ನಟ ಕಿಚ್ಚ ಸುದೀಪ್ - ನಿರ್ಮಾಪಕ ಕುಮಾರ್ ವಿವಾದ ಕನ್ನಡ ಚಿತ್ರರಂಗದ ಸದ್ಯದ ದಿಕ್ಕೆಟ್ಟ ಸ್ಥಿತಿಯನ್ನು ತೋರುತ್ತದೆ. ಇವರಿಗೆ ಡಾ.ರಾಜ್ ಮಾದರಿಯಾಗಬೇಕಿದೆ. ಅಣ್ಣಾವ್ರು ನಿರ್ಮಾಪಕರನ್ನು ಅನ್ನದಾತ ಎನ್ನುತ್ತಿದ್ದರು. ಪ್ರೇಕ್ಷಕರನ್ನು ಅಭಿಮಾನಿ ದೇವರು ಎನ್ನುತ್ತಿದ್ದರು. ಅಂಥ ಮೌಲ್ಯಪ್ರಜ್ಞೆಯ ಕೊರತೆ ಇಂದು ಚಿತ್ರರಂಗದಲ್ಲಿ ಎದ್ದು ಕಾಣುತ್ತಿದೆ.
ಕನ್ನಡ ಚಿತ್ರರಂಗದಲ್ಲೀಗ ವಿವಾದಗಳ ಬಿರುಗಾಳಿ ಜೋರಾಗಿ ಬೀಸುತ್ತಿದೆ. ಮೊನ್ನೆ ಮೊನ್ನೆಯಷ್ಟೇ ಥಿಯೇಟರ್ ಮಾಲೀಕರು, ವಿತರಕರು ಸ್ಟಾರ್‌ಗಳ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದರು. ಸ್ಟಾರ್‌ಗಳು ಸಿನಿಮಾ ಮಾಡುವುದು ತುಂಬಾ ತಡವಾಗುತ್ತಿದ್ದು, ಪರಿಸ್ಥಿತಿ ಹೀಗೇ ಮುಂದುವರೆದರೆ, ತಾವು ಥಿಯೇಟರ್‌ಗಳನ್ನು ಮುಚ್ಚಬೇಕಾಗುತ್ತದೆ ಎಂದು ಅಳಲು ತೋಡಿಕೊಂಡಿದ್ದರು. ಇದೀಗ ನಟ ಕಿಚ್ಚ ಸುದೀಪ್ ವಿರುದ್ಧ ಕೆಲವು ನಿರ್ಮಾಪಕರು ಬಹಿರಂಗವಾಗಿ ಸಂಘರ್ಷಕ್ಕಿಳಿದಿರುವುದು ವಿವಾದದ ಸ್ವರೂಪ ಪಡೆದುಕೊಂಡಿದೆ.
ಸುದೀಪ್ ವಿರುದ್ಧ ಮೊದಲು ಬೀದಿಗೆ ಬಂದು ಹೇಳಿಕೆ ನೀಡಿದವರು ನಿರ್ಮಾಪಕ, ವಿತರಕ ಎನ್ ಕುಮಾರ್. ನಟ ಸುದೀಪ್ ಸಿನಿಮಾ ಮಾಡುವುದಾಗಿ ತಮ್ಮಿಂದ ಹಣ ಪಡೆದಿದ್ದು, ಈಗ ಹಣವನ್ನೂ ಹಿಂದಿರುಗಿಸದೇ, ಸಿನಿಮಾವನ್ನೂ ಮಾಡಿಕೊಡದೇ ತೊಂದರೆ ಕೊಡುತ್ತಿದ್ದಾರೆ ಎನ್ನುವುದು ಕುಮಾರ್ ಆರೋಪ. ಸಿನಿಮಾ ನಿರ್ಮಾಣದಿಂದ ತಾನು ಭಾರೀ ನಷ್ಟಕ್ಕೊಳಗಾಗಿದ್ದು, ಮನೆಯನ್ನೂ ಮಾರಿಕೊಂಡಿದ್ದೇನೆ ಎಂದು ಅವರು ಗೋಳಾಡಿದ್ದಾರೆ.
