಳನಕಾರಿ ಪೋಸ್ಟ್‌ ಹಾಕಿದ್ದ ಯುವಕನನ್ನು...