ಹಾಡಹಗಲೇ ಅಪಹರಣ ಮಾಡಿ, ಲಕ್ಷಾಂತರ ರೂಪಾಯಿ ಹಣ ಸುಲಿಗೆ ಮಾಡುತ್ತಿದ್ದ ಕುಖ್ಯಾತ ಅಪಹರಣಕಾರರ ಕಿಡ್ನ್ಯಾಪರ್ಸ್‌ಗಳನ್ನು ಚಿಕ್ಕಬಳ್ಳಾಪುರ ಪೊಲೀಸರು ಎಡೆಮುರಿಕಟ್ಟಿದ್ದಾರೆ.
ಕಳೆದ ಜೂನ್, ಜುಲೈ ತಿಂಗಳಲ್ಲಿ ನಗರ ಮತ್ತು ನಂದಿ ಹೋಬಳಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ಹಲವು ಅಪಹರಣ, ಸುಲಿಗೆ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು 8 ಮಂದಿ ಕುಖ್ಯಾತ ಅಪಹರಣಕಾರರನ್ನು ಬಂಧಿಸಿದ್ದಾರೆ.
ಗ್ಯಾಂಗ್ ಲೀಡರ್ ಬರ್ಕತ್ ವುಲ್ಲಾ, ಲೋಹಿತ್ ಕುಮಾರ್, ಪ್ರವೀಣ್, ಮಾರುತಿ ಪ್ರಸನ್ನ, ಸಂತೋಷ್, ಭರತ್ ಕುಮಾರ್, ವೆಂಕಟೇಶ್, ಮರುಮಲ್ಲಪ್ಪ ಬಂಧಿತರು. ಬಂಧಿತರಿಂದ 41 ಲಕ್ಷ ರೂ. ನಗದು, 1 ಚಿನ್ನದ ಸರ, ಮಾರುತಿ ಸ್ವಿಷ್ಟ್, ಮಾರುತಿ ಬ್ರಿಜಾ ಹಾಗೂ ಫಾರ್ಚುನರ್ ಕಾರುಗಳು ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಆರೋಪಿಗಳು ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ನಾನಾ ಕೃತ್ಯಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಅದಲ್ಲದೆ ಮಾಜಿ ಸಚಿವ ವರ್ತೂರ್ ಪ್ರಕಾಶ್ ಅಪಹರಣ ಕೃತ್ಯದಲ್ಲೂ ಭಾಗಿಯಾಗಿರುವುದು ತನಿಖೆಯ ವೇಳೆ ತಿಳಿದು ಬಂದಿದೆ.
ಕಳೆದ ಜೂನ್‌ನಲ್ಲಿ ಹಾರೋಬಂಡೆ ಗ್ರಾಮದ ಸಹಕಾರ ಭವನದ ಬಳಿ ವ್ಯಕ್ತಿಯೋರ್ವನನ್ನು ಅಪಹರಿಸಿ 18 ಲಕ್ಷ ರೂ. ನಗದು ಸುಲಿಗೆ ಮಾಡಿದ್ದರು. ಅದಾದ ಬಳಿಕ ಜು.20 ರಂದು ನಂದಿ ಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಚಿಕ್ಕಸಾಗರ ಗ್ರಾಮದ ಬಳಿ ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಯನ್ನು ಅಪಹರಿಸಿ 60 ಲಕ್ಷ ರೂ. ಸುಲಿಗೆ ಮಾಡಿದ್ದರು.
ವಿಶೇಷ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಡಿವೈಎಸ್ಪಿಗಳಾದ ಎನ್.ಶಿವಕುಮಾರ್, ರವಿಕುಮಾರ್, ಪಿಐ ಮಂಜುನಾಥ್, ಕೆ.ಪಿ.ಸತ್ಯಾನಾರಾಯಣ್, ನಾಯಾರ್ಸ್ ಡೈ, ಪ್ರಶಾಂತ್ ವರ್ಣಿ, ಸೂರ್ಯಪ್ರಕಾಶ್, ಶ್ರೀನಿವಾಸ್, ಜನಾರ್ಧನ, ಪಿಎಸ್‌ಐಗಳಾದ ಶರಣಪ್ಪ, ಹರೀಶ್ ಹಾಗೂ ಸಿಬ್ಬಂದಿ ವರ್ಗದವರನ್ನು ಎಸ್‌ಪಿ ಕುಶಾಲ್ ಚೌಕ್ಸೆ ಅಭಿನಂದಿಸಿದ್ದಾರೆ.