ಮೇಲ್ನೋಟಕ್ಕೆ ಕುಮಾರ್ ಅವರ ಮಾತು ಕೇಳಿದರೆ, ನಿರ್ಮಾಪಕರಾದ ಅವರು ನೊಂದಿದ್ದಾರೆ ಎಂದು ಅನ್ನಿಸುತ್ತದೆ. ಆದರೆ, ವಿಷಯ ಅಷ್ಟು ಸರಳವಾಗಿಲ್ಲ ಮತ್ತು ಕುಮಾರ್ ಕೂಡ ಅಂಥ ನಿಷ್ಪಾಪಿಯೇನಲ್ಲ; ಒಂದು ಕಾಲದಲ್ಲಿ ಕನ್ನಡ ಚಿತ್ರರಂಗ ಪ್ರಭಾವಿ ವ್ಯಕ್ತಿ; ಜಯಣ್ಣ-ಭೋಗೇಂದ್ರ ಜೋಡಿ 110 ಥಿಯೇಟರ್‌ಗಳ ಮೇಲೆ ಹಿಡಿತ ಹೊಂದಿದ್ದರೆ, ಎನ್ ಕುಮಾರ್ 120 ಥಿಯೇಟರ್‌ಗಳ ಮೇಲೆ ಹಿಡಿತ ಹೊಂದಿದ್ದರು. ಇವರಿಬ್ಬರೇ ಕನ್ನಡದ ಬಹುತೇಕ ಚಿತ್ರಗಳ ವಿತರಣೆಯನ್ನು ಮಾಡುತ್ತಿದ್ದರು. ತನ್ಮೂಲಕ ಚಿತ್ರರಂಗದ ಮೇಲೆ ಪ್ರಾಬಲ್ಯ ಸಾಧಿಸಿದ್ದರು.
ಆದರೆ, ಅದೇನಾಯಿತೋ, ಎಲ್ಲಿ ಲೆಕ್ಕಾಚಾರ ತಪ್ಪಿತೋ, ಎನ್ ಕುಮಾರ್ ಕ್ರಮೇಣ ನಷ್ಟಕ್ಕೊಳಗಾದರು. ಅವರೇ ಹೇಳುವಂತೆ, ಮನೆ ಮಠ ಮಾರಿಕೊಂಡು ಕಷ್ಟಕ್ಕೆ ಸಿಲುಕಿದರು. ಸುದೀಪ್ ಸಹಕರಿಸಿದರೆ, ಅವರನ್ನು ಹಾಕಿಕೊಂಡು ಒಂದು ಸಿನಿಮಾ ಮಾಡಿ ನಷ್ಟದ ಕೂಪದಿಂದ ಹೊರಬರಬಹುದು ಎನ್ನುವುದು ಅವರ ಲೆಕ್ಕಾಚಾರವಿರಬಹುದು. ಅದಾಗದೇ ಇರುವುದಕ್ಕೆ ಅವರು ಸುದೀಪ್ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.
‘ರಂಗ ಎಸ್‌ಎಸ್‌ಎಲ್‌ಸಿ’, ‘ಮುಕುಂದ ಮುರಾರಿ’ ಸೇರಿದಂತೆ ಕುಮಾರ್ ಇಲ್ಲಿಯವರೆಗೆ ಸುದೀಪ್ ಅವರ ನಾಲ್ಕು ಚಿತ್ರಗಳನ್ನು ನಿರ್ಮಿಸಿದ್ದಾರೆ; ಅವರ ಸುಮಾರು ಹತ್ತು ಚಿತ್ರಗಳನ್ನು ವಿತರಣೆ ಮಾಡಿದ್ದಾರೆ. ಇವುಗಳಲ್ಲಿ ಹಲವು ಚಿತ್ರಗಳಿಂದ ತಮಗೆ ನಷ್ಟವುಂಟಾಗಿದ್ದು, ಸುದೀಪ್ ತಮಗೆ ಸ್ಪಂದಿಸುತ್ತಿಲ್ಲ ಎನ್ನುವುದು ಅವರ ಆಪಾದನೆ.
ಇದಕ್ಕೆ ಸುದೀಪ್ ಲಿಖಿತ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಆಪ್ತ ಜಾಕ್ ಮಂಜು ಮೂಲಕ ಕೂಡ ಉತ್ತರ ಕೊಡಿಸಿದ್ದಾರೆ. ಅವರು ಹೇಳಿದಂತೆ, ಸುದೀಪ್, ಕುಮಾರ್ ಅವರಿಗಾಗಿ ಮೊದಲು ಸಿನಿಮಾ ಮಾಡಲು ಒಪ್ಪಿಕೊಂಡಿದ್ದರು. ಆದರೆ, ಒಮ್ಮೆ ನಿರ್ದೇಶಕ ಹೆಚ್ಚು ಸಂಭಾವನೆ ಕೇಳಿದ ಎಂದು, ಮತ್ತೊಮ್ಮೆ ಚಿತ್ರದ ಬಜೆಟ್ ಹೆಚ್ಚಾಯಿತು ಎಂದು ಕುಮಾರ್ ಸುದೀಪ್ ಅವರ ಪ್ರಾಜೆಕ್ಟ್‌ಗಳನ್ನು ನಿರಾಕರಿಸಿದ್ದರಂತೆ. ಹೋಗಲಿ, ಕಷ್ಟಕ್ಕೆ ಇರಲಿ ಎಂದು ಸುದೀಪ್ ಐದು ಕೋಟಿ ರೂಪಾಯಿ ಕೊಡಲು ಹೋದರೂ ಕುಮಾರ್ ಅದನ್ನು ಸ್ವೀಕರಿಸಲಿಲ್ಲವಂತೆ.
