ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವುದು ಸವಾಲಿನ ಕೆಲಸ. ಮಾನವ ಮತ್ತು ವನ್ಯಜೀವಿ ಸಂಘರ್ಷವನ್ನು ತಡೆಯಬೇಕಿದೆ. ಅರಣ್ಯ ರಕ್ಷಕರಿಗೆ ಆರೋಗ್ಯ ಸೇವೆ ಸೇರಿದಂತೆ ಕಲ್ಯಾಣ ಸೇವೆಗಳು ತಲುಪಬೇಕು. ಈ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರು, ತಮ್ಮ ಸುರಕ್ಷತೆ ಜತೆಗೆ ಸಾರ್ವಜನಿಕರ ಸುರಕ್ಷತೆಯ ಕಡೆಗೂ ಗಮನಹರಿಸಬೇಕಿದೆ ಎಂದು ನಿವೃತ್ತ ಏರ್ ಮಾರ್ಷಲ್ ಜನರಲ್ ಕೆ.ಸಿ ಕಾರ್ಯಪ್ಪ ಹೇಳಿದ್ದಾರೆ.
ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ ಮಾತನಾಡಿ, “ಅರಣ್ಯವಿದ್ದಲ್ಲಿ ಉತ್ತಮ ಪರಿಸರ ಉಳಿಯಲು ಸಾಧ್ಯ. ಒಳ್ಳೆಯ ಪರಿಸರ ಇದ್ದಲ್ಲಿ ಮಳೆ-ಬೆಳೆ ಕಾಣಲು ಸಾಧ್ಯ. ಅರಣ್ಯ ಇಲಾಖೆಯ ಸಿಬ್ಬಂದಿ ದೇಶದ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ಮಾಡಿದ ತ್ಯಾಗ ಮತ್ತು ಬಲಿದಾನಗಳ ಸ್ಮರಣೆಗಾಗಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯನ್ನ ದೇಶಾದ್ಯಂತ ಆಚರಿಸಲಾಗುತ್ತದೆ” ಎಂದರು.
ಅಲ್ಲದೆ, ಅರಣ್ಯ ಹುತಾತ್ಮ ಸ್ಮಾರಕಕ್ಕೆ ಹೂಗುಚ್ಛ ಸಮರ್ಪಿಸಿ, ಗೌರವ ಸಲ್ಲಿಸಲಾಯಿತು. ಈ ವೇಳೆ ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ತ್ರಿಪಾಠಿ, ಜಿ.ಪಂ.ಸಿಇಒ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್ ಬಾಬು, ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ, ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಂ.ಶರಣಬಸಪ್ಪ, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್.ಚಂಗಪ್ಪ ಇತರರು ಉಪಸ್ಥಿತರಿದ್ದರು.
ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ ಅವರು ಅರಣ್ಯ ಹುತಾತ್ಮರ ದಿನಾಚರಣೆಯ ಪಕ್ಷಿನೋಟ ಮತ್ತು ಅರಣ್ಯ ಹುತಾತ್ಮರ ಸ್ಮರಣೆಯನ್ನು ಓದಿದರು. ಜೋಧುಪುರ್ನ ಮಹಾರಾಜ ಅಭಯ್ಸಿಂಗ್ನ ಅರಮನೆಗಾಗಿ ಆತನ ಸೈನಿಕರು ಕೇಜರ್ಲಿ ಪ್ರಾಂತ್ಯದಲ್ಲಿ ಬೆಳೆದಿದ್ದ ಮರಗಳನ್ನು ಕಡಿಯಲು ಮುಂದಾದಾಗ, ಬಿಷ್ಣೋಯಿ ಸಮುದಾಯದ ಪುರುಷ, ಮಹಿಳೆ ಮತ್ತು ಮಕ್ಕಳು ಸಹ ವಿರೋಧಿಸಿದ್ದರು. ಈ ವೇಳೆ ವಿರೋಧ ತೋರಿದ 363 ಮಂದಿಯನ್ನು, 1730ರ ಸೆಪ್ಟೆಂಬರ್, 11 ರಂದು ಕೊಲ್ಲಲಾಯಿತು.
ಮರಗಳ ಸಂರಕ್ಷಣೆಗಾಗಿ ಪ್ರಾಣ ಬಿಟ್ಟ ಬಿಷ್ಣೋಯಿಗಳ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಲು ಭಾರತ ಸರ್ಕಾರ ಸೆಪ್ಟೆಂಬರ್, 11ನ್ನು ‘ರಾಷ್ಟ್ರೀಯ ಅರಣ್ಯ ಹುತಾತ್ಮ ದಿನʼ ಎಂದು ಘೋಷಿಸಿದೆ.