ಹೋಬಳಿ ಘಟಕಗಳು ಕನ್ನಡ ಸಾಹಿತ್ಯ ಪರಿಷತ್‌ನ ಬೇರುಗಳಂತೆ, ಆ ಬೇರು ಗಟ್ಟಿಗೊಂಡರೆ ಪರಿಷತ್ತು ಸದೃಢಗೊಳ್ಳುತ್ತದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ ಪಿ ಕೇಶವ ಕಾಮತ್ ನುಡಿದರು.
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕು ಗಡಿಭಾಗ ಕುಟ್ಟ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಮಾತನಾಡಿದರು.
“ಗಡಿಭಾಗದ ಕನ್ನಡೇತರರಿಗೆ ಕನ್ನಡ ಕಲಿಸುವ ಕೆಲಸ ಆಗಬೇಕಿದೆ. ಅಲ್ಲದೆ ಎಲ್ಲರನ್ನೂ ಒಗ್ಗೂಡಿಸಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಪರಿಷತ್ತಿನ ಸದಸ್ಯತ್ವ ಮತ್ತು ದತ್ತಿ ಸ್ಥಾಪನೆಗೆ ಹೋಬಳಿ ಸದಸ್ಯರು ಮುಂದಾಗಬೇಕು” ಎಂದು ಕರೆ ನೀಡಿದರು.
ಉಳುವಂಗಡ ಕಾವೇರಿ ಉದಯ್ ಮಾತನಾಡಿ, ಮುಂದಿನ ತಿಂಗಳಿನಲ್ಲಿ ಶ್ರೀಮಂಗಲ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಎರಡು ದತ್ತಿ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದು, ಅದರ ಸಂಕ್ಷಿಪ್ತ ರೂಪುರೇಷೆ ವಿವರಿಸಿದರು. ಶ್ರೀಮಂಗಲ ಹೋಬಳಿಯ ಇನ್ನಿತರ ಸಂಘ ಸಂಸ್ಥೆಗಳ ಒಡಗೂಡಿ ಕಾರ್ಯಕ್ರಮ ನಡೆಸಲು ಆಡಳಿತ ಮಂಡಳಿಯ ಸಹಕಾರ ಕೋರಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಜನಪದ ಶ್ರೀ ಪ್ರಶಸ್ತಿ ಪುರಸ್ಕೃತ ಜಿ ಸಿ ಮಂಜಪ್ಪಗೆ ಸಿಗುವುದೇ ರಾಜ್ಯೋತ್ಸವ ಪ್ರಶಸ್ತಿ?
ಹೋಬಳಿ ಕಾರ್ಯದರ್ಶಿ ಸುಮನ್ ಅಜ್ಜಮಾಡ, ಕೋಶಾಧಿಕಾರಿ ಎಸ್ ಎಂ ರಾಜೇಂದ್ರ ಪ್ರಸಾದ್ ನಿರ್ದೇಶಕರುಗಳಾದ ಎ ಪಿ ಸಾವಿತ್ರಿ, ಪೆಲ್ವಿನ್ ಪೂಣಚ್ಚ, ಹೆಚ್ ಜಿ ಪ್ರತಾಪ್, ಪಿ ಮುರುಗನ್, ಜೆ ಬಿ ರಮೇಶ್ ನಾಗರಹೊಳೆ, ಸದಸ್ಯ ಉಳುವಂಗಡ ಉದಯ್ ಇದ್ದರು.