ಕುಮಾರ್ ಜೊತೆಗೆ ಮತ್ತೊಬ್ಬ ನಿರ್ಮಾಪಕ ರೆಹಮಾನ್ ಕೂಡ ಸುದೀಪ್ ವಿರುದ್ಧ ಸಮರಕ್ಕಿಳಿದಿದ್ದಾರೆ. ತಾನು ಸುದೀಪ್‌ಗೆ ನೀಡಿದ್ದ ಮುಂಗಡವನ್ನು ಪೂರ್ತಿಯಾಗಿ ಹಿಂತಿರುಗಿಸಿಲ್ಲ ಹಾಗೂ ರೀಮೇಕ್ ಮಾಡೋಣ ಎಂದು ಹೇಳಿ ತನ್ನಿಂದ 35 ಲಕ್ಷ ನಷ್ಟವುಂಟುಮಾಡಿದ್ದಾರೆ. ಅದನ್ನೆಲ್ಲ ಬಡ್ಡಿ ಸಮೇತ ಕಟ್ಟಿಕೊಡಲಿ ಎನ್ನುವುದು ರೆಹಮಾನ್ ವಾದ.
ಸುದೀಪ್ ಅವರು ಕುಮಾರ್ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಆದರೆ, ಅವುಗಳಿಂದ ಸಮಸ್ಯೆ ಇನ್ನಷ್ಟು ದೊಡ್ಡದಾಗುವ ಲಕ್ಷಣಗಳು ಕಾಣುತ್ತಿವೆ. ಕುಮಾರ್ ಪರವಾಗಿ ಒಂದಿಷ್ಟು ನಿರ್ಮಾಪಕರು ನಿಂತರೆ, ಸುದೀಪ್ ಪರ ಅವರ ಅಭಿಮಾನಿಗಳು ಒಂದೆರಡು ಕಡೆ ಬೀದಿಗಿಳಿದು ಪ್ರತಿಭಟನೆ ಮಾಡಿದ್ದಾರೆ.
ಚಿತ್ರರಂಗದಲ್ಲಿ ಗೆಲುವೊಂದೇ ಅಂತಿಮ ಸೂತ್ರ. ಯಾವ ನಿರ್ದೇಶಕ, ನಟ, ನಿರ್ಮಾಪಕ ಗೆಲ್ಲುತ್ತಾನೋ ಅವನಿಗೇ ಮಣೆ, ಮನ್ನಣೆ. ಗೆಲ್ಲುವವರೆಗೆ ಇರದ ಸಮಸ್ಯೆಗಳು ಸೋಲತೊಡಗಿದೊಡನೆ ಧುತ್ತನೇ ಪ್ರತ್ಯಕ್ಷವಾಗುತ್ತವೆ. ಅಂಥ ಸಂದರ್ಭಗಳಲ್ಲಿ ಸ್ಟಾರ್‌ಗಳು ನಿರ್ಮಾಪಕರು, ವಿತರಕರ ನೆರವಿಗೆ ಧಾವಿಸುವುದು ಎಲ್ಲ ಚಿತ್ರರಂಗಗಳಲ್ಲೂ ನಡೆದಿದೆ.
ರಜನಿಕಾಂತ್ ಹಲವು ಬಾರಿ ತನ್ನ ನಿರ್ಮಾಪಕರು, ವಿತರಕರ ನಷ್ಟ ಭರಿಸಿಕೊಟ್ಟಿದ್ದಿದೆ. ಕೆಲವು ಬಾರಿ ಹಾಗೆ ಮಾಡದೇ ವಿವಾದಕ್ಕೂ ಒಳಗಾಗಿದ್ದಿದೆ. ಇತ್ತೀಚೆಗೆ ರಜನಿಯ ‘ದರ್ಬಾರ್’ ಚಿತ್ರದಿಂದ ಅಪಾರ ನಷ್ಟಕ್ಕೊಳಗಾಗಿದ್ದು, ನಷ್ಟ ಭರಿಸದಿದ್ದರೆ ತಾವು ಉಪವಾಸ ಸತ್ಯಾಗ್ರಹ ಮಾಡುವುದಾಗಿ ವಿತರಕರು ಎಚ್ಚರಿಸಿದ್ದರು. ತೆಲುಗಿನ ‘ಆಚಾರ್ಯ’ ಸಿನಿಮಾದಿಂದ 100 ಕೋಟಿಗೂ ಹೆಚ್ಚು ನಷ್ಟಕ್ಕೊಳಗಾದ ವಿತರಕರು ಕೂಡ ಇದೇ ರೀತಿ ನಷ್ಟ ತುಂಬಿಕೊಡಬೇಕೆಂದು ಚಿರಂಜೀವಿಗೆ ಪತ್ರ ಬರೆದಿದ್ದರು. ಚಿತ್ರದ ನಟನೆಗಾಗಿ ತಾನೂ ಹಾಗೂ ತನ್ನ ಮಗ ಪಡೆದಿದ್ದ ಸಂಭಾವನೆಯ ಮುಕ್ಕಾಲು ಭಾಗ ಬಿಟ್ಟುಕೊಟ್ಟಿದ್ದಾಗಿ ಚಿರಂಜೀವಿ ನಂತರ ಹೇಳಿದ್ದರು.
ಈ ಸುದ್ದಿ ಓದಿದ್ದೀರಾ: ಹುಟ್ಟುಹಬ್ಬಕ್ಕೆ ʼಸಂಜು ವೆಡ್ಸ್ ಗೀತಾ-2ʼ ಸಿನಿಮಾ ಘೋಷಿಸಿದ ಶ್ರೀನಗರ ಕಿಟ್ಟಿ
ಸದ್ಯಕ್ಕಂತೂ ಕನ್ನಡ ಚಿತ್ರರಂಗ ಸಂಕಷ್ಟದ ಸ್ಥಿತಿಯಲ್ಲಿದೆ. ಉತ್ತಮವಾದ ಸಣ್ಣ ಚಿತ್ರಗಳು ಬರುತ್ತಿವೆಯಾದರೂ, ಅವನ್ನು ನೋಡಲು ಜನ ಥಿಯೇಟರ್‌ಗಳಿಗೆ ಬರುತ್ತಿಲ್ಲ. ಜನರನ್ನು ಚಿತ್ರಮಂದಿರದತ್ತ ಸೆಳೆಯಬಲ್ಲ ಸ್ಟಾರ್ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಇಂಥ ಕ್ಲಿಷ್ಟ ಸ್ಥಿತಿಯಲ್ಲಿ ಸ್ಟಾರ್‌ಗಳು ಹೆಚ್ಚು ಜವಾಬ್ದಾರಿಯಿಂದ, ಬದ್ಧತೆಯಿಂದ ಕೆಲಸ ಮಾಡಬೇಕಾಗುತ್ತದೆ.
ಎನ್ ಕುಮಾರ್ ಬೇಡಿಕೆಯಲ್ಲಿ ಸ್ವಾರ್ಥ ಇದೆ ಎಂದು ಕೆಲವರು ಆಡಿಕೊಳ್ಳುತ್ತಿದ್ದರೆ, ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಏನೆಲ್ಲ ವೇದಾಂತ ಹೇಳುವ ಸುದೀಪ್ ತಮ್ಮ ಚಿತ್ರದ ನಿರ್ಮಾಪಕನ ವಿಚಾರದಲ್ಲಿ ಹಟಮಾರಿ ಧೋರಣೆ ಮಾಡುತ್ತಿದ್ದಾರೆ ಎನ್ನುವ ಭಾವನೆ ಒಂದು ವಲಯದಲ್ಲಿದೆ. ಯಾವುದು ಸರಿ ಯಾವುದು ತಪ್ಪು ಎಂದು ಹೇಳುವವರಿಲ್ಲದೇ ಕನ್ನಡ ಚಿತ್ರರಂಗ ದಿಕ್ಕೆಟ್ಟಿದೆ. ರಾಜ್‌ಕುಮಾರ್ ಅವರು ನಿರ್ಮಾಪಕರನ್ನು ಅನ್ನದಾತ ಎನ್ನುತ್ತಿದ್ದರು. ಪ್ರೇಕ್ಷಕರನ್ನು ಅಭಿಮಾನಿ ದೇವರು ಎನ್ನುತ್ತಿದ್ದರು. ಅದೊಂದು ಮೌಲ್ಯಪ್ರಜ್ಞೆ. ಹಲವು ಸಮಸ್ಯೆಗಳಿಗೆ ಪರಿಹಾರವಾಗುತ್ತಿದ್ದ ಅಂಥ ಮೌಲ್ಯಪ್ರಜ್ಞೆಯ ಕೊರತೆ ಇಂದು ಚಿತ್ರರಂಗದಲ್ಲಿ ಎದ್ದು ಕಾಣುತ್ತಿದೆ.